ಅಂಗವಿಕಲರು ಕೀಳರಿಮೆ ಮೀರಿ ಸಾಧನೆ ಮಾಡಿ

ಮೈಸೂರು: ಅಂಗವಿಕಲರು ಹಿಂಜರಿಕೆ ಮತ್ತು ಕೀಳರಿಮೆಯನ್ನೂ ಮೀರಿ ಸಾಧನೆ ಮಾಡಿ ಉಳಿದವರಿಗೆ ಮಾದರಿಯಾಗಬೇಕು ಎಂದು ಜಿಂದಾಲ್ ಅಲ್ಯುಮಿನಿಯಂ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರಗುನ್ ಜಿಂದಾಲ್ ಖೈತಾನ್ ಸಲಹೆ ನೀಡಿದರು.

ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿರುವ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಡಾ.ಸೀತಾರಾಮ್ ಜಿಂದಾಲ್ ಕಂಪ್ಯೂಟರ್ ಸೈನ್ಸ್ ಬ್ಲಾಕ್, ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಬ್ಲಾಕ್‌ಗಳ ವಿಸ್ತೃತ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.

ಯಶಸ್ವಿಗೆ ಅಡ್ಡದಾರಿ ಇಲ್ಲ. ಅದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಸಾಧನೆ ದಾರಿಯಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ನಿಭಾಯಿಸಬೇಕು. ಅಂಗವಿಕಲರು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜು ನೆರವಾಗಲಿದೆ. ಇಲ್ಲಿ ಶಿಕ್ಷಣ ಪಡೆಯುವ ಮೂಲಕ ಡಿಪ್ಲೊಮಾ ಇಂಜಿನಿಯರಿಂಗ್, ಇಂಜಿನಿಯರ್ ಪೂರ್ವ ಪದವಿ ಶಿಕ್ಷಣವನ್ನು ಪಡೆಯಬಹುದಾಗಿದೆ ಎಂದರು.

ಭಾರತದಲ್ಲಿ ಅಂಗವಿಕಲರಿಗಾಗಿ ಇರುವ ಏಕೈಕ ಪಾಲಿಟೆಕ್ನಿಕ್ ಕಾಲೇಜು ಇದಾಗಿದೆ. ಇದು ಈ ಸಮುದಾಯದವರಿಗೆ ಸ್ಫೂರ್ತಿದಾಯಕವಾಗಿದೆ. ನಮ್ಮ ಸಂಸ್ಥೆಯ ಅನುದಾನದಲ್ಲಿ ಈ ಕಾಲೇಜಿನ ಕಟ್ಟಡ ಇನ್ನಷ್ಟು ವಿಶಾಲವಾಗಿದ್ದು, ಇದರಿಂದ ಪ್ರತಿ ತರಗತಿಗಳಿಗೂ 100 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಪ್ರವೇಶ ಪಡೆಯಲು ಅವಕಾಶ ದೊರೆತಿದೆ. ಆ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಸಾವಿರ ಅಂಗವಿಕಲ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ ಎಂದರು.

ಜಿಂದಾಲ್ ಅಲ್ಯುಮಿನಿಯಂ ಸಂಸ್ಥೆಯ 5 ಕೋಟಿ ರೂ. ಅನುದಾನದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಇದನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿನಿಲಯವು 12+12 ಕೊಠಡಿಗಳನ್ನು ಹೊಂದಿದ್ದು, ಕಂಪ್ಯೂಟರ್ ಸೈನ್ ವಿಭಾಗದಲ್ಲಿ ಸ್ಮಾರ್ಟ್ ತರಗತಿ ಸೇರಿ ಆರು ತರಗತಿ ಕೊಠಡಿಗಳಿವೆ ಎಂದು ಮಾಹಿತಿ ನೀಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಂದಾಲ್ ಅಲ್ಯುಮಿನಿಯಂ ಸಂಸ್ಥೆ ಉಪಾಧ್ಯಕ್ಷ ಕೆ.ಆರ್.ರಘುನಾಥ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‌ಎಸ್ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಸಿ.ಜಿ.ಸಂಗಮೇಶ್ವರ, ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥ್, ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್ ಈ ಸಂದರ್ಭದಲ್ಲಿದ್ದರು.

Leave a Reply

Your email address will not be published. Required fields are marked *