ಆರೋಪ-ಪ್ರತ್ಯಾರೋಪದತ್ತ ರಾಜ್ಯ ಭೂಕಂಪ

ಜೈಪುರ/ಬೆಂಗಳೂರು: ಅತಂತ್ರ ಸ್ಥಿತಿಯಲ್ಲಿರುವ ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಶೀಘ್ರದಲ್ಲೇ ‘ಭೂಕಂಪ’ ಸಂಭವಿಸಲಿದೆ ಎಂಬ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಮೈತ್ರಿ ಪಕ್ಷಗಳ ಮುಖಂಡರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಈಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರು ಕಾಂಗ್ರೆಸ್​ನ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರಕಾಶ್ ಜಾವಡೇಕರ್ ಕರ್ನಾಟಕದಲ್ಲಿ ಭೂಕಂಪನವಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆೆ.

‘ಕರ್ನಾಟಕದ ಸಮ್ಮಿಶ್ರ ಸರ್ಕಾರದಲ್ಲಿ ಉಭಯ ಪಕ್ಷಗಳ ನಡುವೆ ಪರಸ್ಪರ ಹೊಂದಾಣಿಕೆ ಕೊರತೆ ಇದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಬಹುದು. ಯಾವಾಗ ಸಂಭವಿಸುತ್ತದೆ ಎಂಬುದು ಯಡಿಯೂರಪ್ಪ ಅವರಿಗೆ ಮಾತ್ರ ಗೊತ್ತು’ ಎಂದು ಜಾವಡೇಕರ್ ಒಗಟಿನಂತೆ ಮಾತನಾಡಿದ್ದಾರೆ.

‘ಕರ್ನಾಟಕದಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿದೆ. ಬಹುಮತಕ್ಕೆ ಕೇವಲ 9 ಶಾಸಕರ ಕೊರತೆ ಇದೆ. ಜೆಡಿಎಸ್-ಕಾಂಗ್ರೆಸ್ ಅವಕಾಶವಾದಿ ರಾಜಕಾರಣಕ್ಕೆ ಹೆಸರಾಗಿವೆ. ಹೀಗಾಗಿ ಸಮ್ಮಿಶ್ರ ಸರ್ಕಾರದಿಂದ ಸ್ಥಿರ ಸರ್ಕಾರ ಸಾಧ್ಯವಿಲ್ಲ’ ಎಂದು ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ.

ಮೈತ್ರಿ ಸರ್ಕಾರದ ತಿರುಗೇಟು: ಜಾವಡೇಕರ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್ ಸೇರಿ ಹಲವು ನಾಯಕರು ಕಿಡಿಕಾರಿದ್ದು, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಕಳೆದ ಆರು ತಿಂಗಳಿನಿಂದ ಇಂತಹ ಭೂಕಂಪ ಆಗುತ್ತಲೇ ಇದೆ. ಆದರೆ, ಸಮ್ಮಿಶ್ರ ಸರ್ಕಾರ ಹೆಬ್ಬಂಡೆಯಂತೆ ಗಟ್ಟಿಯಾಗಿದೆ. ಬಿಜೆಪಿ ನಾಯಕರು ಇದೇ ರೀತಿ ಹಗಲುಗನಸು ಕಾಣುತ್ತಿದ್ದಾರೆ. ಈಗ ಆ ವಿಷಯ ಸತ್ತು ಹೋಗಿದೆ’ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

‘ಬಿಜೆಪಿಯವರದ್ದು ಹಗಲುಗನಸು. ಒಮ್ಮೆ ಆಪರೇಷನ್ ಕಮಲ ಮಾಡಿ ಗೆದ್ದಿದ್ದಾರೆ. ಪದೇಪದೆ ಸಾಧ್ಯವಿಲ್ಲ. ಭೂಕಂಪ ಯಾವಾಗ ಆಗುತ್ತದೆಂಬುದು ಬಿಎಸ್​ವೈಗೆ ಗೊತ್ತು ಎಂದು ಯಾರೋ ಹೇಳಿದ್ದನ್ನು ಜಾವಡೇಕರ್ ಹೇಳಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ನಾಯಕರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಈ ಮೂಲಕ ಅವರೇ ಕುದುರೆ ವ್ಯಾಪಾರವನ್ನು ಒಪ್ಪಿಕೊಂಡಿದ್ದಾರೆ. ನಾವು ಆ ಪಕ್ಷದವರಷ್ಟು ಬುದ್ಧಿವಂತರಲ್ಲದಿದ್ದರೂ ಅಜ್ಞಾನಿಗಳಲ್ಲ. ಯಡಿಯೂರಪ್ಪ ಒಳ್ಳೆಯ ನಾಟಕಕಾರ ಎಂದು ಸಚಿವ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಪ್ರತಿಕ್ರಿಯಿಸಿ, ಭೂಕಂಪ ಕರ್ನಾಟಕದಲ್ಲಲ್ಲ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಆಗಲಿದೆ ಎಂದಿದ್ದಾರೆ.

ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಲವು ತಂತ್ರಗಳನ್ನು ಮಾಡಿದರು. ಅದರಲ್ಲಿ ವಿಫಲರಾಗಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.

ಜೆಡಿಎಸ್ ಸಚಿವ ಬಂಡೆಪ್ಪ ಖಾಶೆಂಪುರ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರದಲ್ಲಿ ಯಾವ ಭೂಕಂಪನೂ ಆಗಲ್ಲ. ಆರು ತಿಂಗಳಿನಿಂದ ನಾವೂ ನೋಡುತ್ತಿದ್ದೇವೆ. ಕುಮಾರಣ್ಣನವರ ಸರ್ಕಾರ ಸ್ಥಿರವಾಗಿರಲಿದೆ ಎಂದರೆ, ಸಚಿವ ಸಾ.ರಾ.ಮಹೇಶ್, ಮೈತ್ರಿ ಸರ್ಕಾರ ಎಂದು ಅಸ್ತಿತ್ವಕ್ಕೆ ಬಂತೋ ಅವತ್ತಿನಿಂದ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕುದುರೆ ವ್ಯಾಪಾರ ಗುಟ್ಟಾಗೇನೂ ಉಳಿದಿಲ್ಲ ಎಂದಿದ್ದಾರೆ.


ಕಂಪನ ತೀವ್ರತೆ ಹೆಚ್ಚಬಹುದು

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಆಗಿಂದಾಗ್ಗೆ ಸಣ್ಣ ಪ್ರಮಾಣದಲ್ಲಿ ಆಗುತ್ತಿರುವ ಭೂಕಂಪದ ತೀವ್ರತೆ ಈ ಬಾರಿ ಹೆಚ್ಚಾಗಿ ಸರ್ಕಾರ ಪತನ ವಾದರೂ ಅಚ್ಚರಿಯಿಲ್ಲ. ಮಾಜಿ ಸಿಎಂ ಧರ್ಮಸ್ಥಳಕ್ಕೆ ಹೋದಾಗ ಒಮ್ಮೆ, ವಿದೇಶಕ್ಕೆ ತೆರಳಿದಾಗ ಮತ್ತೊಮ್ಮೆ ಭೂಕಂಪನವಾಗಿತ್ತು. ಆಗೆಲ್ಲ 5.2, 6.2 ಮ್ಯಾಗ್ನಿಟ್ಯೂಡ್ ಇದ್ದ ಪ್ರಮಾಣ ಈಬಾರಿ 7 ದಾಟಿದರೂ ಅಚ್ಚರಿ ಪಡಬೇಕಿಲ್ಲ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 104 ಸ್ಥಾನ ಗೆದ್ದ ಬಿಎಸ್​ವೈ ಸಿಎಂ ಆಗಬಾರದೇ? ಅವರು ಸಿಎಂ ಆಗೇ ಆಗುತ್ತಾರೆ ಎಂದು ಜಾತಕದಲ್ಲಿದೆ. ಅವರು ಇಂಜಿನ್ ಆದರೆ ನಾವು ಬೋಗಿಗಳು. ನಾವೂ ಸೇರಿ ಸಾಕಷ್ಟು ಯುವಕರೂ ಮಂತ್ರಿಗಳಾಗುತ್ತಾರೆ ಎಂದರು.

