More

  ಮನೆತನ, ಕುಲದೇವರ ಹಿನ್ನೆಲೆಯ ಹಾದಿ…

  ಮನೆತನ, ಕುಲದೇವರ ಹಿನ್ನೆಲೆಯ ಹಾದಿ...ಪ್ರತಿಯೊಂದು ಕುಟುಂಬಕ್ಕೂ ಕುಲದೇವರು ಎಂದಿರುತ್ತದೆ. ಆ ಮನೆತನವು ಅದಕ್ಕೆ ನಿಷ್ಠೆಯಿಂದ ನಡೆದುಕೊಳ್ಳುವುದು. ಯಾವುದೇ ಶುಭಕಾರ್ಯ ನಡೆಯಬೇಕೆಂದರೂ ಕುಲದೇವರಿಗೆ, ಗುರುಪೀಠಕ್ಕೆ ಗೌರವ ಸಲ್ಲಿಸುವುದು ಕರ್ತವ್ಯ. ಸ್ಥಳದೇವರು, ಗ್ರಾಮದೇವರು, ಪುಣ್ಯಕ್ಷೇತ್ರಗಳು ಮಾನವನ ರಕ್ತದಲ್ಲಿಯೇ ಅಡಗಿವೆ. ಕಾಶಿ, ರಾಮೇಶ್ವರ, ಗೋಕರ್ಣಕ್ಕೆ ಹೋಗಲು ಬಯಸದ ಆಸ್ತಿಕ ಇಲ್ಲವೇ ಇಲ್ಲ. ನಿರಾಕಾರ ಸಾಧನೆ ಬಹು ಕಷ್ಟ. ಆದುದರಿಂದ ಅದ್ವೈತಿಗಳು ದೇವಸ್ಥಾನವನ್ನೇ ಕಟ್ಟಿದರು. ಸಾಕಾರದಿಂದ ನಿರಾಕಾರಕ್ಕೆ ಏರುವ ಮಾರ್ಗದರ್ಶಿ. ನಡೆಯಲು ಬರದ ಮಗುವನ್ನು ತಂದೆ-ತಾಯಿಗಳು ಕೈಹಿಡಿದು ನಡೆಸಿದಂತೆ! ತಾನೇ ತಿರುಗಲು ಪ್ರಬುದ್ಧನಾದಾಗ ಅವನಿಗೆ ಯಾವ ಆಸರೆಯೂ ಬೇಕಾಗುವುದಿಲ್ಲ. ಸ್ವ-ಅಭ್ಯಾಸಯೋಗದಲ್ಲಿಯೂ ಜಾರಿಬೀಳುವುದು, ಏಳುವುದು, ಧೃಢತೆಯಿಂದ ಗುರಿ ತಲುಪುವವರೆಗೆ ಸಾಗುವ ಕಠಿಣ ಮಾರ್ಗ ಇದ್ದೇ ಇದೆ.

  ದೇವಸ್ಥಾನವು ದೇವರು ನೆಲೆಸಿರುವ ಸ್ಥಳ. ಭಕ್ತಿಯನ್ನು ಮೂಡಿಸುವ ಮಂದಿರ. ಯಜ್ಞ-ಯಾಗ, ಹವನ-ಹೋಮಗಳು ನಡೆಯುವುದಲ್ಲದೆ; ಧಾರ್ವಿುಕ, ಆಧ್ಯಾತ್ಮಿಕ, ಮದುವೆ, ಬ್ರಹ್ಮೋಪದೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಊರ ಮತ್ತು ಸಮಾಜದ ಒಗ್ಗಟ್ಟಿಗೆ ದೇವಾಲಯವು ಕಾರಣವಾಗಿದೆ. ಶಾಂತಿ, ನೆಮ್ಮದಿ, ಏಕಾಗ್ರತೆಗಾಗಿ ದೇವಮಂದಿರಕ್ಕೆ ನಂಬಿಗೆಯಿಂದ ಹೋಗುವರು. ಸಮಸ್ಯೆಗಳನ್ನು ಪರಿಹರಿಸುವ ಕ್ಷೇತ್ರವೆಂದು ದೇವಸ್ಥಾನ ಪ್ರಸಿದ್ಧವಾಗಿದೆ. ನಾಗದೋಷವಿದ್ದರೆ ಸುಬ್ರಹ್ಮಣ್ಯ, ಪ್ರೇತದೋಷವಿದ್ದರೆ ಗಾಣಗಾಪುರ ಇತ್ಯಾದಿ ನಂಬಿಗೆಗಳಿವೆ.

  ಜನವಸತಿ ಅಸ್ತಿತ್ವಕ್ಕೆ ಬಂದ ನಂತರ ಸ್ಮಶಾನವೂ ಅಸ್ತಿತ್ವಕ್ಕೆ ಬರುತ್ತದೆ. ಆ ಸ್ಮಶಾನವೇ ಶಿವನಿಗೆ ಸಮಾಧಿಸ್ಥಾನ. ಶಿವನ ವಾಸಸ್ಥಾನವೂ ಸ್ಮಶಾನವೇ. ಸಾಮಾನ್ಯವಾಗಿ ಪ್ರಾಚೀನ ಶಿವಾಲಯಗಳೆಲ್ಲವೂ ಮೂಲ ಜನವಸತಿಯ ಈಶಾನ್ಯಕ್ಕೆ ಮತ್ತು ಕೆರೆಯ ಏರಿಗೆ ಹೊಂದಿಕೊಂಡಿರುವುದು. ಈಶಾನ್ಯ ದಿಕ್ಕು ಮತ್ತು ನೀರಿನ ಸಂಗ್ರಹ ಇರುವ ಸ್ಥಳವೇ ಲಯಕರ್ತ ಶಿವನ ಸ್ಥಾನ. ಸ್ಥಿತಿಕರ್ತ ವಿಷ್ಣುವಿಗೆ ಜನವಸತಿಯ ನಡುವಿನಲ್ಲಿ ಸ್ಥಾನ ಲಭಿಸುತ್ತದೆ. ಸೃಷ್ಟಿಕರ್ತ ಎನಿಸಿಕೊಂಡ ಬ್ರಹ್ಮನಿಗೆ ಪೂಜೆಯೇ ಅಪರೂಪ. ಆದ್ದರಿಂದ ಅವನ ಹೆಸರಿನಲ್ಲಿರುವ ದೇವಾಲಯಗಳ ಸಂಖ್ಯೆ ಕಡಿಮೆ. ಆದರೂ ಈಗಿತ್ತ ಬ್ರಹ್ಮದೇವಾಲಯಗಳು ಸಾಕಷ್ಟು ಕಡೆ ಇದೆ. ದೇವಾಲಯದ ಭಿತ್ತಿ, ದೇವಕೋಷ್ಠ ಅಥವಾ ಗೂಡುಗಳಲ್ಲಿ ಬ್ರಹ್ಮನಿಗೆ ಅಲಂಕಾರದ ಸ್ಥಾನವಿರುತ್ತದೆ. ಮೊದಲಿಗೆ ಸಮಾಧಿ, ಅನಂತರ ಶಿವಾಲಯಗಳ ನಿರ್ವಣ, ಅನಂತರ ವಿಷ್ಣು ಮತ್ತು ವಿಷ್ಣುವಿನ ನಾನಾ ಅವತಾರಗಳಿಗೆ ಸಂಬಂಧಿಸಿದ ದೇವಾಲಯಗಳು ನಿರ್ವಣವಾಗಿವೆ. ಇವು ಜನವಸತಿಯ ನಡುವೆ ಇದ್ದರೆ ಈಗ ಯಾವ ಅಭ್ಯಂತರವೂ ಇಲ್ಲ. ಬೌದ್ಧ ಸ್ತೂಪಗಳು ಮತ್ತು ಜೈನರ ಬಸದಿಗಳು ಮತ್ತು ಬಸದಿಗಳೂ ಜನವಸತಿಗೆ ಸ್ವಲ್ಪ ದೂರದಲ್ಲೇ ನಿರ್ವಣಗೊಂಡಿವೆ. ಭಾರತದಲ್ಲಿ ವೇದಕಾಲೀನ ಅಗ್ನಿ, ಇಂದ್ರ, ಸೋಮ, ವಾಯುಗಳನ್ನು ಹೊರತುಪಡಿಸಿದರೆ ಪ್ರಾಚೀನ ದೇವಾಲಯಗಳು ಸಿಗುವುದು ಅಪರೂಪ. ವೇದಕಾಲದ ನಂತರ ಈ ದೇವರುಗಳಿಗೆ ಅಲ್ಲಲ್ಲಿ ದೇವಾಲಯವನ್ನು ನಿರ್ವಿುಸಿದ್ದು ಕಂಡುಬರುವುದು.

  ತನ್ನ ಹುಟ್ಟಿಗೆ ಕಾರಣಳಾದ ತಾಯಿಯೂ ಮನುಷ್ಯನ ದೃಷ್ಟಿಯಲ್ಲಿ ದೇವರಾಗಿದ್ದಾಳೆ. ಆ ಕಾರಣದಿಂದಲೇ ಲಜ್ಜಾಗೌರಿ, ಉಡಚವ್ವ, ಕಮಲವ್ವ ಎಂದು ಕರೆಯಲಾಗುವ ಕಬಂಧ ಯೋನಿಶಿಲ್ಪಗಳಿಗೂ ಪೂಜೆ ಸಲ್ಲುತ್ತದೆ. ಕರ್ನಾಟಕದಲ್ಲಿ ಇಂತಹ ಲಜ್ಜಾಗೌರಿಯ ಪ್ರಾಚೀನ ಶಿಲ್ಪಗಳೂ ಇವೆ. ಮಾತೃಪೂಜೆ ಮತ್ತು ಪಿತೃಪೂಜೆಗಳ ಮುಂದುವರಿಕೆಯಾಗಿ ದೇವರುಗಳ ಸೃಷ್ಟಿ ಮತ್ತು ಅವರ ಪೂಜೆ ನಡೆದಿದೆ. ದೇವರು ಎಂದು ಕಲ್ಪಿಸಿಕೊಳ್ಳಲಾದ ಮೂರ್ತಿಗೊಂದು ನೆಲೆಯಾದ ಮತ್ತು ಸಾರ್ವಜನಿಕ ಸಮಾವೇಶಕ್ಕೆ ಅವಕಾಶ ನೀಡಿದ ಸ್ಥಳವೇ ದೇವಾಲಯ. ಕರ್ನಾಟಕದಲ್ಲಿ ಮಾತೃಪೂಜೆ, ಪಿತೃಪೂಜೆ ಮತ್ತು ಪ್ರಕೃತಿಪೂಜೆಗಳು ಪ್ರಾಚೀನಕಾಲದಿಂದಲೂ ಇವೆ. ಈಗಾಗಲೇ ಹೇಳಿರುವಂತೆ ಬೃಹತ್ ಶಿಲಾಯುಗ ಅಥವಾ ಕಬ್ಬಿಣಯುಗದ ಕಲ್ಲಿನ ಕೋಣೆಯ ಸಮಾಧಿಗಳನ್ನು ಕೆಲವೆಡೆ ಪಾಂಡವರ ಗುಡಿ ಎಂದು ಕರೆಯಲಾಯಿತು. ಅವುಗಳಲ್ಲಿ ಕೆಲವು ನಂತರದ ಕಾಲದಲ್ಲಿ ದೇವಾಲಯಗಳಾಗಿ ರೂಪಾಂತರಗೊಂಡಿವೆ.

  ಆದಿಮಾನವನ ಕಾಲದಲ್ಲಿ ಮನುಷ್ಯನ ವಾಸಸ್ಥಾನಗಳಾಗಿದ್ದ ಗುಹೆಗಳು, ಮೃತರ ನೆಲೆಗಳಾಗಿ ಭಯ ಮತ್ತು ಗೌರವಗಳ ಕಾರಣದಿಂದ ಸಮಾಧಿ ಸ್ವರೂಪ ಪಡೆದು ಪಿತೃಪೂಜೆಯ ಸ್ಥಾನಗಳಾಗಿ ಮಹತ್ವ ಪಡೆಯಿತು. ಆ ಪಿತೃಗಳೇ ದೇವತೆಗಳಾಗಿ ಪರಿವರ್ತಿತರಾದರು. ಗುಹೆಗಳಲ್ಲಿ ತಮ್ಮ ಕಲ್ಪನೆಯನ್ನು ವರ್ಣಚಿತ್ರಗಳ ಮೂಲಕ ಅಭಿವ್ಯಕ್ತಿಸುತ್ತಿದ್ದ ಕ್ರಮವು ಅನಂತರ ಪರಿಷ್ಕಾರಗೊಂಡು ದೇವತೆಗಳ, ಸಮಕಾಲೀನ ವ್ಯಕ್ತಿಗಳ ಮತ್ತು ತಮ್ಮ ಕಲ್ಪನೆಯ ಪಾತ್ರಗಳನ್ನು ಶಿಲ್ಪಗಳ ಮೂಲಕ ಅಭಿವ್ಯಕ್ತಿಗೊಳಿಸುವುದರಲ್ಲಿ ಮುಂದುವರಿಯಿತು. ಈ ಕಾರಣದಿಂದಲೇ ಅಧಿಷ್ಠಾನ ಅಥವಾ ಗೂಡುಗಳ ಕೆಳಗಿನ ಪಟ್ಟಿಕೆಗಳಲ್ಲಿ ಕುಬ್ಜರು ಮತ್ತು ಕಂಬಗಳ ಮೇಲಿನ ಪಟ್ಟಿಕೆಗಳಲ್ಲಿ ಅಲಂಕರಣ ಶಿಲ್ಪಗಳು ಸ್ಥಾನ ಪಡೆದಿರುವ ಸಾಧ್ಯತೆಗಳಿವೆ.

  ದೇವಾಲಯದ ಸೃಷ್ಟಿಯಾದಾಗ ನವೀನತೆಯ ಪ್ರವೇಶವಾಯಿತು. ಕೆಲವರ ಮಹಾಸಾಹಸ ಹಾಗೂ ವ್ಯಕ್ತಿತ್ವ ದೇವರ ಸ್ಥಾನವನ್ನು ತಂದುಕೊಟ್ಟಿತು. ಅದರ ಜೊತೆ ಸಂಸ್ಕೃತಿ ಬದಲಾವಣೆಗಳು ಶಿಲ್ಪಕಲೆಯ ಮೇಲೆ ಪ್ರಭಾವವನ್ನು ಬೀರಿತು. ಕರ್ನಾಟಕ ಎನ್ನುವುದು ಸರ್ವಧರ್ಮಗಳ ಸಮನ್ವಯವಾಗಿದೆ. ಶಿಲ್ಪಕಲೆಯ ಮೇಲೆ ಅವುಗಳ ಪ್ರಭಾವವೂ ಆಗಿದೆ. ದಾಳಿಗಳಿಂದಾಗಿ ಎಷ್ಟೋ ನಾಶವೂ ಆಗಿದೆ. ‘ನನಗೆ ಇದು ಸಿಕ್ಕಿದರೆ ಇಷ್ಟು ದಾನ ಮಾಡುವೆ’ ಎನ್ನುವ ಸ್ವಾರ್ಥಬುದ್ಧಿಗಿಂತ ಅಧ್ಯಾತ್ಮದ ದೃಷ್ಟಿಯಿಂದ ದೇವಾಲಯದ ಪ್ರಾಮುಖ್ಯತೆಯನ್ನು ಗುರುತಿಸುವುದಷ್ಟೇ ಪ್ರಮುಖ ಉದ್ದೇಶ.

  ಅನಂತ ವೈದ್ಯ, ಯಲ್ಲಾಪುರ (ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts