ಕೋಟಿಗೊಬ್ಬ ಪ್ರಮೋದ್ ಮಧ್ವರಾಜ್!

<<87.3 ರೂಪಾಯಿ ಕೋಟಿ ಒಡೆಯ * ಒಂದೇ ವರ್ಷದಲ್ಲಿ 9 ಕೋಟಿ ರೂ. ಆಸ್ತಿ ಏರಿಕೆ >>

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 87.3 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ನಾಮಪತ್ರ ಅಫಿಡವಿಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಪ್ರಮೋದ್ ಹೆಸರಿನಲ್ಲಿ ಸ್ವಂತ ವಾಹನ ಇಲ್ಲ.
ಪ್ರಮೋದ್ ಮಧ್ವರಾಜ್ 83.71 ಕೋಟಿ ರೂ., ಮೌಲ್ಯದ ಚರಾಸ್ತಿ ವಿವಿಧ ಬ್ಯಾಂಕ್, ಸಹಕಾರಿ ಸಂಘದಲ್ಲಿ 72.19 ಲಕ್ಷ ರೂ. ಠೇವಣಿ ಇರಿಸಿದ್ದಾರೆ. ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ 11 ಕೋಟಿ ರೂ. ಮೌಲ್ಯದ ಬಾಂಡ್ ಮತ್ತು ಷೇರನ್ನು ಹೊಂದಿದ್ದಾರೆ. 1.55 ಕೋಟಿ ರೂ. ಮೌಲ್ಯದ ವಿಮೆ, ಪೋಸ್ಟಲ್ ಸೇವಿಂಗ್ಸ್‌ನ್ನು ಪ್ರಮೋದ್ ಹೊಂದಿದ್ದಾರೆ. ಕೃಷಿಯೇತರ ಭೂಮಿ, ಕಟ್ಟಡ ಸಂಕೀರ್ಣ ಸೇರಿದಂತೆ ಒಟ್ಟು 3.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 10 ಲಕ್ಷ ರೂ. ಮೌಲ್ಯದ 424 ಗ್ರಾಂ ಚಿನ್ನಾಭರಣ ಇರುವುದಾಗಿ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ಒಂದೇ ವರ್ಷದಲ್ಲಿ 9 ಕೋಟಿ ರೂ. ಆಸ್ತಿ ಏರಿಕೆ: ಪ್ರಮೋದ್ ಮಧ್ವರಾಜ್ ಅವರ ಆಸ್ತಿ ಒಂದೇ ವರ್ಷದಲ್ಲಿ 9 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ತನ್ನ ಬಳಿ 78.46 ಕೋಟಿ ರೂ. ಚರಾಸ್ತಿ, ಸ್ಥಿರಾಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಣೆ ಮಾಡಿದ್ದರು. ಒಂದೇ ವರ್ಷದಲ್ಲಿ 78.46 ಕೋಟಿ ರೂ.ನಿಂದ 87.30 ಕೋಟಿ ರೂ. ಏರಿಕೆಯಾಗಿರುವುದು ವಿಶೇಷ.
4.16 ಕೋಟಿ ರೂ. ತೆರಿಗೆ ಪಾವತಿ: 2017-18 ಆರ್ಥಿಕ ವರ್ಷದಲ್ಲಿ 4.16 ಲಕ್ಷ ತೆರಿಗೆಯನ್ನು ಪಾವತಿಸಿರುವುದಾಗಿ, 2.34 ಕೋಟಿ ರೂ. (ಗವರ್ನ್‌ಮೆಂಟ್ ಡ್ಯೂಸ್, ಅಂಡರ್ ಡಿಸ್‌ಬ್ಯೂಟ್ ಗವರ್ನ್‌ಮೆಂಟ್ ಡ್ಯೂಸ್) ಸಾಲ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

