ವಿಜಯವಾಣಿ ಸುದ್ದಿಜಾಲ ಕಲಬುರಗಿ
ತಾಲೂಕು ಕೇಂದ್ರಗಳು ಸೇರಿ ಎಲ್ಲೆಲ್ಲಿ ಮಿನಿ ವಿಧಾನಸೌಧಗಳಿವೆ ಅವುಗಳ ಹೆಸರನ್ನು ಪ್ರಜಾಸೌಧಗಳು ಎಂದು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕಲಬುರಗಿ ವಿಶೇಷ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ತಾಲೂಕು ಸೌಧ ನಿರ್ವಣಕ್ಕೆ ಮಾಡುವ ವೆಚ್ಚದ ಕುರಿತು ಎದ್ದಿದ್ದ ಗೊಂದಲಕ್ಕೂ ಸರ್ಕಾರ ತೆರೆ ಎಳೆದಿದೆ. ರಾಜ್ಯವ್ಯಾಪಿ ತಾಲೂಕು ಆಡಳಿತಸೌಧ ಕಟ್ಟಡಗಳನ್ನು ಏಕರೂಪ ವಿನ್ಯಾಸ ಹಾಗೂ ಟೈಪ್-ಎ ಕಟ್ಟಡಕ್ಕೆ 8.60 ಕೋಟಿ ರೂ., ಟೈಪ್- ಬಿ ಕಟ್ಟಡಕ್ಕೆ 10.70 ಕೋಟಿ ರೂ., ಟೈಪ್-ಸಿ ಕಟ್ಟಡ 16 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ವಿುಸಲು ಸಂಪುಟ ಸಭೆ ಅನುಮೋದನೆ ನೀಡಿತು.
ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಿನಿ ವಿಧಾನಸೌಧವನ್ನು ಪ್ರಜಾಸೌಧ ಎಂದು ಮರುನಾಮಕರಣ ಮಾಡುವ ವಿಚಾರ ಸ್ಪಷ್ಟಪಡಿಸಿದರು. ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಹಾಗೂ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಹೊಸ ನೀತಿ: ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ನೀತಿ ಜಾರಿಗೊಳಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ನೀರು ನಿರ್ವಹಣೆ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿಯು ರಾಜ್ಯದ ಎಲ್ಲ ಜನವಸತಿಗಳಿಗೆ ಅನ್ವಯಿಸುತ್ತದೆ. ಈ ನೀತಿಯು ನೀರಿನ ಸಂಪನ್ಮೂಲಗಳ, ಮೂಲಸೌಕರ್ಯ ಸ್ವತ್ತುಗಳ, ಹಣಕಾಸು ವ್ಯವಸ್ಥೆ, ಸಾಮರ್ಥ್ಯ ವೃದ್ಧಿ, ಮಾಹಿತಿ ಶಿಕ್ಷಣ, ಸಂವಹನ ಹಾಗೂ ಸಾಂಸ್ಥಿಕ ಮತ್ತು ವ್ಯವಸ್ಥೆಗಳ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿವಿಧ ಅಂಶಗಳನ್ನು ಒಳಗೊಂಡಿದೆ.
15 ಕಡೆ ಮಹಿಳಾ ಕಾಲೇಜು: ವಕ್ಪ್ ಮಂಡಳಿಯಿಂದ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಅನುಮೋದನೆ ದೊರೆತಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯಪಾಲರ ಅಧಿಕಾರ ಮೊಟಕು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಹಾಗೆಯೇ ಕುಲಪತಿಗಳ ನೇಮಕಾತಿಯನ್ನು ರಾಜ್ಯ ಸರ್ಕಾರವೇ ಮಾಡಲು ಸಂಪುಟ ನಿರ್ಧರಿಸಿದೆ. ಈ ಮೂಲಕ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಲಿದೆ.
22ರಂದು ಬಾಗಿನ ಅರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ಸೆ.22 ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಂಪುಟ ಮುಖ್ಯಾಂಶ
1. ಪ್ರಧಾನಮಂತ್ರಿ ಜನ್ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯಡಿ 23.766 ಕಿ.ಮೀ. ಉದ್ದದ 18 ಸಂಖ್ಯೆಯ ರಸ್ತೆ ಹಾಗೂ 2 ಸೇತುವೆ ಕಾಮಗಾರಿಗೆ -ಠಿ;30.47 ಕೋಟಿ
2. ರಾಜ್ಯಾದ್ಯಂತ 43 ಕಾರ್ವಿುಕ ಅಧಿಕಾರಿಗಳ ವ್ಯಾಪ್ತಿಯಲ್ಲಿ ತಲಾ 1ರಂತೆ ಸ್ಥಿರ ಮತ್ತು ಸಂಚಾರಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಕಾರ್ವಿುಕ ಸೇವಾ ಕೇಂದ್ರ ಸ್ಥಾಪಿಸಲು 48.08 ಕೋಟಿ ರೂ.
3. ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ವಸತಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಆಹಾರ ನೀಡಲು 21 ಕೋಟಿ ರೂ. ನೀಡಲಿದ್ದು, ಇದರಲ್ಲಿ ಶೇ.50 ಪೌಷ್ಟಿಕಾಂಶದ ಆಹಾರ ಹಾಗೂ ಶೇ. 50 ಹಣಕ್ಕೆ ಮೊಟ್ಟೆಯನ್ನು ಟೆಂಡರ್ ಮೂಲಕ ಖರೀದಿಸಿ ವಿತರಿಸಲು ಒಪ್ಪಿಗೆ.
4. 2024-25ನೇ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಮವಸ್ತ್ರ ವಿತರಿಸಲು 13.75 ಕೋಟಿ ರೂ.
5. ಗದಗ, ಕೊಪ್ಪಳ, ಚಾಮರಾಜನಗರದಲ್ಲಿನ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಹಾಗೂ ಪೀಠೋಪಕರಣ ಖರೀದಿಗೆ 149.03 ಕೋಟಿ ರೂ.
6. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಎಂಆರ್ಐ ಯಂತ್ರ ಖರೀದಿಸಲು 85.60 ಕೋಟಿ ರೂ.
ಮಾಗಡಿಯಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರ ದುರ್ಮರಣ