ಸರ್ಕಾರಿ ಶಾಲೆ ದತ್ತು ಪಡೆದ ಪ್ರಣೀತಾ

ಬೆಂಗಳೂರು: ಸೆಲೆಬ್ರಿಟಿಗಳ ಜನ್ಮದಿನ ಅಂದರೆ ಅಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅದೇ ರೀತಿ ಇಂದು (ಅ. 17) 26ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿರುವ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಸಹ ವಿಶೇಷವಾದದ್ದನ್ನೇ ಮಾಡಲು ಹೊರಟಿದ್ದಾರೆ. ಅಂದರೆ, ಹಾಸನ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಏಳಿಗೆಗಾಗಿ ಶ್ರಮಿಸಲಿದ್ದಾರೆ. ಪ್ರತಿ ವರ್ಷ ಅದೇ ಕೇಕ್ ಕಟಿಂಗ್, ಅಭಿಮಾನಿಗಳ ಜತೆ ಸೆಲ್ಪಿ ಪೋಸ್ ನೀಡುತ್ತಿದ್ದ ಪ್ರಣೀತಾ, ಹಳ್ಳಿಗಾಡಿನ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ. ಆ ಕಾರಣಕ್ಕೆ ಶಾಲೆ ದತ್ತು ಪಡೆವ ನಿರ್ಧಾರಕ್ಕೆ ಬಂದಿದ್ದಾರೆ.

ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಪ್ರಚಾರಕ ಅನಿಲ್ ಶೆಟ್ಟಿ ಕಳೆದ ಕೆಲ ತಿಂಗಳಿಂದ ಇಂಥದೊಂದು ಅಭಿಯಾನವನ್ನು ಆರಂಭಿಸಿದ್ದಾರೆ. ಅದಕ್ಕೆ ಪ್ರಣೀತಾ ಸುಭಾಷ್ ಸೇರ್ಪಡೆಗೊಂಡಿದ್ದು, ಶಾಲೆಯ ಅಭಿವೃದ್ಧಿಗೆ 5 ಲಕ್ಷ ರೂ. ಮೀಸಲಿಟ್ಟಿದ್ದಾರೆ. ‘ಈ ವರ್ಷದ ಜನ್ಮದಿನದ ಆಚರಣೆ ನನ್ನ ಪಾಲಿನ ಅತ್ಯುತ್ತಮ ಘಳಿಗೆ. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದ ನಾನು, ಈ ಸಲ ಒಂದು ಶಾಲೆಯನ್ನು ದತ್ತು ಪಡೆದಿದ್ದೇನೆ. ಈ ಹಿಂದೆಯೇ ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಯ ಸ್ಥಿತಿ ಬಗ್ಗೆ ನೋಡಿ ತಿಳಿದುಕೊಂಡಿದ್ದೆ. ಅವುಗಳ ಅಭಿವೃದ್ಧಿಗಾಗಿ ನಮ್ಮ ಕೈಲಾದ ಸೇವೆ ಮಾಡಬೇಕೆಂದುಕೊಂಡಿದ್ದೆ. ಆ ಕನಸೀಗ ಸಾಕಾರಗೊಂಡಿದೆ’ ಎನ್ನುತ್ತಾರವರು. ಅಂದಹಾಗೆ, ಶಾಲೆ ಆಯ್ಕೆ ವಿಚಾರದಲ್ಲಿ ನುರಿತ ತಂಡವೇ ಕೆಲಸ ಮಾಡುತ್ತಿದೆ. ಈಗಾಗಲೇ ಹಾಸನ ಜಿಲ್ಲೆಯಲ್ಲಿ ಮೂರು ಶಾಲೆಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಅವುಗಳಲ್ಲೊಂದನ್ನು ಪ್ರಣೀತಾ ಆಯ್ದುಕೊಳ್ಳಲಿದ್ದಾರೆ. ಮೂಲ ಸೌಲಭ್ಯಗಳಾದ, ನೀರು, ಶೌಚಗೃಹ ಸೇರಿ ಕಟ್ಟಡ ದುರಸ್ತಿ, ಪೇಂಟಿಂಗ್​ನಂಥ ಕೆಲಸಗಳು ನಡೆಯಲಿವೆ. ಶಿಕ್ಷಕರ ಕೊರತೆ ಇದ್ದಲ್ಲಿ, ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ಆಯ್ಕೆ ಮಾಡಿ ಸಂಬಳವನ್ನೂ ನೀಡಲು ಯೋಜನೆ ರೂಪಿಸಲಾಗಿದೆ. ಪ್ರಣೀತಾ ಅವರ ಈ ಕಾರ್ಯಕ್ಕೆ ಚಿತ್ರರಂಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳನ್ನೂ ದತ್ತು ತೆಗೆದುಕೊಳ್ಳಲಿದ್ದೇನೆ. ನಟಿ ರಾಗಿಣಿ ದ್ವಿವೇದಿ, ‘ಹೆಬ್ಬುಲಿ’ ಚಿತ್ರ ನಿರ್ವಪಕ ಉಮಾಪತಿ ಕೂಡ ಶಾಲೆ ದತ್ತು ಪಡೆಯಲು ಮನಸು ಮಾಡಿದ್ದಾರೆ.

| ಪ್ರಣೀತಾ ನಟಿ

https://www.instagram.com/p/Bo_sHMWgJFW/?taken-by=pranitha.insta