ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಪೋಷಕ ಪಾತ್ರಗಳು, ಕಾಮಿಡಿ ರೋಲ್ಗಳಿಂದ, ಖಡಕ್ ವಿಲನ್ ಕ್ಯಾರಕ್ಟರ್ಗಳಲ್ಲೂ ನಟಿಸಿರುವ ಪ್ರಮೋದ್ ಶೆಟ್ಟಿ “ಒಂದು ಶಿಕಾರಿಯ ಕಥೆ’, “ಲಾಫಿಂಗ್ ಬುದ್ಧ’ ಚಿತ್ರಗಳಲ್ಲಿ ನಾಯಕನಾಗಿಯೂ ಮಿಂಚಿದ್ದಾರೆ. ಇದೀಗ ಬಿ.ಎಸ್. ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್&ಕಟ್ ಹೇಳುತ್ತಿರುವ “ಶಭಾಷ್ ಬಡ್ಡಿಮಗ್ನೆ’ ಚಿತ್ರದಲ್ಲಿ ಮೊದಲ ಬಾರಿಗೆ ರೊಮ್ಯಾಂಟಿಕ್ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ “ನೀನಾಗೆ ನೀ ಶುರುಮಾಡು…’, “ಬಾರೆ ಬಾರೆ ಜಿಂಕೆಮರಿ’ ಹಾಡುಗಳು ರಿಲೀಸ್ ಆಗಿದ್ದು, ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಪ್ರಮೋದ್ಗೆ ಆದ್ಯಪ್ರಿಯಾ ನಾಯಕಿಯಾಗಿದ್ದು, ಸಾಮ್ರಾಟ್ ಶೆಟ್ಟಿ, ಕಾವ್ಯ ಪ್ರಕಾಶ್, ರವಿತೇಜ, ಮಿತ್ರ, ಮೂಗು ಸುರೇಶ್, ಶಂಕರ್ ಅಶ್ವತ್ಥ್, ಪ್ರಕಾಶ್ ತುಮ್ಮಿನಾಡು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ರಾಜಶೇಖರ್, “ಪರಿಚಿತರೊಬ್ಬರು ಹೇಳಿದ 90ರ ದಶಕದಲ್ಲಿ ನಡೆದ ನೈಜ ಟನೆಯ ಎಳೆಯನ್ನು ಇಲ್ಲಿ ಸಿನಿಮಾ ರೂಪ ನೀಡಿದ್ದೇನೆ. ಅಂದಿನ ಕಾಲಟ್ಟಕ್ಕೆ ತಕ್ಕಂತ ಸ್ಥಳಗಳು, ಕಾಸ್ಟ್ಯೂಮ್ಗಳನ್ನು ಬಳಸಿದ್ದೇವೆ. ಸೋಮಾರಿ ಪೊಲೀಸ್ ಅಧಿಕಾರಿಯ ಕಥೆಯಿದು. ಕೆಲಸಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಆಸಕ್ತಿ ತೋರುವ ಆತನ ಠಾಣಾ ವ್ಯಾಪ್ತಿಯಲ್ಲಿ ಕೊಲೆಯೊಂದು ನಡೆಯುತ್ತದೆ. ಅದನ್ನು ಆತ ಹೇಗೆ ತನಿಖೆ ಮಾಡುತ್ತಾನೆ? ಎಂಬುದನ್ನು ಕಾಮಿಡಿ ಮೂಲಕ ನಿರೂಪಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.
ನಾಯಕ ಪ್ರಮೋದ್ ಶೆಟ್ಟಿ, “ಸಿನಿಮಾದಲ್ಲಿ ಕಾಮಿಡಿ, ರೊಮ್ಯಾನ್ಸ್, ಆ್ಯಕ್ಷನ್ ಎಲ್ಲವೂ ಇರುವುದರಿಂದ ಬೋರ್ ಅನ್ನಿಸುವುದಿಲ್ಲ. ಇಲ್ಲಿಯವರೆಗೆ ಭ್ರಷ್ಟ, ಮುಗ್ಧ, ಖಳ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಇದೀಗ ಈ ಚಿತ್ರದಲ್ಲಿ ಸೋಮಾರಿ ಪೊಲೀಸ್ ಆಗಿದ್ದೇನೆ. ಪ್ರಾರಂಭದಿಂದ ಕೊನೆಯವರೆಗೂ ಉಸಿರಾಡಲೂ ಬಿಡದೇ ನಗಿಸುವ ಚಿತ್ರವಿದು’ ಎಂದರು. ಇದೇ ತಿಂಗಳಂತ್ಯದಲ್ಲಿ “ಶಭಾಷ್ ಬಡ್ಡಿಮಗ್ನೆ’ ತೆರೆಗೆ ಬರಲಿದೆ.