ರಾಜಕೀಯದ ವಿರೋಧಿಗಳ ಮನೆಗೇ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ ಪ್ರಜ್ವಲ್​ ರೇವಣ್ಣ

ಹಾಸನ: ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಜ್ವಲ್​ ರೇವಣ್ಣ ಅವರು ಗೌಡರ ಕುಟುಂಬಕ್ಕೆ ರಾಜಕೀಯ ಕಡು ವೈರಿಗಳು ಎನಿಸಿಕೊಂಡಿರುವ ಕಾಂಗ್ರೆಸ್​ ನಾಯಕ ಗಂಡಸಿ ಶಿವರಾಮ್​ ಮತ್ತು ಸಿ.ಎಸ್​ ಪುಟ್ಟೇಗೌಡರ ನಿವಾಸಕ್ಕೆ ಇಂದು ಭೇಟಿ ನೀಡಿ ಬೆಂಬಲ ಯಾಚಿಸಿದರು. ಈ ಮೂಲಕ ಹಾಸನ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದರು.

ಸಚಿವ ಎಚ್​.ಡಿ ರೇವಣ್ಣ ಮತ್ತು ತಾಯಿ ಭವಾನಿ ಅವರ ಜತೆಗೆ ಮೊದಲಿಗೆ ಗಂಡಸಿ ಶಿವರಾಮ್​ ಮನೆಗೆ ತೆರಳಿದ ಪ್ರಜ್ವಲ್​ ಆಶೀರ್ವಾದ ಪಡೆದರು. ಶಿವರಾಮ್​ ಅವರೂ ಕೂಡ ವೈರತ್ವ ಮರತು ಪ್ರಜ್ವಲ್​ಗೆ ಹೂವಿನ ಹಾರ ಹಾಕಿ ಮನೆಗೆ ಸ್ವಾಗತಿಸಿದರು. ಈ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಶಿವರಾಮ್​ ಅವರನ್ನು ಪ್ರಜ್ವಲ್​ ಕೋರಿದರು.

ನಂತರ ಶ್ರವಣಬೆಳಗೊಳದ ಮಾಜಿ ಶಾಸಕ ಸಿ.ಎಸ್​. ಪುಟ್ಟೇಗೌಡರ ಮನೆಗೂ ರೇವಣ್ಣ ಕುಟುಂಬ ತೆರಳಿತು. ಪುಟ್ಟೇಗೌಡರು ರೇವಣ್ಣ ಅವರೊಂದಿಗೆ ಆತ್ಮೀಯವಾಗಿಯೇ ಚರ್ಚೆಯಲ್ಲಿ ತೊಡಗಿದರು. ತಮಗೆ ಬೆಂಬಲ ನೀಡುವಂತೆ ಪ್ರಜ್ವಲ್​ ಕೋರಿದರು.

ಗಂಡಸಿ ಶಿವರಾಮ್​ ಅವರು ಗೌಡರ ಕುಟುಂಬದ ಮಟ್ಟಿಗೆ ರಾಜಕೀಯದ ಎದುರಾಳಿ. ಶಿವರಾಮ್​ ಅವರೂ ದೇವೇಗೌಡರನ್ನು ವಿರೋಧಿಸಿಕೊಂಡೇ ರಾಜಕೀಯದಲ್ಲಿ ನೆಲೆ ಕಂಡುಕೊಂಡವರು. ಈ ಚುನಾವಣೆಯಲ್ಲಿ ಪ್ರಜ್ವಲ್​ ಗೆಲುವಿನ ಕಾರಣಕ್ಕೆ ಗೌಡರ ಕುಟುಂಬ ದಶಕಗಳ ವೈರತ್ವವನ್ನು ಮರೆತಂತೆ ಈ ಪ್ರಸಂಗ ಭಾಸವಾಗಿದ್ದು, ರಾಜಕೀಯ ವಲಯದಲ್ಲಿ ಅಚ್ಚರಿಗೂ ಕಾರಣವಾಗಿದೆ.

ಇನ್ನು ಶ್ರವಣಬೆಳಗೊಳದ ಮಾಜಿ ಶಾಸಕ ಸಿ.ಎಸ್​ ಪುಟ್ಟೇಗೌಡ ಅವರು ಮೊದಲಿಗೆ ಜೆಡಿಎಸ್​ನಲ್ಲೇ ಇದ್ದರಾದರೂ, 2013ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್​ ಸೇರಿದ್ದರು.