ಪ್ರಾಣದ ಆಯಾಮವೇ ಪ್ರಾಣಾಯಾಮ

ಪ್ರಾಣಾಯಾಮ ಎಂಬುದು ಒಂದು ಸಮಾಸ ಪದ. ಪ್ರಾಣಸ್ಯ + ಆಯಾಮಃ = ಪ್ರಾಣಾಯಾಮಃ. ಪ್ರಾಣ ಎಂದರೆ ಉಸಿರು ಎಂದೂ ಅರ್ಥ. ಶ್ವಾಸೋಚ್ಛಾ್ವಸ ಕ್ರಿಯೆ ಇದರ ಲಕ್ಷಣ. ಜೀವನೋತ್ಸಾಹ, ಜೀವಕಳೆ (ತೇಜಸ್ಸು), ಸಾಮರ್ಥ್ಯ(ಶಕ್ತಿ ಸಂಪನ್ನತೆ) ಅಥವಾ ಚೈತನ್ಯ ಇದರ ಗುಣಗಳು. ಪ್ರಾಣಾಯಾಮವೆಂದರೆ ಉಸಿರನ್ನು ನಿಡಿದಾಗಿಸಿಕೊಳ್ಳುವುದು, ಎಳೆದು ಹಿಗ್ಗಿಸುವುದು ಹಾಗೂ ಸಂಯಮಕ್ಕೆ ತರುವುದು. ಅಂದರೆ ಒಂದು ರೀತಿಯ ನಿಯಂತ್ರಣಕ್ಕೆ ತರುವುದು.

ಉಸಿರನ್ನು ನಿಯಂತ್ರಣಕ್ಕೆ ತರುವುದು ಎಂದರೇನು? ಉಸಿರಾಟದಲ್ಲಿ ಪ್ರಾಣ ವಾಯುವಿನ ಸ್ವಿಕಾರ ಮತ್ತು ದೇಹದೊಳಗಿನ ಉಸಿರಿನ ಹೊರಚೆಲ್ಲುವಿಕೆ ಎಂಬ ಎರಡು ಕ್ರಿಯೆಗಳು ಜರಗುತ್ತವೆ. ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುವಾಗ (ಪೂರಕ) ಪ್ರಾಣವಾಯು ಒಳಪ್ರವೇಶಿಸಿ ಶ್ವಾಸಕೋಶ ಹಿಗ್ಗಿ ಇಡೀ ದೇಹದ ವ್ಯವಸ್ಥೆ ಚುರುಕುಗೊಳ್ಳುತ್ತದೆ. ಒಂದು ವಿಧದ ಚೈತನ್ಯ, ನಮ್ಮ ದೇಹದ ಅಂಗಾಂಗಗಳಿಗೆಲ್ಲ ಹರಡಿಕೊಳ್ಳುತ್ತದೆ. ನಿಧಾನಗತಿಯಲ್ಲಿ ಉಸಿರನ್ನು ಹೊರಚೆಲ್ಲುವುದರಿಂದ (ರೇಚಕ) ದೇಹದೊಳಗಿನ ದೂಷಿತ ವಾಯು ಸಂಪೂರ್ಣವಾಗಿ ಹೊರಬೀಳುತ್ತದೆ.

ನಿತ್ಯವೂ ಎಷ್ಟೋ ಸಲ ನಮ್ಮ ಅರಿವಿಗೆ ಬಾರದಂಥ ರೀತಿಯಲ್ಲಿ ನಾವು ಉಸಿರಾಡುತ್ತಿದ್ದೇವೆ; ಉಸಿರಾಟದ ವೇಳೆ ನಾವು ಮೂಗಿಗೆ ಮಹತ್ವ ನೀಡುವುದೇ ಇಲ್ಲ! ಬಾಯಿಯ ಮೂಲಕ ಉಸಿರಾಡುತ್ತೇವೆ. ಇದರ ಪರಿಣಾಮವಾಗಿ ಪ್ರಾಣವಾಯು ನಮ್ಮ ದೇಹವನ್ನು ಸೇರಬೇಕಾದಷ್ಟು ಪ್ರಮಾಣದಲ್ಲಿ ಸೇರುವುದೇ ಇಲ್ಲ. ವಾಸ್ತವವಾಗಿ ಮೂಗಿನ ಮೂಲಕ ಉಸಿರಾಡಿದಾಗ ಮಾತ್ರ ಸ್ವಚ್ಛ/ಶುದ್ಧ ಗಾಳಿ ನಮ್ಮ ಶ್ವಾಸಕೋಶವನ್ನು ಪ್ರವೇಶಿಸುವುದು ಸಾಧ್ಯ. ಆ ಗಾಳಿಯಲ್ಲಿರುವ ಪ್ರಾಣ ಶಕ್ತಿ ಶ್ವಾಸಕೋಶದ ಮೂಲಕ ದೇಹದ ಇತರ ಭಾಗಗಳನ್ನು ತಲುಪುವುದು ಸಾಧ್ಯ.

ಯೋಗಿಗಳ ದೃಷ್ಟಿಯಲ್ಲಿ ಸಮರ್ಪಕವಾದ ಉಸಿರಾಟವೆಂದರೆ ಬಾಯಿ ಮುಚ್ಚಿಕೊಂಡು ಮೂಗಿನ ಮೂಲಕ ನಡೆಸುವ ಉಸಿರಾಟ. ಈ ರೀತಿಯ ಉಸಿರಾಟದಿಂದ ಮಾತ್ರ ಪೂರ್ಣ ಪ್ರಮಾಣದ ರೇಚಕ ಮತ್ತು ಪೂರಕಗಳು ಸಾಧ್ಯ. ಒಬ್ಬ ವ್ಯಕ್ತಿ ಹುಟ್ಟಿದೊಡನೆ ಅವನ ಉಸಿರಾಟದ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ. ಮಗು ಹುಟ್ಟುವವರೆಗೆ ಆ ಮಗುವಿನ ಶ್ವಾಸಕೋಶಕ್ಕೆ ಕೆಲಸವೇ ಇಲ್ಲ ಎನ್ನಬಹುದು. ಏಕೆಂದರೆ, ಅದು ತಾಯಿಯಲ್ಲಿ ಹರಿಯುವ ರಕ್ತದ ಮೂಲಕ ತನಗೆ ಬೇಕಾದ ಆಮ್ಲಜನಕವನ್ನು ಪಡೆದುಕೊಳ್ಳುತ್ತಿರುತ್ತದಂತೆ. ತಾಯಿಯ ಗರ್ಭದಿಂದ ಹೊರಬಿದ್ದೊಡನೆ ಶ್ವಾಸಕೋಶದ ಕೆಲಸ ಆರಂಭ. ಶ್ವಾಸಕೋಶಗಳು ಪೂರ್ಣ ಪ್ರಮಾಣದಲ್ಲಿ ಹಿಗ್ಗಬೇಕು, ಸಂಕೋಚಗೊಳ್ಳಬೇಕು. ಈ ರೀತಿ ಆಗಬೇಕಾದರೆ ದೀರ್ಘವಾದ ಪೂರಕ ಹಾಗೂ ದೀರ್ಘವಾದ ರೇಚಕ ಆಗಬೇಕು. ಉಸಿರಾಟದಲ್ಲಿ ಈ ಎರಡು ಹಂತಗಳಲ್ಲದೆ ಇನ್ನೊಂದು ಮಹತ್ತ್ವದ ಹಂತವಿದೆ. ಅದೇ ಕುಂಭಕ (ಉಸಿರು ತಡೆಹಿಡಿದಿಟ್ಟುಕೊಳ್ಳುವುದು).

ಕುಂಭಕದಲ್ಲಿ ಮೂರು ವಿಧ: ಅಂತಃಕುಂಭಕ (ಉಸಿರನ್ನು ಒಳಗೆಳೆದುಕೊಂಡು ಸ್ವಲ್ಪ ಹೊತ್ತು ಹಿಡಿದಿಟ್ಟು ಕೊಳ್ಳುವುದು), ಬಾಹ್ಯಕುಂಭಕ (ಉಸಿರನ್ನು ಸ್ವಲ್ಪ ಹೊತ್ತು ಬಿಗಿ ಹಿಡಿಯುವುದು) ಹಾಗೂ ಸಹಜ ಕುಂಭಕ. ಇದನ್ನು ಶೂನ್ಯಕ ಎಂದೂ ಕರೆಯುವರು. ಗಮನಿಸಬೇಕಾದ ಅಂಶ ಏನೆಂದರೆ – ಪೂರಕದ ಅವಧಿ ಕಡಿಮೆ. ರೇಚಕದ ಅವಧಿ ಪೂರಕದ ಎರಡರಷ್ಟಿದೆ. ಕುಂಭಕದ ಅವಧಿ ಪೂರಕಕ್ಕಿಂತ ನಾಲ್ಕು ಪಟ್ಟು ದೀರ್ಘವಾಗಿದೆ. ಪೂರಕದ ಬಳಿಕ ಪ್ರಾಣಶಕ್ತಿಯನ್ನು ದೇಹದೊಳಗೆ ದೀರ್ಘ ಅವಧಿಗೆ ಇರಬಿಡುವ ಪ್ರಕ್ರಿಯೆಯಲ್ಲಿ ತುಸು ಹೆಚ್ಚು-ಕಮ್ಮಿಯಾದರೂ ಅಪಾಯ ಕಟ್ಟಿಟ್ಟದ್ದು. ಆದ್ದರಿಂದ ಈ ಕ್ರಮವನ್ನು ಬಲ್ಲವರಿಂದಲೇ ಕಲಿತುಕೊಳ್ಳಬೇಕೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

Leave a Reply

Your email address will not be published. Required fields are marked *