More

  ಪ್ರಾಚೀನ ಜ್ಞಾನ:  ಅಪರಸಂಸ್ಕಾರದಲ್ಲಿ ಅಡಗಿದ ವಿಜ್ಞಾನ

  ಚೇತನವನ್ನು ಕಳೆದುಕೊಂಡ ಮೇಲೆ ಮನುಷ್ಯದೇಹವನ್ನು ಯಾರೂ, ಯಾವ ಪ್ರಯೋಜನಕ್ಕಾಗಿಯೂ ಇಟ್ಟುಕೊಳ್ಳುವುದಿಲ್ಲ. ‘ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸಬಹುದು. ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿಯರು ಸಹ ಹೆದರುತ್ತಾರೆ’ (ಯಾವತ್ಪವನೋ ನಿವಸತಿ ದೇಹೇ ತಾವತ್ ಪೃಚ್ಛತಿ ಕುಶಲಂ ಗೇಹೇ | ಗತವತಿ ವಾಯೌ ದೇಹಾಪಾಯೇ ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ || 6) ಎಂದು ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ‘ಮೋಹಮುದ್ಗರ’ ಸ್ತೋತ್ರದಲ್ಲಿ ಹೇಳಿದ್ಧಾರೆ. ಹೆತ್ತ ತಂದೆ-ತಾಯಿಗಳಿರಲಿ, ಕೈ ಹಿಡಿದು ಬಂದ ಅರ್ಧಾಂಗಿಯಾಗಿರಲಿ, ಅವನಿಗೆ ಹುಟ್ಟಿದ ಮಕ್ಕಳೇ ಆಗಲಿ ‘ಬೇಗ ಮಣ್ಣು ಮಾಡಿದಷ್ಟು ಪುಣ್ಯ ಜಾಸ್ತಿ’ ಎನ್ನುವರು. ಮರಣಶಯ್ಯೆಯಲ್ಲಿರುವನ ದೇಹವನ್ನು ದರ್ಭೆಯ ಮೇಲೆ ಮಲಗಿಸಿ ತುಳಸಿಗಿಡದ ಮುಂದಿಡುವರು. ಆ ವೇಳೆಯಲ್ಲಿ ತುಳಸಿನೀರು, ಗಂಗಾತೀರ್ಥವನ್ನು ಬಾಯಿಗೆ ಹಾಕುವರು. ಸತ್ತಿರುವುದು ಖಾತರಿಯಾದಾಗ, ದಕ್ಷಿಣದಿಕ್ಕಿಗೆ ತಲೆ ಇರುವಂತೆ ಮಲಗಿಸುತ್ತಾರೆ. ಮನೆಯವರೆಲ್ಲ ಶವವನ್ನು ನೀರಿನಿಂದ ತೊಳೆದು ಶೃಂಗರಿಸುವರು. ಹಳೆಯ ಬಟ್ಟೆಗಳನ್ನು ಬದಲಾಯಿಸಿ ಹೊಸ ಬಟ್ಟೆಯನ್ನು ಹಾಕುವರು. ಅದರ ಬಾಯಿಗೆ ಚಿನ್ನದ ಚೂರು, ಅಕ್ಕಿಯನ್ನು ಹಾಕುವರು. ಸಚೇಲ ಸ್ನಾನ ಮಾಡಿ ಚಟ್ಟದ ಮೇಲೆ ಹೊತ್ತೊಯ್ದು ಸ್ಮಶಾನಕ್ಕೆ ಸಾಗಿಸುವರು. ಮಣ್ಣಿನ ಕೊಡದಲ್ಲಿ ನೀರನ್ನು ಹೊತ್ತೊಯ್ಯುವರು. ಹಿಂದುಧರ್ಮದಲ್ಲಿ ಸತ್ತ ಶರೀರಕ್ಕೂ ಸಂಸ್ಕಾರವನ್ನು ಮಾಡುವರು. ಅದು ಜೀವನದಲ್ಲಿ ಮಾಡುವ ಹದಿನಾರು ಸಂಸ್ಕಾರಗಳಲ್ಲಿ ಒಂದಾಗಿರುವುದು. ಅದನ್ನು ಅಪರಸಂಸ್ಕಾರವೆಂದು ಕರೆಯುವರು. ಮರಣವನ್ನು ಅಶೌಚ ಎಂದು ಭಾವಿಸುವರು.

  ದಹನ: ಕಟ್ಟಿಗೆ, ಶ್ರೀಗಂಧದ ಚೂರು, ತುಳಸಿಗಿಡದ ಟೊಂಗೆಗಳನ್ನು ಹಾಕಿ ಅಗ್ನಿಸ್ಪರ್ಶ ಮಾಡುವರು. ಅಪ್ರದಕ್ಷಿಣವಾಗಿ ಮೂರು ಸುತ್ತು ತಿರುಗುತ್ತ, ಮಣ್ಣಿನ ಮಡಕೆಗೆ ಒಂದೊಂದು ಸುತ್ತಿಗೂ ಒಂದೊಂದು ರಂಧ್ರವನ್ನು ಮಾಡಿ ನೀರು ಸುರಿಯುವಂತೆ ನೋಡಿಕೊಳ್ಳುವರು.

  ಅಸ್ಥಿಸಂಚಯನ: ದಹನದ ಸ್ಥಳದಲ್ಲಿ ಇರುವ ಎಲುಬನ್ನು ಸಂಗ್ರಹಿಸುವುದು ಅಸ್ಥಿಸಂಚಯನ. ಅಸ್ಥಿ ಹಾಗೂ ದೇಹದ ಬೂದಿಯನ್ನು ಕಾಶಿ, ರಾಮೇಶ್ವರ, ಗೋಕರ್ಣಗಳಲ್ಲಿ ಬಿಡುವರು. ಮೂರು ಹಾಗೂ ಏಳನೆಯ ದಿನ ಅಸ್ಥಿಸಂಚಯನ ಮಾಡುವರು.

  ಪ್ರಾಚೀನ ಜ್ಞಾನ:  ಅಪರಸಂಸ್ಕಾರದಲ್ಲಿ ಅಡಗಿದ ವಿಜ್ಞಾನಹತ್ತು ದಿನದ ಸಂಸ್ಕಾರಗಳು: ಹತ್ತು ದಿನಗಳವರೆಗೆ ಮಾಡುವ ದಶಸಂಸ್ಕಾರಗಳು ಇಲ್ಲೇ ಇವೆ. ಮೊದಲು ಮೂರು ದಿನ ಮಣ್ಣಿನ ಮೂರ್ತಿ, ನಂತರ ಮೂರು ಕಲ್ಲನ್ನು ಸ್ಥಾಪಿಸಿ, ಪ್ರೇತರಾಜ, ಯಮ, ರುದ್ರ ಇವರಿಗೆ ದರ್ಭೆಯಿಂದ ಆಜ್ಯ, ಹಾಲಿನ ತರ್ಪಣ ಬಿಡುವರು. ಹನ್ನೊಂದನೆಯ ದಿನ ಪ್ರೇತೋದ್ಧಾರ. ಮರಣ ಹೊಂದಿದವನು ಬಳಸಿದ ವಸ್ತುವನ್ನು ದಾನ ಮಾಡುವುದು. ಹನ್ನೆರಡನೆಯ ದಿನ ಶುದ್ಧಿಕ್ರಿಯೆ. ಯಥಾಶಕ್ತಿ ಸುವಸ್ತುಗಳನ್ನು ದಾನ ಮಾಡುವರು. ಎತ್ತು ಮತ್ತು ಆಕಳನ್ನೂ ದಾನಮಾಡುವರು. ಹನ್ನೊಂದು ದಿನವೂ ಅಶೌಚವನ್ನು ಬಳಸುವರು. ಮನುಷ್ಯನನ್ನು ಈ ಭೂಮಿಯಿಂದ ಕಳಿಸುವಾಗ ಸಕಲ ಗೌರವದಿಂದ ಕಳಿಸುವುದು ಅಗತ್ಯವೆಂದು ವಾದ್ಯಮೇಳದೊಂದಿಗೆ ಒಯ್ಯುವರು. ಸ್ತ್ರೀ ಬಸುರಿಯಾಗಿದ್ದಾಗ ಗರ್ಭದಲ್ಲಿರುವ ಮಗು ಹೆಣ್ಣೋ-ಗಂಡೋ ಎಂದು ತಿಳಿಯದು. ಅವಳ ಮನಸ್ಸಿನ ಒಳತೋಟಿಯನ್ನು ಅರಿಯಲಾಗದು. ಆದರೂ ಇಷ್ಟದ ವಸ್ತುವನ್ನು ತಿನ್ನುವಳು. ಅದೇನೂ ಮಗುವಿಗಾಗಿ ಅಲ್ಲ, ತನಗಾಗಿ. ಮಗುವಿನ ಬೆಳವಣಿಗೆಗಾಗಿ, ಪೌಷ್ಟಿಕತೆಗಾಗಿ ಗರ್ಭಿಣಿಯೇ ಹಣ್ಣುಗಳನ್ನು ತಿನ್ನಬೇಕು. ಶಕ್ತಿಪ್ರದವಾದ ಆಹಾರವನ್ನು ಸೇವಿಸಬೇಕು. ಅದಕ್ಕಾಗಿ ಅವಳ ನಾನಾ ಬಯಕೆಯನ್ನು ತೀರಿಸುವರು. ಅವಳ ಸಂತೋಷಕ್ಕಾಗಿ ಸೀಮಂತ ಸಂಸ್ಕಾರವನ್ನು ಮಾಡುವರು. ಏಕೆಂದರೆ ಅದೊಂದು ಮನಃಶಾಸ್ತ್ರೀಯ ಪ್ರಕ್ರಿಯೆ. ಗರ್ಭಿಣಿ ಸಂತೋಷ-ಸಮಾಧಾನದಿಂದ ಇರಬೇಕು. ಹಾಗೆಯೇ ಮರಣ ಹೊಂದಿದವನ ಅಪರಕ್ರಿಯೆಯು ಪುಷ್ಟಿದಾಯಕವಾದುದು. ಅದನ್ನು ಸರಿಯಾಗಿಯೇ ಮಾಡಬೇಕು.

