ಸುಳ್ಳು ಭರವಸೆಗಳ ಸರದಾರ ತಲೆ ಮರೆಸಿಕೊಂಡಿದ್ದಾರೆ: ಬಿಜೆಪಿ ಶಾಸಕ ಪ್ರೀತಮ್​ ಗೌಡಗೆ ಪ್ರಜ್ವಲ್ ಟಾಂಗ್

ಹಾಸನ: ಸುಳ್ಳು ಭರವಸೆಗಳ ನೀಡಿ ಚುನಾವಣೆ ಗೆದ್ದಿರುವ ಕ್ಷೇತ್ರ ಶಾಸಕ ಪ್ರೀತಂ ಜೆ. ಗೌಡ ಈಗ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು.

ನಗರದ ಕುವೆಂಪು ನಗರ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ತರುತ್ತಿರುವ ಕೋಟ್ಯಾಂತರ ರೂಪಾಯಿ ಅನುದಾನವನ್ನು
ತಾವು ಬಿಡುಗಡೆ ಮಾಡಿಸಿರುವುದಾಗಿ ಹೇಳುತ್ತಿದ್ದಾರೆ. ಈ ರೀತಿ ಸುಳ್ಳು ಹೇಳಿ ಬಹಳ ದಿನ ರಾಜಕಾರಣ ಮಾಡಲು ಆಗುವುದಿಲ್ಲ. ಸಚಿವ ರೇವಣ್ಣ ಅವರ ಕೆಲಸಗಳಿಗೆ ತಮ್ಮ ಹೆಸರು ಇಟ್ಟುಕೊಳ್ಳುವುದನ್ನು ಮುಂದುವರಿಸಿದರೆ ಎಲ್ಲವನ್ನೂ ದಾಖಲೆ ಸಮೇತ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಟಾಂಗ್ ನೀಡಿದರು.
ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ಕ್ಷೇತ್ರ ಶಾಸಕ ಪ್ರೀತಂ ಜೆ. ಗೌಡ ವಿಫಲರಾಗಿದ್ದಾರೆ. ಮತ ನೀಡಿದ ಜನರು ಪ್ರಶ್ನಿಸುತ್ತಾರೆ ಎಂಬ ಅಂಜಿಕೆಯಿಂದ ತಲೆ ಮರೆಸಿಕೊಂಡಿದ್ದಾರೆ ಎಂದರು.

ಕಳೆದ ಹತ್ತು ವರ್ಷದಿಂದ ಯಾವುದೇ ಕೆಲಸಗಳಾಗದೆ ಜಿಲ್ಲೆಯ ಜನ ನೋವು ಅನುಭವಿಸಿದ್ದಾರೆ. ಈಗ ಜೆಡಿಎಸ್ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ಆಗಬೇಕಿರುವ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಪ್ರತಿ ಮನೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದು ಹೇಳಿದರು.