ಪ್ರಧಾನಿ ಮೋದಿ, ಅಮಿತ್​ ಷಾ ಝಾಡಿಸಿದ ಮೇಲೆ ಪ್ರಜ್ಞಾ ಸಿಂಗ್​ ಠಾಕೂರ್​ಗೆ ಜ್ಞಾನೋದಯ: ಸಾಧ್ವಿಯ ಮೌನ ವೃತ

ಭೋಪಾಲ್​: ನಾಥೂರಾಂ ಗೋಡ್ಸೆ ಹಾಗೂ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹುತಾತ್ಮ ಹೇಮಂತ್​ ಕರ್ಕರೆ ವಿರುದ್ಧ ಬಾಯಿ ಹರಿಬಿಟ್ಟು ಅನಗತ್ಯ ವಿವಾದಕ್ಕೆ ಸಿಲುಕಿದ್ದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಚೆನ್ನಾಗಿ ಝಾಡಿಸಿದ್ದಾರೆ. ಇದರಿಂದಾಗಿ ಸಾಧ್ವಿಗೆ ಜ್ಞಾನೋದಯವಾಗಿದ್ದು, 63 ಗಂಟೆ ಮೌನ ವೃತಕ್ಕೆ ಶರಣಾಗಿದ್ದಾರೆ.

2008ರ ಮಾಲೆಗಾಂವ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ಞಾ ಸಿಂಗ್​ ಠಾಕೂರ್​ ಪ್ರಾಯಶ್ಚಿತ್ತದ ಜತೆಗೆ ಆತ್ಮಾವಲೋಕನದ ಉದ್ದೇಶದಿಂದ ಮೌನ ವೃತ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕೆಲದಿನಗಳ ಹಿಂದಷ್ಟೇ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ದೇಶ ಭಕ್ತ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು. ಇದಕ್ಕೂ ಮುನ್ನ ಮುಂಬೈನ ಭಯೋತ್ಪಾದಕ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹುತಾತ್ಮ ಹೇಮಂತ್​ ಕರ್ಕರೆ ತಮ್ಮ ಶಾಪದಿಂದಾಗಿಯೇ ಉಗ್ರರ ಗುಂಡಿಗೆ ಬಲಿಯಾಗಿದ್ದಾಗಿ ಹೇಳಿದ್ದರು.

ತಮ್ಮೆಲ್ಲ ವಿವಾದಾತ್ಮಕ ಹೇಳಿಕೆಗಳಿಗೆ ಟ್ವೀಟ್​ ಮೂಲಕ ಕ್ಷಮೆಯಾಚಿಸಿರುವ ಪ್ರಜ್ಞಾ ಸಿಂಗ್​ ಠಾಕೂರ್​, ಚುನಾವಣೆ ಪ್ರಕ್ರಿಯೆಗಳೆಲ್ಲವೂ ಮುಗಿದ ನಂತರದಲ್ಲಿ ಆತ್ಮಾವಲೋಕನಕ್ಕೆ ಸಮಯ ಒದಗಿ ಬಂದಿದೆ. ಈ ಅವಧಿಯಲ್ಲಿ ನನ್ನ ಮಾತುಗಳಿಂದ ದೇಶಭಕ್ತರಿಗೆ ನೋವಾಗಿದ್ದರೆ ಅವರಲ್ಲಿ ಕ್ಷಮೆಯಾಚಿಸುವೆ. ಸಾರ್ವಜನಿಕ ಜೀವನದ ಶಿಷ್ಟಾಚಾರ ಮತ್ತು ಪಶ್ಚಾತ್ತಾಪದಿಂದ ನಾನು 21 ಪ್ರಹಾರ ಮೌನ ವೃತ ಆಚರಿಸಲು ನಿರ್ಧರಿಸಿದ್ದೇನೆ ಎಂದು ಟ್ವೀಟ್​ನಲ್ಲಿ ವಿವರಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *