More

  ಪ್ರಕೃತಿಜನ್ಯ ದೇಗುಲಗಳ ವಿಶಿಷ್ಟ ಗುಣಗಳು

  ಪ್ರಕೃತಿಜನ್ಯ ದೇಗುಲಗಳ ವಿಶಿಷ್ಟ ಗುಣಗಳುದೇವಸ್ಥಾನಗಳು ಭಕ್ತಿ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನಾಟ್ಯದ ಪುಣ್ಯಕ್ಷೇತ್ರವಾದಂತೆ ಎಷ್ಟೋ ಸಲ ರಾಜರುಗಳ ಸಂಪತ್ತನ್ನು ಕಾದಿಡುವ ರಹಸ್ಯಸ್ಥಳಗಳೂ ಆಗಿದ್ದವು. ಭಯಂಕರ ರೋಗರುಜಿನಗಳು ಬಂದಾಗ, ಶತ್ರುಗಳ ಆಕ್ರಮಣದ ಅಪಾಯದಿಂದ ತಪ್ಪಿಸಿಕೊಳ್ಳಲು, ಭೀಕರವಾದ ದುರ್ಭಿಕ್ಷವು ಎದುರಾದಾಗ, ದೇವಸ್ಥಾನದ ನೆಲಮಾಳಿಗೆಯಲ್ಲಿ ಸಂಗ್ರಹಿಸಿದ ಸಂಪತ್ತನ್ನು ಆಪದಟಛಿನವೆಂದು ಬಳಸುತ್ತಿದ್ದರು. ದೇವರ ಮೂರ್ತಿ ಹಾಗೂ ಪ್ರಕೃತಿ ಒಂದಕ್ಕೊಂದು ಹೊಂದಿರುವುದು. ಈ ಕುತೂಹಲದ ವಿಷಯವನ್ನು ನೋಡೋಣ.

  ಅಮರನಾಥ: ಜಮ್ಮು-ಕಾಶ್ಮೀರ ರಾಜ್ಯದಲ್ಲಿರುವ ಗುಹೆ. ಅಮರನಾಥ ಯಾತ್ರೆಯು ಹಿಂದುಗಳಿಗೆ ಪವಿತ್ರವಾದದ್ದು. ಇಲ್ಲಿ ಶಿವಲಿಂಗ ಮಂಜುಗಡ್ಡೆಯ ರೂಪದಲ್ಲಿ ಒಡಮೂಡುತ್ತದೆ. ಹಿಮದ ಮೂಲ ನೀರು. ಆದರೆ ಇಲ್ಲಿ ಶಿವಲಿಂಗವನ್ನು ಆವರಿಸುವ ಹಿಮಕ್ಕೆ ನೀರು ಎಲ್ಲಿಂದ ಬರುತ್ತದೆ? ನೀರಿನ ಮೂಲ ಯಾವುದು ಎನ್ನುವುದನ್ನು ಕಂಡುಹಿಡಿಯಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಈ ಗುಹಾಲಯದಲ್ಲಿ ಶಿವನು ಪಾರ್ವತೀದೇವಿಗೆ ಅಮರತ್ವದ ಮಂತ್ರವನ್ನು ಉಪದೇಶಿಸಿದ್ದನಂತೆ. ಅದನ್ನು ಕೇಳಿ ಎರಡು ಪಾರಿವಾಳಗಳ ಮೊಟ್ಟೆಗಳು ಅಮರವಾದವಂತೆ. ಇಂದಿಗೂ ಆ ಪಾರಿವಾಳಗಳು ಇಲ್ಲಿ ಬಂದು ಮಧ್ಯರಾತ್ರಿ ಸಮಯ ಕಳೆಯುತ್ತವೆ ಎಂಬ ನಂಬಿಕೆ ಇದೆ.

  ಲೇಪಾಕ್ಷಿ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಹಿಂದುಪುರದಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಲೇಪಾಕ್ಷಿಯು ಧಾರ್ವಿುಕ ಮಹತ್ವ ಪಡೆದ ಸ್ಥಳ. ಇಲ್ಲಿನ ಜೋತಾಡುವ ಕಂಬ ಇಂದಿಗೂ ನೆಲಕ್ಕೆ ತಾಗದೆ ಯಾವ ಆಧಾರವೂ ಇಲ್ಲದೆ ನಿಂತಿರುವುದು ವಿಸ್ಮಯಕರ. ಇದನ್ನು ಬ್ರಿಟಿಷ್ ವಿಜ್ಞಾನಿಯು ಪರೀಕ್ಷೆಗೆ ಒಳಪಡಿಸಿದಾಗ ದೇವಾಲಯವೇ ಅದುರಿತು. ಇಡಿಯ ದೇವಾಲಯ ನಿಂತಿರುವುದೇ ಈ ತೂಗುವ ಕಂಬದಿಂದ. ಕಂಬದ ಅಡಿಭಾಗದಲ್ಲಿ ಈ ಕಡೆಯಿಂದ ವಸ್ತ್ರವನ್ನು ತೂರಿಸಿ ಆ ಕಡೆಯಿಂದ ತೆಗೆಯಬಹುದು.