ಪತ್ನಿ, ಮಗಳ ಹೆಸರಲ್ಲಿ ಆಸ್ತಿ: ಪತ್ನಿ ಸುಪ್ರಿಯಾ ಮಧ್ವರಾಜ್ 5.70 ಕೋಟಿ ರೂ., ಮಗಳು ಪ್ರತ್ಯಕ್ಷ ಮಧ್ವರಾಜ್ 3.19 ಕೋಟಿ ರೂ., ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಸುಪ್ರಿಯ ಮಧ್ವರಾಜ್ ವಿವಿಧ ಬ್ಯಾಂಕ್, ಸಹಕಾರಿ ಸಂಘದಲ್ಲಿ 1.19 ಕೋಟಿ ರೂ. ಠೇವಣಿ ಹೊಂದಿದ್ದಾರೆ. ಪ್ರತ್ಯಕ್ಷ ಮಧ್ವರಾಜ್ ಹೆಸರಲ್ಲಿ 83 ಲಕ್ಷ ರೂ., ಸೇವಿಂಗ್ಸ್ , ಆರ್‌ಡಿ 2 ಲಕ್ಷ ರೂ. ಇದೆ. ಸುಪ್ರಿಯಾ ಮಧ್ವರಾಜ್ 2.86 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ರೇಂಜ್‌ರೋವರ್, ಬೆಂಜ್, ರೋಲ್ಸ್ ರಾಯ್ಸನಂತ ಕಾರುಗಳನ್ನು ಹೊಂದಿರುವ ಪ್ರಮೋದ್ ಮಧ್ವರಾಜ್, ತಮ್ಮ ಅಫಿಡವಿಟ್ ಪ್ರಕಾರ ಯಾವುದೇ ಕಾರು, ಸ್ವಂತ ವಾಹನ ಹೊಂದಿಲ್ಲ. ಪತ್ನಿ ಹಾಗೂ ಪುತ್ರಿಯ ಹೆಸರಲ್ಲೂ ಯಾವುದೇ ವಾಹನಗಳು ಇಲ್ಲದಿರುವುದು ವಿಶೇಷ.

ಪ್ರಮೋದ್ ನಾಮಪತ್ರ ಸಲ್ಲಿಕೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್, ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಮಲ್ಪೆಯಲ್ಲಿರುವ ಮನೆಗೆ ತೆರಳಿ ತಾಯಿ ಮನೋರಮಾ ಮಧ್ವರಾಜ್ ಅವರಿಂದ ಆಶೀರ್ವಾದ ಪಡೆದರು. ನಾಮಪತ್ರ ಸಲ್ಲಿಕೆಗೂ ಮುನ್ನ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ, ರಥಬೀದಿ ಶ್ರೀಅನಂತೇಶ್ವರ, ಶ್ರೀಚಂದ್ರಮೌಳಿಶ್ವೀರ ದೇವಸ್ಥಾನ, ನೀಲಾವರ ಮಹಿಷಾ ಮರ್ದಿನಿ ದೇವಸ್ಥಾನ ಹಾಗೂ ನಾಗಸ್ಥಾನ, ಉಡುಪಿ ಶೋಕಮಾತಾ ಇಗರ್ಜಿ ಚರ್ಚ್, ದೊಡ್ಡಣಗುಡ್ಡೆ ಮಸೀದಿ, ಬನ್ನಂಜೆಯಲ್ಲಿ ಶ್ರೀನಾರಾಯಣಗುರು ಮಂದಿರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನ, ಚರ್ಚ್, ಮಸೀದಿ ಭೇಟಿ ಬಳಿಕ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಪ್ರಮೋದ್, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಾರ್ಯಕರ್ತರ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಶಾಸಕನಾಗಿ ಮಾಡಿದ ಕೆಲಸ ಜನತೆಗೂ ಗೊತ್ತಿದೆ. ಕೆಲಸ ಮಾಡುವವರು ಈ ಬಾರಿ ಉಡುಪಿ-ಚಿಕ್ಕಮಗಳೂರಿಗೆ ಸಂಸದರಾಗಬೇಕು ಎಂಬುದು ಜನರ ಅಭಿಪ್ರಾಯ.
ಪ್ರಮೋದ್ ಮಧ್ವರಾಜ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