More

  ಪ್ರಾಚೀನ ಜ್ಞಾನ| ಮನುಜನಲ್ಲೇ ದೈವತ್ವದ ದರ್ಶನ

  ಪ್ರಾಚೀನ ಜ್ಞಾನ| ಮನುಜನಲ್ಲೇ ದೈವತ್ವದ ದರ್ಶನಪ್ರತಿ ಜೀವಿಯೂ ದೇವರಿಗೆ ಸಮವೆಂದು ಸನಾತನಧರ್ಮ ಹೇಳುವುದು. ಹುಟ್ಟಿಸಿದ ತಂದೆ ಮಾತ್ರ ಪಿತೃವಲ್ಲ, ಮಾತೆ ಮಾತ್ರ ಮಾತೃವಲ್ಲ. ಐದು ತಂದೆ, ಐದು ತಾಯಿಯರನ್ನು ಪೂಜಿಸಬೇಕೆಂದಿದೆ. ಜನಕ, ಉಪನೇತ, ಕನ್ಯಾದಾತ, ಅನ್ನದಾತ, ವಿದ್ಯಾದಾತ (ಭಯತ್ರಾತ) – ಇವರು ಪಂಚಪಿತೃಗಳು. ತಂದೆಯ ಋಣವನ್ನು ತೀರಿಸುವುದು ಅಸಾಧ್ಯ. ಉಪನೇತನ ಋಣವನ್ನು ಗಾಯತ್ರಿಯ ಸಾಧನಾಸಿದ್ಧಿಯಿಂದ, ಕನ್ಯಾದಾತನ ಋಣವನ್ನು ವಂಶವೃದ್ಧಿಯಿಂದ, ಅನ್ನದಾತನ ಋಣವನ್ನು ಅನ್ನದಾನದಿಂದ, ವಿದ್ಯಾದಾತನ ಋಣವನ್ನು ವಿದ್ಯಾಸಿದ್ಧಿಯಿಂದ ಹಾಗೂ ವಿದ್ಯಾದಾನದಿಂದ ತೀರಿಸಬೇಕೆಂದು ಶಾಸ್ತ್ರ ಹೇಳುವುದು.

  ಹೆತ್ತ ಮಾತೆ, ಹೆಂಡತಿಯ ತಾಯಿ, ಅತ್ತಿಗೆ, ಗುರುಪತ್ನಿ, ರಾಜಪತ್ನಿ – ಇವರು ಪಂಚಮಾತೃಗಳು. ತಾಯಿಯ ಋಣವನ್ನು ತೀರಿಸುವುದು ಅಸಾಧ್ಯ. ‘ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟವ’ ಎನ್ನುವರು. ಉಪನಯನದ ಹೊಸ ಕಣ್ಣನ್ನು ನೀಡಿದ ನಂತರ, ಹೆಣ್ಣು ಕೊಟ್ಟ ಮಾವನೇ ಹೊಸ ಕಣ್ಣನ್ನು ನೀಡುವವ. ಹೆಣ್ಣು ಕೊಟ್ಟ ಅತ್ತೆ ತನ್ನ ಕರುಳಬಳ್ಳಿಯನ್ನೇ ಕೊಟ್ಟು ತಾನೂ ತಾಯಿ ಎನಿಸಿಕೊಳ್ಳುವಳು. ಕೈ ಹಿಡಿದವಳು ಅರ್ಧಾಂಗಿ ಎನಿಸುವಳು. ಅವಳಿಲ್ಲದೆ ಪತಿ ಪೂರ್ಣಾಂಗನಾಗುವುದಿಲ್ಲ. ಪತ್ನಿಗೆ ಪತಿಯೇ ದೇವರು. ಇದಕ್ಕಿಂತ ಸ್ವಾರಸ್ಯವಾದುದು ಪತಿಗೆ ಗರ್ಭವತಿಯಾದ ಪತ್ನಿಯೇ ದೇವರು. ‘ಜಾಯಾ ದೇವೋ ಭವ’ ಎನ್ನುವರು.

  ಮಹಾಭಾರತದಲ್ಲಿ ಶಕುಂತಲೆಯು ಹೇಳುವ ಮಾತು ಅರ್ಥಗರ್ಭಿತವಾಗಿದೆ. ‘ಪತಿಯು ಭಾರ್ಯುಯ ಗರ್ಭಾಂಬುಧಿಯನ್ನು ಶುಕ್ಲರೂಪವಾಗಿ ಪ್ರವೇಶಿಸಿ ಮಗನೆಂಬ ಅಭಿದಾನದಿಂದ ಪುನಃ ಅವಳಲ್ಲಿಯೇ ಹುಟ್ಟುತ್ತಾನೆ. ಈ ಕಾರಣದಿಂದಲೇ ಪತ್ನಿಗೆ ಜಾಯಾಶಬ್ದವು ಸಿದ್ಧವಾಗುವುದೆಂದು ಹಿಂದಿನ ಜ್ಞಾನಿಗಳ ಅಭಿಮತವಾಗಿದೆ’ (ಭಾರ್ಯಾಂ ಪತಿಃ ಸಮ್ಪ್ರವಿಶ್ಯ ಸ ಯಸ್ಮಾಜ್ಜಾಯತೇ ಪುನಃ | ಜಾಯಾಯಾಸ್ತದ್ಧಿ ಜಾಯಾತ್ವಂ ಪೌರಾಣಾಃ ಕವಯೋ ವಿದುಃ ||). ಇಂತಹ ಪುತ್ರನು ಪ್ರೇತರೂಪದಲ್ಲಿರುವ ಪಿತಾಮಹ, ಪ್ರಪಿತಾಮಹರ ಉದ್ಧಾರವನ್ನು ಮಾಡುವನು. ತಂದೆಯಾದವನೂ ಇದನ್ನೇ ಮಂತ್ರದ ಮೂಲಕ ಉಚ್ಚರಿಸುವನು. ‘ತನ್ನ ಭಾರ್ಯುಯನ್ನು ಅಥವಾ ತನ್ನ ಪುತ್ರನ ತಾಯಿಯನ್ನು ತಾಯಿಯಂತೆಯೇ ಗೌರವಿಸಬೇಕು’ (ತಸ್ಮಾದ್ಭಾರ್ಯಾಂ ನರಃ ಪಂ್ಯೇತ್ ಮಾತೃವತ್ಸುತ್ರಮಾತರಮ್ |). ತನ್ನನ್ನು ತಾನು ನೋಡಿಕೊಂಡಂತೆಯೇ ಕೈಹಿಡಿದ ಹೆಂಡತಿಯನ್ನು ಗೌರವದಿಂದ ನೋಡಿಕೊಳ್ಳಬೇಕು. ಸ್ತ್ರೀಯು ಆತ್ಮದ ಜನ್ಮಕ್ಷೇತ್ರ. ಜನ್ಮಭೂಮಿಯು ಪವಿತ್ರವಾದುದೆನ್ನುವಾದರೆ ಜನ್ಮಕ್ಷೇತ್ರವೂ ಪವಿತ್ರವಾದುದು. ಪತ್ನಿಯಾದವಳು ತಾಯಿಗೆ ಸಮಾನಳು. ತಾಯಿಗೆ ಸಮಾನಳಾದವಳು ದೇವರಿಗೆ ಸಮ ಎನ್ನುತ್ತಾರೆ. ‘ಭಾರ್ಯಾವಂತರೇ ಶ್ರೀಸಂಪನ್ನರಾಗಿರುತ್ತಾರೆ’ (ಭಾರ್ಯಾವನ್ತಃ ಶ್ರೀಯಾವನ್ತಾಃ). ಅಲ್ಲದೆ ಸಪತ್ನೀಕರಾಗಿದ್ದರೆ ಮಾತ್ರ ಯಜ್ಞ-ಯಾಗಾದಿಗಳನ್ನು ಮಾಡಲು ಅರ್ಹನಾಗಿರುತ್ತಾನೆ. ಆದುದರಿಂದಲೇ ಶ್ರೀರಾಮನು ಯಜ್ಞ ಮಾಡುವಾಗ ಸೀತೆಯ ಸ್ಥಾನದಲ್ಲಿ ಚಿನ್ನದ ಸೀತೆಯನ್ನು ಇರಿಸಿಕೊಂಡ.