  ಕಾಂತಾವರ ದೇವಾಲಯ: ಶಿಲ್ಪಿಯ ಕೌಶಲದ ಚಾತುರ್ಯವು ಮೇರು ಮಟ್ಟದಲ್ಲಿ ಮೆರೆಯುವುದು. ಇಲ್ಲಿನ ಶ್ರೀ ಮಹಾರುದ್ರ ದೇವರಿಗೆ ಕಾಂತೇಶ್ವರ ಎಂಬ ಹೆಸರಿದೆ. ಇಲ್ಲಿನ ಶಿವಲಿಂಗದ ಬಣ್ಣವು ಮೂರು ಯಾಮಗಳಲ್ಲಿ ಬದಲಾಗುತ್ತದೆ. ಬೆಳಗ್ಗೆ ಚಿನ್ನದ ಬಣ್ಣದಲ್ಲೂ, ಮಧ್ಯಾಹ್ನ ಬೆಳ್ಳಿಯ ಬಣ್ಣದಲ್ಲೂ, ಸಂಜೆ ಕಂಚಿನ ಬಣ್ಣದಲ್ಲೂ ಕಾಣುತ್ತದೆ. ಮಲ್ಲೇಶ್ವರದ ನಂದಿವಿಗ್ರಹ: ರಸ್ತೆ ನಿರ್ವಣದ ಸಮಯದಲ್ಲಿ ನಂದಿಯ ವಿಗ್ರಹ ದೊರಕಿತು. ಪುರಾತತ್ವ ಇಲಾಖೆಯವರು ಸಮಗ್ರ ಉತ್ಖನನ ಮಾಡಿ ದೇವಾಲಯವೊಂದನ್ನು ಹೊರತೆಗೆದರು. ಅದೇ

  ದಕ್ಷಿಣಮುಖ ನಂದಿತೀರ್ಥ. ಇಲ್ಲಿರುವ ನಂದಿಯ ಬಾಯಿಯಿಂದ ಸದಾ ನೀರು ಜಿನುಗುತ್ತಿರುತ್ತದೆ. ಅಲ್ಲದೆ ಹಾಗೆ ಬಾಯಿಯಿಂದ ಹೊರಬರುವ ನೀರು ನೇರವಾಗಿ ಶಿವಲಿಂಗದ ಮೇಲೆ ಬಿದ್ದು ನಂತರ ಅದರ ಕೆಳಗಿರುವ ಕಲ್ಯಾಣಿಯಲ್ಲಿ ಶೇಖರಗೊಳ್ಳುತ್ತದೆ. ಈ ನೀರು ಸಕಲ ಚರ್ಮರೋಗಗಳನ್ನು ಗುಣಪಡಿಸುತ್ತದೆ. ನಂದೀಮುಖದಿಂದ ಬರುವ ನೀರಿನ ಮೂಲವನ್ನು ಇಂದಿಗೂ ಕಂಡುಹಿಡಿಯಲಾಗಿಲ್ಲ.

  ಗುಳಿಗುಳಿ ಶಂಕರ: ಶಿವಮೊಗ್ಗದ ಹೊಸನಗರ ತಾಲೂಕು ಗುಬ್ಬಿಗ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಗುಳಿಗುಳಿ ಶಂಕರ ಮಾಯಾಹೊಂಡವಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ, ಹೊಂಡವು ಬಂಗಾರದಂತೆ ಹೊಳಪು ಪಡೆಯುತ್ತದೆ. ಬಾಹ್ಯ ನೀರಿನ ಮೂಲವಿಲ್ಲದಿದ್ದರೂ ನೀರು ಸದಾಕಾಲ ಉಕ್ಕಿ ಹರಿಯುತ್ತದೆ.
  ಕಡುಬೇಸಿಗೆಯಲ್ಲೂ ಸದಾ ಉಕ್ಕಿ ಹರಿಯುತ್ತದೆ. ಇದಕ್ಕೆ ಕಾರಣ ಈ ಹೊಂಡದ ತಳದಲ್ಲಿರುವ ನೀರಿನ ಅಗಾಧ ಚಿಲುಮೆ. ನೀರಿನಲ್ಲಿ ಸದಾ ಹೀಗೆ ಜಿನುಗುವ ಗುಳ್ಳಿಗಳಿಂದಾಗಿಯೆ ಇದಕ್ಕೆ ಗುಳಿಗುಳಿ ಶಂಕರ ಎಂಬ ಹೆಸರು ಬಂದಿದೆ. ಈ ಹೊಂಡದಲ್ಲಿರುವ ಪಾಚಿ ಹಾಗೂ ಇತರ ಸಸ್ಯಗಳು ಹರಡದೆ ಕಂಬಗಳಂತೆ ನೇರವಾಗಿ ಎದ್ದು ನಿಂತಿವೆ. ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ಮುಖ್ಯ ಕಾರಣ, ಈ ಹೊಂಡದಲ್ಲಿ ಸ್ಪಷ್ಟವಾಗಿ ಕಂಡುಬರುವ ಶಿವಲಿಂಗ. ಇದರ ನೀರು ಔಷಧಯುಕ್ತವಾಗಿದೆ.