ರಾಜ್ಯದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ 104 ಸ್ಥಾನ ಹೊಂದಿರುವ ಬಿಜೆಪಿಗೆ ಸಚಿವ ರಮೇಶ ಜಾರಕಿಹೊಳಿ ತಂಡ ಅಥವಾ ಇನ್ನಿತರ ಶಾಸಕರು ಬೆಂಬಲ ನೀಡಿದರೆ ಸರ್ಕಾರ ರಚನೆ ಮಾಡುತ್ತೇವೆ. ಆದರೆ ಆಪರೇಷನ್ ಕಮಲ ಮಾಡುವುದಿಲ್ಲ.

| ಕೋಟ ಶ್ರೀನಿವಾಸ ಪೂಜಾರಿ ಮೇಲ್ಮನೆ ಪ್ರತಿಪಕ್ಷ ನಾಯಕ

ರಾಜ್ಯದ ಮೈತ್ರಿ ಸರ್ಕಾರ ಯಾವಾಗ ಬೇಕಾದರೂ ಕುಸಿಯಬಹುದು. ಅದಕ್ಕೆ ಕಾಲ ಕೂಡಿಬರಬೇಕಷ್ಟೇ. ಸರ್ಕಾರ ಬೀಳಿಸುವುದು ನಮ್ಮ ಕೆಲಸವಲ್ಲ. ಚಿಕ್ಕಬಳ್ಳಾಪುರದ ತೋಳ, ಬೆಳಗಾವಿ ತೋಳಗಳು ಏನೇನು ಮಾಡುತ್ತಿವೆ ಎಂಬುದು ಎಲ್ಲರಿಗೂ ಕಾಣುತ್ತಿದೆ.

| ಡಿ.ವಿ.ಸದಾನಂದಗೌಡ ಕೇಂದ್ರ ಸಚಿವ


ಜನರ ಭಾವನೆ ಬದಲಾಗುತ್ತಿದೆ ಎಚ್ಚರ!

ಬೆಂಗಳೂರು: ಸರ್ಕಾರದ ಬಗ್ಗೆ ಜನರ ಭಾವನೆ ಬೇರೆಯಾಗುತ್ತಿದೆ. ಬಜೆಟ್ ಘೊಷಣೆಗಳು ಅನುಷ್ಠಾನವಾಗುತ್ತಿಲ್ಲ. ಈ ಹಂತ ದಲ್ಲಾದರೂ ಸೂಕ್ತ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಪಕ್ಷದ ವೇದಿಕೆಯಿಂದ ಮುಖ್ಯಮಂತ್ರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಸಮನ್ವಯ ಸಮಿತಿ ಸಭೆ ಹಿನ್ನೆಲೆ ಬುಧವಾರ ಮಧ್ಯಾಹ್ನ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುವ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಿತು.

ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ನೇಮಕ, ಆಪರೇಷನ್ ಕಮಲಕ್ಕೆ ಪ್ರತಿತಂತ್ರ ರೂಪಿಸುವುದು, ಶಾಸಕರ ಅತೃಪ್ತಿ ಶಮನ, ಸಂಸದೀಯ ಕಾರ್ಯದರ್ಶಿಗಳ ನೇಮಕ ಸೇರಿ ಹಲವು ವಿಷಯಗಳ ಕುರಿತು ನಾಯಕರು ಅಭಿಪ್ರಾಯ ನೀಡಿದರು. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಸಂಪುಟ ವಿಸ್ತರಣೆ, ಲೋಕಸಭಾ ಚುನಾವಣೆ ಸಿದ್ಧತೆ ಸೇರಿ ಸಭೆಯಲ್ಲಿ

ಹಲವು ವಿಚಾರ ಚರ್ಚೆಯಾಗಿದ್ದು, ಹಿರಿಯ ನಾಯಕರೂ ಸಲಹೆ ನೀಡಿದ್ದಾರೆ. ಎಲ್ಲ ವಿಷಯಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಹಿರಿಯರ ಸಲಹೆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಲಿದೆ ಎಂದು ವಿವರಿಸಿದರು.

ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ ಶಿವಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಟಿ.ಬಿ. ಜಯಚಂದ್ರ, ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ, ಸಿ.ಎಂ. ಇಬ್ರಾಹಿಂ ಸೇರಿ ಹಲವರು ಭಾಗಿಯಾಗಿದ್ದರು.

ಚರ್ಚೆಯಾಗಿದ್ದೇನು?

# ಸಚಿವ ಸಂಪುಟ ವಿಸ್ತರಣೆ, ಅಧಿಕಾರಿಗಳ ವರ್ಗಾವಣೆ. ಶೀಘ್ರ ಸಂಪುಟ ವಿಸ್ತರಿಸಿ, ಅಧಿವೇಶನಕ್ಕೆ ಮೊದಲು, ನಂತರ ಎಂಬ ಗೊಂದಲ ಬೇಡವೆಂದ ಹಿರಿಯರು

# ಮೇಲ್ಮನೆಯಲ್ಲಿ 39 ಸದಸ್ಯರನ್ನು ಹೊಂದಿರುವ ನಾವು 12 ಸದಸ್ಯರಿರುವ ಜೆಡಿಎಸ್​ಗೇಕೆ ಮೇಲ್ಮನೆ ಸ್ಥಾನ ಬಿಡಬೇಕು? ಈಗ ಗೊಂದಲ ಮಾಡಿಕೊಂಡರೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಸಾಧ್ಯತೆ

# ಸಚಿವ-ಶಾಸಕರ ಗಮನಕ್ಕೆ ತರದೇ ಅಧಿಕಾರಿಗಳ ವರ್ಗಾವಣೆ ಬಗ್ಗೆ ಅಸಮಾಧಾನ, ಕಟ್ಟುನಿಟ್ಟಿನ ಮಾತುಕತೆಗೆ ಸಲಹೆ. ಮೈತ್ರಿ ಸೂತ್ರದನ್ವಯ ಕಾಂಗ್ರೆಸ್​ಗೆ ಸಿಗದ ಸಮಪಾಲು. ಹಾಸನ, ಮಂಡ್ಯ ಜಿಲ್ಲೆಯಲ್ಲಿದೆ ಸಮಸ್ಯೆ

# ಸರ್ಕಾರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಕೆಲಸಗಳಿಗೆ ಮಣೆ. ನಮ್ಮ ಪಕ್ಷದ ಶಾಸಕರು, ಕಾರ್ಯಕರ್ತರಿಗೆ ಬೆಲೆಯೇ ಇಲ್ಲ

# ಘೋಷಣೆಯಾಗೇ ಉಳಿದ ಬಜೆಟ್ ಯೋಜನೆಗಳು, ಅಭಿವೃದ್ಧಿಯೂ ಕುಂಠಿತ, ನಾಗರಿಕರ ಕೂಗಿಗೆ ತುರ್ತು ಸ್ಪಂದಿಸುವ ಅಗತ್ಯವಿದೆ

ಮುಗಿಯದ ಮಂಡ್ಯ ರಗಳೆ

ಕೆಪಿಸಿಸಿ ಕಚೇರಿಗೆ ಬುಧವಾರ ಆಗಮಿಸಿದ್ದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರು, ತಮಗಾಗುತ್ತಿರುವ ಹಿನ್ನಡೆ ಬಗ್ಗೆ ನಾಯಕರಲ್ಲಿ ವಿವರಿಸಿದರು. ಜಿಲ್ಲೆಯ ವಸ್ತುಸ್ಥಿತಿ ವಿವರಿಸಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡರೂ ಮಂಡ್ಯ ಜಿಲ್ಲೆಯಲ್ಲಿ ಆ ವಾತಾವರಣ ಇಲ್ಲ. ಜೆಡಿಎಸ್​ನದ್ದೇ ದರ್ಬಾರು. ಪಕ್ಷದ ಕಾರ್ಯಕರ್ತರ ಮೇಲಿನ ಕೇಸ್​ಗಳನ್ನು ವಾಪಸ್ ತೆಗೆಯುತ್ತಿಲ್ಲ. ಹೀಗಾದರೆ ಮುಂದೆ ಪಕ್ಷ ಬಲಪಡಿಸೋದು ಹೇಗೆ? ಎಂಬಿತ್ಯಾದಿ ಗೊಂದಲಗಳ ಬಗ್ಗೆ ಸಮನ್ವಯ ಸಮಿತಿ ಸಭೆ ಮುಂದಿಡುವಂತೆ ಒತ್ತಾಯಿಸಿದರು.