  ಅತ್ತಿಗೆ ತಾಯಿಗೆ ಸಮಾನ: ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವ ಸಂದರ್ಭದಲ್ಲಿ ಸೀತೆಯು ಋಷ್ಯಮೂಕ ಪರ್ವತದಲ್ಲಿ ಆಭರಣಗಳನ್ನು ಎಸೆದು ಹೋಗುತ್ತಾಳೆ. ಶ್ರೀರಾಮ-ಲಕ್ಷ್ಮಣರು ಸುಗ್ರೀವನನ್ನು ಹುಡುಕುತ್ತ ಬರುತ್ತಾರೆ. ಪಂಪಾನದಿಯ ತೀರದಲ್ಲಿ ವಟು ಹನುಮನ ಪರಿಚಯವಾಗುತ್ತದೆ. ಅವನ ಮೂಲಕ ಋಷ್ಯಮೂಕಕ್ಕೆ ಬಂದ ಶ್ರೀರಾಮ-ಲಕ್ಷ್ಮಣರಿಗೆ ಸ್ನೇಹವಾದ ಮೇಲೆ ಸುಗ್ರೀವ ಆಭರಣದ ಗಂಟನ್ನು ತೋರುವನು. ಆಭರಣಗಳನ್ನು ಗುರುತಿಸಲು ಲಕ್ಷ್ಮಣನಿಗೆ ಶ್ರೀರಾಮ ಹೇಳಿದಾಗ, ‘ಅಣ್ಣ! ಅತ್ತಿಗೆಯ ಕಡಗಗಳು ಹೇಗಿದ್ದವೆಂಬುದು ನನಗೆ ತಿಳಿಯದು. ಅವಳ ಕುಂಡಲಗಳನ್ನು ನಾನು ಕಂಡವನೇ ಅಲ್ಲ. ಆದರೆ ನಿತ್ಯವೂ ಅತ್ತಿಗೆಯ ಕಾಲುಗಳಿಗೆ ನಮಸ್ಕಾರ ಮಾಡುತ್ತಿದ್ದುದರಿಂದ ಅವಳ ಕಾಲಂದುಗೆಯನ್ನು ಮಾತ್ರ ಚೆನ್ನಾಗಿ ನೋಡಿದ್ದೇನೆ.’

