ಮತ್ತೊಮ್ಮೆ ಸಂಸತ್ ಪ್ರವೇಶಿಸಲಿರುವ ಪ್ರಸಾದ್

ತಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಹೆಚ್ಚು ಮತಗಳ ಅಂತರದಿಂದ ಜಯಗಳಿಸುವ ಮೂಲಕ ಸಂಸತ್ ಪ್ರವೇಶ ಮಾಡಲಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಮೋದಿ ಪರವಾದ ಅಲೆ ಇದೆ. ಪ್ರಚಾರಕ್ಕೆ ಹೋದ ಕಡೆಯಲ್ಲ ಪಕ್ಷದ ಪರ ಒಲವು ವ್ಯಕ್ತವಾಗುತ್ತಿದೆ ಎಂದರು.

ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತದಾರರ ನಾಡಿ ಮಿಡಿತವನ್ನು ಪ್ರಸಾದ್ ಅರಿತಿದ್ದಾರೆ. ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎಂದರು.

ಬಳಿಕ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸದಾನಂದ, ಪುರಸಭಾ ಸದಸ್ಯರಾದ ಕಿರಣ್, ಅರ್ಜುನ್, ಪರಮೇಶ, ತಾಪಂ ಸದಸ್ಯರಾದ ಮೂಗೂರು ಚಂದ್ರಶೇಖರ್, ರತ್ನಾರಾಜ್, ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ, ಮುಖಂಡರಾದ ಡಾ.ಮೋಹನ್, ಶಿವಪ್ರಸಾದ್, ಕರೋಹಟ್ಟಿ ಮಹದೇವಯ್ಯ, ಸೋಸಲೆ ಪರಶಿವಮೂರ್ತಿ, ದಯಾನಂದ ಪಟೇಲ್ ಹಾಜರಿದ್ದರು.