More

    ಅಜನೀಶ್-ವಿಜಯ್ ಮತ್ತೊಂದು ಮೋಡಿ

    ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಗಾಯಕ ವಿಜಯ್ ಪ್ರಕಾಶ್ ಜೋಡಿ ಸೇರಿದರೆ ಅಲ್ಲೊಂದು ಮೋಡಿ ಖಚಿತ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ‘ಹ್ಯಾಂಡ್ಸಪ್’ ಹಾಡಿನ ಮೂಲಕ ಒಂದಾಗಿದ್ದ ಈ ಜೋಡಿ ಸ್ಯಾಂಡಲ್​ವುಡ್​ನಲ್ಲಿ ಮೋಡಿ ಮಾಡಿತ್ತು. ಅರ್ಥಾತ್ ಅಜನೀಶ್ ಸಂಗೀತ, ವಿಜಯ್ ಪ್ರಕಾಶ್ ಗಾಯನದ ‘ಹ್ಯಾಂಡ್ಸಪ್’ ಹಾಡು ಸಾಕಷ್ಟು ಜನಪ್ರಿಯತೆ ಪಡೆದು ಎಲ್ಲರಲ್ಲೂ ಗುಂಗು ಹಿಡಿಸಿತ್ತು. ಇದೀಗ ಈ ಜೋಡಿ ಮತ್ತೆ ಒಂದಾಗಿ ಹಿಟ್ ಸಾಂಗ್​ವೊಂದನ್ನು ನೀಡಿದೆ.

    ಹೌದು, ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್​ವ್ಯಾನ್’ ಚಿತ್ರದ ‘ಅರೆರೆ ಶುರುವಾಯಿತು ಹೇಗೆ.. ಪದವೇ ಸಿಗದಾಯಿತು ಹೇಗೆ..’ ಹಾಡು ಬಿಡುಗಡೆ ಆಗಿದ್ದು ಭಾರಿ ಸದ್ದು ಮಾಡುತ್ತಿದೆ. ಜಯಂತ ಕಾಯ್ಕಿಣಿ ಅವರ ಸಾಹಿತ್ಯ, ವಿಜಯ್ ಪ್ರಕಾಶ್ ಗಾಯನಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮೆಲೊಡಿ ಟ್ಯೂನ್​ನ ಈ ಹಾಡು ಆನಂದ್ ಆಡಿಯೊ ಯುಟ್ಯೂಬ್ ಚಾನಲ್​ನಲ್ಲಿ ಬಿಡುಗಡೆ ಆಗಿದ್ದು, ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

    ಗುರು ದೇಶಪಾಂಡೆ ನಿರ್ವಣ, ಜಡೇಶ್ ಕುಮಾರ್ ಹಂಪಿ ಚಿತ್ರಕಥೆ, ನಿರ್ದೇಶನದ ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್​ಗೆ ನಟಿ ನಿಶ್ವಿಕಾ ನಾಯ್ಡು ಜತೆಯಾಗಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್​ಅನ್ನು ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಥೇಟ್ ಕುಂಭಕರ್ಣನಂತೆ ನಟ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ದಿನದ 24 ಗಂಟೆಗಳಲ್ಲಿ 18 ಗಂಟೆ ನಿದ್ರಿಸುವ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಪೀಡಿತ ನಾಯಕನ ಸುತ್ತ ಹೆಣೆದ ಕಥೆ ಇದಾಗಿದೆ.

    ಯುವತಿಯರ ಅಪಹರಣ ಮತ್ತು ಡ್ರಗ್ಸ್ ಜಾಲ ಬೇಧಿಸುವ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟ ಸಂಚಾರಿ ವಿಜಯ್ ಅಭಿನಯಿಸಿದ್ದಾರೆ. ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಸಿನಿಪ್ರಿಯರಿಂದ ಉತ್ತಮ ಅಭಿಪ್ರಾಯ ಪಡೆದಿರುವ ‘ಜಂಟಲ್​ವ್ಯಾನ್’ ಶೀಘ್ರವೇ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts