ಬೆಂಗಳೂರು: ಅತ್ಯಾಚಾರ ಪ್ರಕರಣ ಸಂಬಂಧ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.12ಕ್ಕೆ ಮುಂದೂಡಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮತ್ತು ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ದಾಖಲಾಗಿರುವ ಮತ್ತೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ .ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ನಮಗೆ ಅದರ ಪ್ರತಿಯನ್ನು ನೀಡಿಲ್ಲ. ಆರೋಪಪಟ್ಟಿ ಬದಿಗೆಸರಿಸಿ ನೋಡಿದರೆ ಅರ್ಜಿದಾರರ ಮೇಲಿನ ಎಲ್ಲ ಆರೋಪಗಳಿಗೂ ಜಾಮೀನು ನೀಡಬುದಾಗಿದೆ ಎಂದರು.
ವಿಶೇಷ ತನಿಖಾ ದಳದ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಸಂತ್ರಸ್ತರ ಗೌರವದ ದೃಷ್ಟಿಯಿಂದ ಪ್ರಕರಣವನ್ನು ಗೌಪ್ಯ ವಿಚಾರಣೆ ನಡೆಸುವ ಸಂಬಂಧ ನ್ಯಾಯಾಲಯ ಪರಿಗಣಿಸಬೇಕು ಎಂದರು.
ಈ ವೇಳೆ ಪ್ರತಿಕ್ರಯಿಸಿದ ನ್ಯಾಯಪೀಠ ಗೌಪ್ಯ ವಿಚಾರಣೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ನೀಡಿರುವ ಆರೋಪ ಪಟ್ಟಿಯನ್ನು ಪರಿಶೀಲಿಸಿ, ಸೂಕ್ತ ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳಿಂದ ಪಡೆದುಕೊಳ್ಳಲಾಗುವುದು ಎಂದು ಮೌಖಿಕವಾಗಿ ಹೇಳಿ ವಿಚಾರಣೆಯನ್ನು ಸೆ. 12ಕ್ಕೆ ಮುಂದೂಡಿತು.