  ಭಾರತಭೂಮಿಯಲ್ಲಿ ಸ್ತ್ರೀಯರನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಇದು ಆಧಾರಭೂತವಾಗಿದೆ. ಶ್ರೀರಾಮನೊಡನೆ ಕಾಡಿಗೆ ಬಂದ ಲಕ್ಷ್ಮಣನು ಅವರ ಜೊತೆಯಲ್ಲಿಯೇ ಹದಿಮೂರು ವರ್ಷ ಕಳೆದಿದ್ದಾನೆ. ಅಷ್ಟು ವರ್ಷಗಳವರೆಗೆ ಅವರ ಸೇವೆಯನ್ನು ಮಾಡಿಕೊಂಡಿದ್ದರೂ ಲಕ್ಷ್ಮಣನು ಸೀತಾಮಾತೆಯ ಪಾದಾರವಿಂದಗಳನ್ನು ಮಾತ್ರವೇ ನೋಡಿದ್ದಾನೆ. ಎಂತಹ ಪರಮೋತ್ಕೃ್ಟ ಚಾರಿತ್ರ್ಯ ಲಕ್ಷ್ಮಣನು ಶ್ರೀರಾಮ ಸೀತೆಯರ ಜತೆ ವನವಾಸಕ್ಕೆ ಹೊರಟುನಿಂತಾಗ ಆತನ ತಾಯಿ ಸುಮಿತ್ರಾದೇವಿ ಹೇಳುತ್ತಾಳೆ, ‘ವತ್ಸ! ಶ್ರೀರಾಮನು ವ್ಯಸನಿಯೇ ಆಗಿರಲಿ, ಸಮೃದ್ಧನೇ ಆಗಿರಲಿ, ಅವನು ನಿನಗೆ ಶರಣ್ಯನು. ಅಣ್ಣನ ಅಧೀನದಲ್ಲಿರುವುದೇ ಈ ಲೋಕದ ಧರ್ಮ. ಈ ಆಚರಣೆಯು ನಮ್ಮ ಕುಲಧರ್ಮಕ್ಕೂ ಅನುರೂಪವಾಗಿಯೇ ಇದೆ. ಲಕ್ಷ್ಮಣ! ಶ್ರೀರಾಮನನ್ನೇ ದಶರಥನೆಂದು ಭಾವಿಸು. ಅತ್ತಿಗೆಯಾದ, ಜನಕಾತ್ಮಜೆಯನ್ನು ನಾನೆಂದು ಭಾವಿಸು. ಅರಣ್ಯವನ್ನೇ ಅಯೋಧ್ಯೆಯೆಂದು ಭಾವಿಸು. ಈ ಭಾವನೆಯನ್ನು ಮನಸ್ಸಿನಲ್ಲಿ ತಾಳಿ ಸುಖವಾಗಿ ಪ್ರಯಾಣವನ್ನು ಮಾಡು).’

  ದೇವಋಣ, ಋಷಿಋಣ, ಪಿತೃಋಣ, ದೇಹಋಣ, ಭೂತಋಣ – ಇವು ಪಂಚಋಣಗಳು. ಯಜ್ಞಯಾಗಾದಿಗಳಿಂದ ದೇವಋಣ, ಅಧ್ಯಯನ-ಅಧ್ಯಾಪನಗಳಿಂದ ಋಷಿಋಣ, ಗೃಹಸ್ಥಾಶ್ರಮದಿಂದ ಪಿತೃಋಣ, ದೇಹಾರೋಗ್ಯಗಳನ್ನು ಕಾಪಾಡಿಕೊಳ್ಳುವುದರಿಂದ ದೇಹಋಣ, ಸಮಸ್ತ ಪ್ರಾಣಿ ಮರಗಿಡಬಳ್ಳಿ ಪಾಲನೆಯಿಂದ ಭೂತಋಣಗಳು ಪರಿಹಾರವಾಗುವುವು. ಧನಋಣ ಮಾತ್ರ ಇರಬಾರದು. ಇನ್ನೊಬ್ಬರ ಋಣವಿದ್ದರೆ ಅದನ್ನು ತೀರಿಸಲು ಪುನಃ ಜನ್ಮ ತಾಳಬೇಕಾಗುತ್ತದೆ. ನಾವು ನಾವಾಗದ ಹೊರತು ದೈವತ್ವ ಸಿದ್ಧಿಸದು. ಪ್ರತಿ ಜೀವದಲ್ಲಿಯೂ ದೈವತ್ವದ ದರ್ಶನವಾದರೆ ಈ ಹುಟ್ಟಿಗೆ ಒಂದು ಅರ್ಥ. ಅದನ್ನು ಕಾಯಾ-ವಾಚಾ-ಮನಸಾ ಹೊಂದಲು ಪ್ರಯತ್ನಿಸಬೇಕು.

  (ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts