ಪುತ್ರನಿಗಾಗಿ ಪ್ರತಿಷ್ಠೆ ಬದಿಗಿಟ್ಟ ರೇವಣ್ಣ!

| ಮಂಜು ಬನವಾಸೆ ಹಾಸನ

ಪುತ್ರ ಪ್ರಜ್ವಲ್ ಭವಿಷ್ಯ ಗಟ್ಟಿಗೊಳಿಸಲು ವೈಯಕ್ತಿಕ ಪ್ರತಿಷ್ಠೆ, ವೈರತ್ವವನ್ನೆಲ್ಲ ಬದಿಗಿಟ್ಟ ಸಚಿವ ಎಚ್.ಡಿ.ರೇವಣ್ಣ, ದಶಕಗಳಿಂದ ರಾಜಕೀಯ ಎದುರಾಳಿಗಳಾಗಿ ಗುರುತಿಸಿಕೊಂಡಿದ್ದ ಮುಖಂಡರ ನಿವಾಸಗಳಿಗೆ ಭೇಟಿ ನೀಡಿ ಪ್ರಚಾರಕ್ಕೆ ಕೈಜೋಡಿಸುವಂತೆ ಕೋರಲು ಆರಂಭಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸುವುದು ಅನಿವಾರ್ಯ. ಕಳೆದ ಚುನಾವಣೆಯಲ್ಲಿ ದೇವೇಗೌಡರ ಎದುರಾಳಿ ಆಗಿದ್ದ ಮಾಜಿ ಸಚಿವ ಎ.ಮಂಜು ಈ ಬಾರಿ ಬಿಜೆಪಿ ಅಭ್ಯರ್ಥಿ. ಇದನ್ನು ಮನಗಂಡ ಸಚಿವ ರೇವಣ್ಣ, ಕಾಂಗ್ರೆಸ್ ಪಾಲಿನ ಮತಗಳನ್ನು ಪ್ರಜ್ವಲ್​ಗೆ ಸುರಕ್ಷಿತವಾಗಿ ವರ್ಗಾವಣೆ ಮಾಡಿಸಲು ಮುಖಂಡರ ಮನವೊಲಿಸಲು ಆರಂಭಿಸಿದ್ದಾರೆ. ಇದಕ್ಕಾಗಿ ಹಮ್ಮು-ಬಿಮ್ಮು, ವೈರತ್ವ ಬದಿಗಿಟ್ಟು ಅಖಾಡಕ್ಕಿಳಿದಿದ್ದಾರೆ.

ದೇವೇಗೌಡರ ಕಾಲದಿಂದಲೂ ಅವರ ಕುಟುಂಬದ ಜತೆ ರಾಜಕೀಯ ಹಗೆತನ ಹೊಂದಿದ್ದ ಮಾಜಿ ಸಚಿವ ದಿ. ಎಚ್.ಸಿ. ಶ್ರೀಕಂಠಯ್ಯ ಕುಟುಂಬ, ದಶಕದ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಗಂಡಸಿ ಶಿವರಾಮು ಎಂದೇ ಖ್ಯಾತರಾಗಿರುವ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಸೇರಿ ಹಲವು ಕಾಂಗ್ರೆಸ್ ನಾಯಕರ ಮನೆಗೆ ರೇವಣ್ಣ ಖುದ್ದು ಭೇಟಿ ನೀಡಿದ್ದಾರೆ. 2004ರಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಬಿ.ಶಿವರಾಮು ವೇದಿಕೆಯಲ್ಲಿದ್ದರೂ ಹೆಸರು ಹೇಳಲಿಚ್ಛಿಸದೆ ಭಾಷಣ ಮಾಡುತ್ತಿದ್ದ ಸಚಿವ ರೇವಣ್ಣ, ಮಂಗಳವಾರ ಅವರ ನಿವಾಸಕ್ಕೆ ಭೇಟಿ ನೀಡಿ ರ್ಚಚಿಸಿದರು. ಬಳಿಕ ಒಟ್ಟಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಶ್ವಾಸ ಪಡೆಯಿರಿ: ಮೊದಲಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುತ್ತ ಬಂದಿರುವ ರೇವಣ್ಣ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಭಾರಿ ಅಸಮಾಧಾನವಿದೆ. ಹೀಗಾಗಿ ಅವರು ಭೇಟಿ ಮಾಡಿದ ಎಲ್ಲ ಕಾಂಗ್ರೆಸ್ ಮುಖಂಡರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ. ಅದಕ್ಕೆ ಸಚಿವ ರೇವಣ್ಣ ಒಪ್ಪಿದ್ದು, ಹಿಂದಿನದ್ದು ಮರೆತುಬಿಡಿ, ಮುಂದಿನ ನಡೆ ನೋಡಿ ನಿರ್ಧರಿಸಿ ಎನ್ನುತ್ತಿದ್ದಾರೆ.

ಪುತ್ರನ ಗೆಲುವಿಗಾಗಿ ರೇವಣ್ಣ, ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಮತಗಳನ್ನು ಬಿಜೆಪಿಗೆ ವರ್ಗಾಯಿಸುವುದನ್ನು ತಡೆಯುವ ಉದ್ದೇಶ ಹೊಂದಿದ್ದಾರೆ. ಮೇಲ್ನೋಟಕ್ಕೆ ಅವರು ಭೇಟಿ ಮಾಡಿದ ಎಲ್ಲ ಮುಖಂಡರೂ ಪ್ರಜ್ವಲ್​ರನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ.

ಜೆಡಿಎಸ್​ನಲ್ಲಿ ಕುಟುಂಬ ರಾಜಕಾರಣ ಇದೆ. ಬಹುತೇಕ ಮುಖಂಡರು ಆ ಪಕ್ಷ ತೊರೆದು ಗೌಡರ ಕುಟುಂಬ ರಾಜಕಾರಣ ನಿಮೂಲನೆಗೆ ಕೆಲಸ ಮಾಡುತ್ತಿದ್ದಾರೆ. ಹಾಸನ ಹಾಗೂ ಮಂಡ್ಯದ ಮತದಾರರು ಈ ಅವಕಾಶ ಬಳಸಿಕೊಳ್ಳಬೇಕು.

| ಶೋಭಾ ಕರಂದ್ಲಾಜೆ ಸಂಸದೆ