ಪ್ರಕಾಶ್​ ಜಾವಡೇಕರ್​ ‘ಡಿಸೆಂಬರ್​ ಧಮಾಕಾ’ ಹೇಳಿಕೆಗೆ ಸಿಎಂ ತಿರುಗೇಟು: ಕುಮಾರಸ್ವಾಮಿ ಸರ್ಕಾರ ಗಟ್ಟಿ ಎಂದ ಡಿಕೆಶಿ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಡಿಸೆಂಬರ್​ನಲ್ಲಿ ಧಮಾಕಾ ಆಗಲಿದೆ ಎಂದು ಹೇಳಿದ್ದ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಕೆಲವು ಸಚಿವರು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು ಅಪೇಕ್ಷೆ ಪಡುತ್ತಿದ್ದಾರೆ. 37 ಸ್ಥಾನಗಳಿಸಿದವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಅವಕಾಶವಾದಿ ರಾಜಕಾರಣ ಮಾಡಿದ್ದಾರೆ ಎಂದು ಪ್ರಕಾಶ್​ ಜಾವಡೇಕರ್​ ಹೇಳಿದ್ದರು. ಈಗ ತೀವ್ರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಆರು ತಿಂಗಳಿಂದ ಬಿಜೆಪಿಯವರು ಇದನ್ನೇ ಹೇಳುತ್ತಿದ್ದಾರೆ. ಬರೀ ಸದ್ದು ಮಾಡೋದಷ್ಟೇ. ಸರ್ಕಾರ ಕಲ್ಲುಬಂಡೆಯ ಹಾಗೇ ಇದೆ. ಆ ವಿಷಯ ಸತ್ತು ಹೋಗಿದೆ ಎಂದಿದ್ದಾರೆ.

ಡಿಕೆಶಿ ತಿರುಗೇಟು
ಪ್ರಕಾಶ್​ ಜಾವಡೇಕರ್​ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್​, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರ ಗಟ್ಟಿಯಾಗಿರುತ್ತದೆ. ನಮ್ಮದೆ ಇಲ್ಲದೆ ಆಪರೇಶನ್​ ಕಮಲ ಮಾಡಿದ್ದಾರೆ. ನಾವು ಅವರಷ್ಟು ಬುದ್ಧಿವಂತರು ಅಲ್ಲದೆ ಇರಬಹುದು. ಆದರೆ ಅವರಿಂತ ನಾವು 1% ಹೆಚ್ಚು ಯೋಚನೆ ಮಾಡುತ್ತೇವೆ ಎಂದು ಕುಟುಕಿದ್ದಾರೆ.

ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಸ್ವಲ್ಪ ದಿನ ಕಾದರೆ ಅವರಲ್ಲೇ ಭೂಕಂಪ ಉಂಟಾಗುತ್ತದೆ. 6ತಿಂಗಳಿಂದಲೂ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಹಾಗೇ ಸಚಿವರಾದ ಸಾ.ರಾ.ಮಹೇಶ್​, ವಿ.ಆರ್.ದೇಶಪಾಂಡೆ ಕೂಡ ಜಾವಡೇಕರ್​ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.