  ಹದಿಮೂರನೆಯ ದಿನ 365 ಪಿಂಡಗಳನ್ನು ಹಾಕಿ ತರ್ಪಣ ಬಿಡುವರು. ಅದರ ಮರುದಿನ ವೈಕುಂಠ-ಕೈಲಾಸ ಸಮಾರಾಧನೆ. ಅಂದು ರಾತ್ರಿ ಮನೆಯವರು ಮನೆಯ ದೀಪವನ್ನು ನೋಡುವುದಿಲ್ಲ. ಪಾಥೇಯ ಶ್ರಾದ್ಧ, ಷೋಡಶ ಮಾಸಿಕ, ಸಪಿಂಡೀಕರಣ ಇವು ದಕ್ಷಿಣಭಾರತದಲ್ಲಿ ಆಚರಣೆಯಲ್ಲಿರುವ ಸಂಸ್ಕಾರ ಪದ್ಧತಿ.

  ದೇಶ-ಕಾಲಗಳಿಗೆ ಅನುಗುಣವಾಗಿ ಈ ವಿಧಿಗಳು ಸಹ ಜಾತಿ, ಸಾಮಾಜಿಕ ಗುಂಪು, ಮತ್ತು ಮರಣ ಹೊಂದಿದ ವ್ಯಕ್ತಿಯ ಸ್ಥಿತಿಯನ್ನು ಅವಲಂಬಿಸಿವೆ. ಮೃತ ದೇಹವನ್ನು ಎತ್ತರದ ಇಲ್ಲವೇ ಯಾರೂ ಇಲ್ಲದ ಪ್ರದೇಶಗಳಲ್ಲಿಟ್ಟು ಬರುವುದು, ಭೂಮಿಯಲ್ಲಿ ಸಮಾಧಿ ಮಾಡುವುದು, ನದಿಯಲ್ಲಿ ಬಿಡುವುದು ಮತ್ತು ಸುಡುವುದು ಮುಂತಾದ ಪದ್ಧತಿಗಳಿವೆ. ಒಂದೊಂದು ಜಾತಿ, ಜನಾಂಗ, ದೇಶ, ಧರ್ಮಗಳಲ್ಲೂ, ಪ್ರದೇಶದಿಂದ ಪ್ರದೇಶಕ್ಕೂ ಶವಸಂಸ್ಕಾರ ಆಚರಣೆಗಳು ಭಿನ್ನವಾಗಿರುವುವು. ಶ್ಮಶಾನದ ಕಾರ್ಯವಿಧಾನಗಳು ಕೂಡ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ.

  ಸಂನ್ಯಾಸಿಗಳನ್ನು ಸಮಾಧಿ ಮಾಡಲಾಗುವುದು. ಬ್ರಹ್ಮಚಾರಿಯ ಸಂಸ್ಕಾರ ಬೇರೆ. ವ್ಯಾಧಿಗ್ರಸ್ಥರ ಸಂಸ್ಕಾರ ಬೇರೆ. ಸತ್ತವನು ಹಾಗೆಯೇ ಉಳಿಯುವನೆಂದು ಕೆಲವು ಕಡೆ ಅವನಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಇಟ್ಟು ಮನೆಯನ್ನೇ ಕಟ್ಟುವರು. ಒಂದರ್ಥದಲ್ಲಿ ಶ್ರಾದ್ಧಕ್ರಿಯೆಯು ಭಾವನೆ ಮತ್ತು ಶಾಸ್ತ್ರಗಳನ್ನು ಅವಲಂಬಿಸಿದ್ದರೂ ಇದರ ಹಿಂದೆ ವೈಜ್ಞಾನಿಕತೆಯೂ ಇದೆ. ಪಂಚಭೂತಗಳಿಂದ ನಿರ್ವಣವಾದ ಶರೀರವು ನಾಶವಾದರೂ ಆತ್ಮಶಕ್ತಿ, ಪಂಚವಾಯು, ಪಂಚಕೋಶ ನಾಶವಾಗಿರುವುದಿಲ್ಲ. ತಂದೆಯ ಸೂಕ್ಷ್ಮ ಶರೀರಕ್ಕೂ, ಪುತ್ರನ ಸೂಕ್ಷ್ಮ ಶರೀರಕ್ಕೂ ನಂಟಿದೆ. ಪಿತೃವಿನ ಮರಣಾನಂತರವೂ ಈ ಸಂಬಂಧ ನಶಿಸದು. ನಮ್ಮವರಿಗೆ ಏನೋ ವಿಪತ್ತಾದರೆ ನಮ್ಮ ಭಾವತರಂಗ ಸ್ಪುರಿಸುವುದು. ಅಂದರೆ ಜೀವಿಯ ಜೀವತ್ವ ಸದಾ ಇರುವುದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts