ಅಭಿವೃದ್ಧಿಯ ಪರ್ಯಾಯ ಹೆಸರೇ ಹಿಂದುತ್ವ ಎಂದ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ಗೆ ದಿಗ್ವಿಜಯ ಮಾಲೆ

ನವದೆಹಲಿ: ಅಭಿವೃದ್ಧಿಯ ಪರ್ಯಾಯ ಹೆಸರೇ ಹಿಂದುತ್ವ ಎಂದು ಹೇಳಿ ಮತದಾರರನ್ನು ಓಲೈಸಿದ್ದ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರ ಕೊರಳಿಗೆ ಭೋಪಾಲ್​ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ ಮಾಲೆ ಬೀಳುವುದು ಖಚಿತವಾಗಿದೆ.

2008ರ ಮಾಲೇಗಾಂವ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಮಹಾತ್ಮಾ ಗಾಂಧಿ ಕೊಂದ ನಾಥೂರಾಂ ಗೋಡ್ಸೆ ದೇಶಭಕ್ತ ಎಂದು ಹಾಗೂ ವಿಚಾರಣೆ ನೆಪದಲ್ಲಿ ತಮಗೆ ತೊಂದರೆ ಕೊಟ್ಟಿದ್ದಕ್ಕೆ ಮಹಾರಾಷ್ಟ್ರ ಉಗ್ರ ನಿಗ್ರಹ ಘಟಕದ ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆಗೆ ಶಾಪ ಕೊಟ್ಟಿದ್ದರಿಂದ ಅವರು ಉಗ್ರರ ಗುಂಡಿಗೆ ಬಲಿಯಾಗಿದ್ದಾಗಿ ಹೇಳಿ ವಿವಾದ ಸೃಷ್ಟಿಸಿದ್ದರು. ಇದರ ಹೊರತಾಗಿಯೂ ಜನರು ನಂಬಿಕೆಯಿಟ್ಟು ಸಾಧ್ವಿಯನ್ನು ಆಯ್ಕೆ ಮಾಡಿದ್ದಾರೆ.

1989ರಿಂದಲೂ ಬಿಜೆಪಿಯ ಹಿಡಿತದಲ್ಲಿರುವ ಕ್ಷೇತ್ರ
ಭೋಪಾಲ್​ ಲೋಕಸಭಾ ಕ್ಷೇತ್ರದ ಮೇಲೆ ಬಿಜೆಪಿ 1989ರಿಂದಲೂ ಹಿಡಿತ ಸಾಧಿಸಿದೆ. 2014ರಲ್ಲಿ ಬಿಜೆಪಿಯ ಅಲೋಕ್​ ಸಂಜಾರ್​ 3.8 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಕೂಡ ಪ್ರಜ್ಞಾ ಸಿಂಗ್​ ಠಾಕೂರ್​ ಅಂದಾಜು ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ.
ಈ ಬಾರಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರು ಅಭಿವೃದ್ಧಿಯನ್ನು ಹಿಂದುತ್ವಕ್ಕೆ ಹೋಲಿಸಿ ಭರ್ಜರಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್​ ವೋಟ್​ ಬ್ಯಾಂಕ್​ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಮಾಲೇಗಾಂವ್​ ಪ್ರಕರಣದ ವಿಚಾರಣೆ ನೆಪದಲ್ಲಿ ಪೊಲೀಸರು ತಮಗೆ ಹಿಂಸೆ ನೀಡಿದ್ದಾಗಿಯೂ, ಮತ್ತಾವುದೇ ಮಹಿಳೆಗೂ ಈ ರೀತಿ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದರು. ಮತದಾರರ ಮನಗೆಲ್ಲಲು ಈ ಎರಡು ಅಂಶಗಳು ಸಾಧ್ವಿ ಅವರಿಗೆ ಅನುಕೂಲ ಮಾಡಿಕೊಟ್ಟವು ಎನ್ನಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *