ಬಡವರ ಸಂಜೀವಿನಿ

| ಡಾ.ಎಸ್.ಡಿ. ನಾಯ್ಕ ಆರ್ಥಿಕತಜ್ಞರು, ಕಾರವಾರ

ಉಜ್ವಲ ಅನಿಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ 6 ಕೋಟಿ ಸಂಪರ್ಕಗಳನ್ನು ಕಲ್ಪಿಸಿ ದಾಖಲೆ ನಿರ್ವಿುಸಿದೆ. ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ಇದೂ ಒಂದು ಆಶಾದಾಯಕ ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆ. 2016ರ ಮೇ 1ರಂದು ಅನುಷ್ಠಾನಗೊಂಡ ಈ ಯೋಜನೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಬಡತನದ ರೇಖೆಯ ಕೆಳಗಿನ ಕುಟುಂಬದವರಿಗೆ ಎಲ್​ಪಿಜಿ ಸಂಪರ್ಕ ಕಲ್ಪಿಸಿಕೊಡುವ ಮೂಲಕ ನೈರ್ಮಲ್ಯರಹಿತ ಅಡುಗೆ ಮನೆಯನ್ನು ನಿರ್ವಿುಸಲಾಗುತ್ತಿದೆ. ಈ ಯೋಜನೆ ಅನುಷ್ಠಾನಗೊಂಡಾಗಿನಿಂದ ಒಂದು ಕುಟುಂಬ ವರ್ಷಕ್ಕೆ ಸರಾಸರಿ 3.5 ಸಿಲಿಂಡರ್​ಗಳನ್ನು ಬಳಕೆ ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ.

ಯೋಜನೆಯ ಲಾಭ ಬಡತನ ರೇಖೆಯ ಕೆಳಗಿರುವವರಿಗೆ ಲಭಿಸುತ್ತದೆ. ಮನೆಯ ಹೆಣ್ಣುಮಗಳ ಹೆಸರಿನಲ್ಲಿ ಮಾತ್ರ ನೀಡಲಾಗುವದು. 18 ವರ್ಷ ಮೇಲ್ಪಟ್ಟವರಾಗಿದ್ದು, ಈಗಾಗಲೇ ಎಲ್​ಪಿಜಿ ಸಂಪರ್ಕ ಹೊಂದಿರಬಾರದು. ಭಾರತದಲ್ಲಿ ಸುಮಾರು 25 ಕೋಟಿ ಕುಟುಂಬಗಳಿವೆ. ಅವರಲ್ಲಿ 10 ಕೋಟಿ ಕುಟುಂಬಗಳಿಗೆ ಎಲ್​ಪಿಜಿ ಸಂಪರ್ಕ ಇನ್ನೂ ಇಲ್ಲ. ಅಂಥವರು, ಉರುವಲು ಕಟ್ಟಿಗೆ, ಕಲ್ಲಿದಲು, ಸಗಣಿಯ ಬೆರಣಿ, ಜೋಳದ ದಂಟು ಮುಂತಾದವುಗಳನ್ನು ಬಳಸಿ ಒಲೆ ಉರಿಸುತ್ತಾರೆ. ಅಂಥವರಿಗೆ ಆರೋಗ್ಯದಾಯಕ ಇಂಧನವೆಂದು ಅಡುಗೆ ಅನಿಲದ ಸಂಪರ್ಕ ನೀಡುವುದೇ ಈ ಯೋಜನೆಯ ಉದ್ದೇಶ. ಈ ಬಗ್ಗೆ ಕೇಂದ್ರ ಸರ್ಕಾರ ಒಟ್ಟು ರೂ.8000 ಕೋಟಿಯಷ್ಟು ಹಣವನ್ನು ಮಂಜೂರು ಮಾಡಿದೆ. ಪ್ರತಿ ಕುಟುಂಬಕ್ಕೆ ಒಲೆ, ರಿಫಿಲ್ ಮತ್ತು ಇನ್ನಿತರ ಸಲಕರಣೆಗೆಂದು ರೂ.1600 ನೀಡುತ್ತಿದೆ. ಇದರ ಘೊಷವಾಕ್ಯ, ‘ಪ್ರತಿಯೋರ್ವ ಸ್ತ್ರೀ ತನಗೆ ಸಲ್ಲಬೇಕಾದ ಗೌರವ ಮತ್ತು ಘನತೆಯನ್ನು ಪಡೆಯಬೇಕು’ ಎನ್ನುವುದಾಗಿದೆ.

ಉದ್ಯೋಗಾವಕಾಶ ಹೆಚ್ಚಳ

ಉಜ್ವಲ ಅನಿಲ ಯೋಜನೆಯಿಂದಾಗಿ ಅರಣ್ಯ ನಾಶಕ್ಕೆ ತೆರೆ ಬೀಳುವ ಜತೆಗೆ, ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಅಡುಗೆ ಮಾಡುವ ಸಮಯದಲ್ಲಿ ಉಳಿತಾಯವಾಗುತ್ತಿದೆ. ಇದರಿಂದ ಅವರು ತಮ್ಮ ಸಮಯವನ್ನು ಇನ್ನಿತರ ಕೆಲಸಗಳ ಕಡೆ ನೀಡಲು ಸಾಧ್ಯವಾಗುತ್ತಿದೆ. ಅಷ್ಟೇ ಅಲ್ಲ, ಗ್ರಾಮೀಣ ಭಾಗದ ಎಲ್​ಪಿಜಿ ಗ್ರಾಹಕರು ಈಗ ಅಡುಗೆಗೆ ಕುಕ್ಕರ್​ಗಳನ್ನು ಬಳಸಲು ಆರಂಭಿಸಿದ್ದಾರೆ. ಹೀಗಾಗಿ, ಕುಕ್ಕರ್​ಗಳಿಗೆ ಬೇಡಿಕೆ ಏರಿ, ಉತ್ಪಾದನೆ ಹೆಚ್ಚುತ್ತಿದೆ. ಈ ಹಿಂದೆ ಪ್ರೆಷರ್ ಕುಕ್ಕರ್​ಗಳಿಗೆ ಕೇವಲ ಶೇ.5.6ರಷ್ಟು ಬೇಡಿಕೆ ಇತ್ತು. ಈಗ ಅದು ಶೇ.10-11ಕ್ಕೆ ತಲುಪಿದೆ. ಅಂದರೆ ಅವುಗಳ ಬೇಡಿಕೆ ಹಿಂದಿನ ಒಂದಂಕಿಯಿಂದ ಎರಡಂಕಿಗೆ ಏರಿದಂತಾಗಿದೆ. ಉಜ್ವಲ ಅನಿಲ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ನಗರ ಪ್ರದೇಶದಲ್ಲಿ ಮಾತ್ರ ಕುಕ್ಕರ್​ಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಗ್ರಾಮೀಣ ಪ್ರದೇಶಗಳಲ್ಲಿ ಶೇ.30ರಷ್ಟು ಮಾತ್ರ ಬೇಡಿಕೆ ಇತ್ತು. ಈಗ ಇಲ್ಲಿ ಬೇಡಿಕೆ ಶೇ. 65ರಷ್ಟಾಗಿದೆ. ಜತೆಗೆ, ಸಂಘಟಿತ ವಲಯದ ಕುಕ್ಕರ್ ಉದ್ದಿಮೆಗಿಂತ ಅಸಂಘಟಿತ ವಲಯದ ಕುಕ್ಕರ್ ಉದ್ದಿಮೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ಆದುದರಿಂದ ಸ್ವಯಂ ಉದ್ಯೋಗಾವಕಾಶಗಳು ಹೆಚ್ಚುತ್ತಲಿವೆ.

ಧ್ಯೇಯಗಳು

# ಸ್ತ್ರೀ ಶಕ್ತಿಗೆ ಉತ್ತೇಜನ ಮತ್ತು ಅವರ ಆರೋಗ್ಯ ರಕ್ಷಣೆಗೆ ಆದ್ಯತೆ.

# ಅಸುರಕ್ಷಿತವಾಗಿ ಅಡುಗೆಯಿಂದಾಗುವ ಸಾವು-ನೋವುಗಳನ್ನು ಕಡಿಮೆ ಮಾಡುವುದು.

# ಸಸ್ಯ ಹಾಗೂ ಪ್ರಾಣಿಜನ್ಯ ತ್ಯಾಜ್ಯ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಕಡಿಮೆ ಮಾಡುವುದು.

# ದೂಷಿತ ಅಡುಗೆ ಮನೆಯ ಹೊಗೆಯಿಂದಾಗುವ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವುದು.

# ಉರುವಲಿಗಾಗಿ ಅವ್ಯಾಹತ ನಡೆಯುತ್ತಿರುವ ಅರಣ್ಯನಾಶಕ್ಕೆ ಮಂಗಲ ಹಾಡುವುದು.