  ಉಜ್ಜಯಿನಿಯ ಕಾಲಭೈರವ: ಅಷ್ಟ ಭೈರವರಲ್ಲಿ ಪ್ರಮುಖನಾದ ಕಾಲಭೈರವ ಶಿವನ ಅತ್ಯಂತ ಉಗ್ರರೂಪ. ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯದ ನಂತರ ಕಾಲಭೈರವನ ದರ್ಶನ ಪಡೆಯುತ್ತಾರೆ. ಕಾಲಭೈರವನಿಗೆ ಇಲ್ಲಿ ಮುಖ್ಯವಾಗಿ ಮದ್ಯವನ್ನು ಅರ್ಪಿಸಬೇಕು. ಅರ್ಚಕರು ಒಂದು ತಟ್ಟೆಯಲ್ಲಿ ಭಕ್ತರು ನೀಡಿದ ಮದ್ಯವನ್ನು ಕಾಲಭೈರವನ ಮುಂದೆ ಹಿಡಿಯುತ್ತಾರೆ. ಸ್ವಲ್ಪ ಪ್ರಮಾಣವನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಕಾಲಭೈರವೇಶ್ವರನು ಉಜ್ಜಯನಿಯ ಸ್ಥಳದೇವರು.

  ಜ್ವಾಲಾಜಿ ಮಾತಾ ಮಂದಿರ: ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎಂಬಲ್ಲಿರುವ ಈ ದೇವಸ್ಥಾನವು ಶಕ್ತಿಮಾತೆಗೆ ಮುಡಿಪಾಗಿದೆ. ಇಲ್ಲಿ ಶಕ್ತಿಯ ವಿಗ್ರಹದ ಬದಲಾಗಿ ಜ್ವಾಲೆಯನ್ನು ಪೂಜಿಸುವರು. ಈ ಸ್ಥಳವು ನೈಸರ್ಗಿಕವಾಗಿ ರೂಪಗೊಂಡ ಉರಿಯುವ ಅನಿಲವನ್ನು ಹೊರಸೂಸುವ ಭಾಗದಲ್ಲಿ ನೆಲೆಸಿದೆ. ಈ ರಂಧ್ರದಿಂದ ನಿರಂತರವಾಗಿ ನೀಳವರ್ಣದಲ್ಲಿ ಬೆಂಕಿ ಉರಿಯುತ್ತಿರುತ್ತದೆ. ಇದನ್ನು ಶಕ್ತಿಯನ್ನಾಗಿ ಪೂಜಿಸಲಾಗುತ್ತದೆ. ಈ ದೇವಸ್ಥಾನದ ತುಸು ಮೇಲ್ಭಾಗದಲ್ಲಿ ಮೂರು ಅಡಿ ವ್ಯಾಸ ಹಾಗೂ ಆರು ಅಡಿ ಆಳ ಹೊಂದಿರುವ ಕುಣಿಯೊಂದಿದ್ದು ಅದರಲ್ಲಿ ಕುದಿಯುತ್ತಿರುವ ನೀರನ್ನು ಕಾಣಬಹುದು.

  ಗವಿಪುರ ಗಂಗಾಧರೇಶ್ವರ: ಸಂಜೆ ಶಿವಲಿಂಗದ ಮುಂದಿನ ನಂದಿಯ ಕೋಡುಗಳ ಮಧ್ಯದಿಂದ ಸೂರ್ಯರಶ್ಮಿ ನೇರವಾಗಿ ಶಿವಲಿಂಗದ ಮೇಲೆ ಬಿದ್ದು ಗರ್ಭಗುಡಿ ತೇಜಸ್ಸಿನಿಂದ ಬೆಳಗುತ್ತದೆ.

  (ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ) (ಸಂವಹನಕ್ಕೆ – [email protected])

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts