ಟಿಕೆಟ್​ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರಜ್ವಲ್​ ರೇವಣ್ಣ

ಹಾಸನ: ಟೆಕೆಟ್‌ ನೀಡಿದರೆ ಹಾಸನ ಅಥವಾ ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ.

ಹೊಳೆನರಸೀಪುರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿ, ಪರೋಕ್ಷವಾಗಿ ಲೋಕಸಭೆಗೆ ಸ್ಪರ್ಧಿಸುವುದಾಗಿ ಒಪ್ಪಿಕೊಂಡು ಅನುಮತಿ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮತ್ತು ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾನು ಎಂದಿಗೂ ಬದ್ಧ. ಒಂದುವೇಳೆ ಟಿಕೆಟ್​ ನೀಡಿದರೆ ಹಾಸನ ಅಥವಾ ಮಂಡ್ಯದಿಂದ ಸ್ಪರ್ಧಿಸಲು ನಾನು ಸಿದ್ಧ. ಅಥವಾ ಎಚ್​ಡಿಡಿ ಹಾಸನದಿಂದ ಲೋಕಸಭೆಗೆ ಸ್ಫರ್ಧಿಸಿದರೆ ನಾನೇ ಚುನಾವಣಾ ಸಾರಥ್ಯ ವಹಿಸುತ್ತೇನೆ ಎಂದರು.

ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ತೆರೆಮರೆಯಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ನನಗೆ ಟಿಕೆಟ್ ಸಿಗದಿದ್ದರೂ ಬೇಸರವಿಲ್ಲ. ದೇವೇಗೌಡರ ಜತೆಗಿದ್ದು ರಾಜಕೀಯ ಕಲಿಯುವುದು, ಅರ್ಜುನನ ಗುರುವಿನ ಜತೆ ಬಿಲ್ಲು ವಿದ್ಯೆ ಕಲಿತಂತೆ ಎಂದರು.

ನಿಖಿಲ್​ಗೆ ಟಿಕೆಟ್​ ಸಿಕ್ಕರೆ ಬೇಸರವಿಲ್ಲ
ಸೋದರ ನಿಖಿಲ್​ಗೆ ಟಿಕೆಟ್ ಸಿಕ್ಕರೂ ಬೇಸರವಿಲ್ಲ. ನಿಖಿಲ್ ಜಯಗಳಿಸಿದರೆ ನಮಗೂ ಆಸರೆಯಾಗುತ್ತಾನೆ. ನಿಖಿಲ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದರು. (ದಿಗ್ವಿಜಯ ನ್ಯೂಸ್​)