ಜಗತ್ತಿನ ಮತ್ತು ಜೀವಿಗಳ ಸೃಷ್ಟಿ ಮಹಾಪಂಚಭೂತಗಳಿಂದ ಅಗಿದೆ. ಇದರಿಂದಾಗಿ ಈ ಐದನ್ನೂ ದೇವರೆಂದು ಪೂಜಿಸುತ್ತಾರೆ. ಭೂಮಿಯನ್ನು ಭೂದೇವಿ, ನೀರನ್ನು ಗಂಗಾದೇವಿ, ಬೆಂಕಿಯನ್ನು ಅಗ್ನಿದೇವ, ಗಾಳಿಯನ್ನು ವಾಯುದೇವ, ಆಕಾಶವನ್ನು ಶಬ್ದಬ್ರಹ್ಮ ಎಂದೂ ಪೂಜಿಸುತ್ತಾರೆ.
ಭೂಮಿ: ಪಂಚಭೂತಗಳಲ್ಲಿ ಭೂಮಿ ಮೊದಲನೆಯದು. ಇದು ಪ್ರತಿನಿಧಿಸುವ ಆಕಾರ ಚೌಕ. ಬಣ್ಣ ಹಳದಿ. ಇದರ ಗ್ರಹಿಕೆ ವಾಸನೆ. ಕಾರ್ಯ ವರ್ಜಿಸುವಿಕೆ. ಚಕ್ರ ಮೂಲಾಧಾರ. ದೇವರು ಗಣೇಶ.
ಜಲ: ಜೀವಸೃಷ್ಟಿಗೆ ಜಲವೇ ಮೂಲ ಎಂಬುದಕ್ಕೆ ವಿಷ್ಣುವು ಅಶ್ವತ್ಥ ಎಲೆಯಲ್ಲಿ ಸಣ್ಣ ಮಗುವಿನ ಹಾಗೆ ಮಲಗಿ, ಸಮುದ್ರದಲ್ಲಿ ತೇಲುತ್ತಿದ್ದ ಎಂಬ ಕಥೆಯೇ ಸಾಕ್ಷಿ. ಪಂಚಭೂತಗಳಲ್ಲಿ ನೀರು ಎರಡನೆಯದು. ಇದು ಪ್ರತಿನಿಧಿಸುವ ಆಕಾರ ಅರ್ಧಚಂದ್ರಾಕೃತಿ. ಬಣ್ಣ ಬೆಳ್ಳಿ. ಗ್ರಹಿಕೆ ರುಚಿ. ಕಾರ್ಯ ಸಂತಾನೋತ್ಪತ್ತಿ. ಚಕ್ರ ಸ್ವಾಧಿಷ್ಠಾನ. ದೇವರು ಮಹಾವಿಷ್ಣು.
ತೇಜಸ್ಸು: ವೈದಿಕ ದೇವತೆಗಳ ಪ್ರಮುಖರ ಪೈಕಿ ಅಗ್ನಿದೇವನೂ ಒಬ್ಬನು. ಅವನು ಬಲಿಗಳನ್ನು ಸ್ವೀಕರಿಸುವವನು. ಅಗ್ನಿಗೆ ಅರ್ಪಿಸಲಾದ ಬಲಿಗಳು ದೇವತೆಗಳಿಗೆ ಹೋಗುತ್ತವೆ. ಏಕೆಂದರೆ ಅಗ್ನಿಯು ಇತರ ದೇವತೆಗಳಿಂದ ಮತ್ತು ಇತರ ದೇವತೆಗಳಿಗೆ ಸಂದೇಶವಾಹಕ. ಅವನು ಪೃಥ್ವಿಗೆ ಅಧಿಪತಿಯಾದ ದೇವತೆ. ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ. ಸಕಲ ದೇವಮಾನವಾದಿಗಳೆಲ್ಲರ ವ್ಯವಹಾರಕ್ಕೂ ಮಾರ್ಗದರ್ಶಕನಾದ್ದರಿಂದ ಅಗ್ನಿ ಎಂಬ ಹೆಸರು ಅನ್ವರ್ಥವಾಗಿದೆ. ಅಗ್ನಿಯು ಕೂಡ ಸೂರ್ಯನಂತೆ ಪ್ರಮುಖ ಸಾಕ್ಷಿ. ಶ್ರೀರಾಮಾಯಣದಲ್ಲಿ, ಮಕ್ಕಳಿಲ್ಲದ ದಶರಥನಿಗೆ ದೇವನಿರ್ವಿುತ ಪಾಯಸವನ್ನು ತಂದುಕೊಟ್ಟವನು ಇದೇ ಅಗ್ನಿದೇವ. ಸೀತೆ ಪವಿತ್ರಳು ಎಂದು ತೋರಿಸಿದವ. ಗೃಹಸ್ಥನ ಕರ್ಮಸಾಕ್ಷಿಯಾಗಿ ವೈಶ್ವದೇವವನ್ನು ಪಡೆಯುವವ ಅಗ್ನಿ. ವೈಶ್ವದೇವದ ಅಂತರಾರ್ಥ ಬಹಳ ಸೂಕ್ಷ್ಮವಾಗಿದೆ. ‘ಇದು ನನ್ನದಲ್ಲ’(ಇದಂ ನ ಮಮ)ವೆಂದು ಅರ್ಪಿಸುವ ಸ್ವಾಹಾಕ್ರಿಯೆ. ಮೊದಲು ನಾರಾಯಣನಿಗೆ, ಬ್ರಹ್ಮನಿಗೆ, ಕೃಷ್ಣನಿಗೆ, ಬ್ರಹ್ಮಜ್ಞರಿಗೆ, ಪ್ರಜಾಪತಿಗೆ, ಗೃಹಕ್ಕೆ, ಕಶ್ಯಪನಿಗೆ, ವಿಶ್ವ ಮತ್ತು ಸರ್ವದೇವರಿಗೆ ಗೃಹಸ್ಥನು ನೀಡುವ ಕೃತಜ್ಞತಾಸಮರ್ಪಣೆ.
ಅಗ್ನಿಯು ಪ್ರಥಮತಃ ದ್ಯುಲೋಕದಲ್ಲಿ ಆದಿತ್ಯಾತ್ಮನಾಗಿ ಉತ್ಪನ್ನನಾದ. ಎರಡನೆಯದಾಗಿ ಪೃಥ್ವಿಯಲ್ಲಿ ಜಾತವೇದರೂಪವನ್ನು ಹೊಂದಿದ. ಮೂರನೆಯದಾಗಿ ಅಂತರಿಕ್ಷದಲ್ಲಿ ಮಿಂಚಿನ ರೂಪದಲ್ಲಿ ಜನಿಸಿದ. ಈತ ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನ. ಪೃಥ್ವಿಗೆ ನಾಭಿರೂಪದ ಸಂರಕ್ಷಕ. ದ್ಯಾವಾಪೃಥ್ವಿಗಳೆರಡಕ್ಕೂ ಅಧಿಪತಿ. ದಿವ್ಯಾಗ್ನಿ ರಾತ್ರಿಕಾಲದಲ್ಲಿ ಅಗ್ನಿರೂಪದಿಂದಲೂ ಪ್ರಾತಃಕಾಲ ಸೂರ್ಯರೂಪದಿಂದಲೂ ಪ್ರಕಾಶಿಸುತ್ತ ತನ್ನ ಲೋಕರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಾನೆ. ಅಗ್ನಿ ಅಥವಾ ತೇಜಸ್ಸು ಅಥವಾ ಬೆಂಕಿ ಪಂಚಭೂತಗಳಲ್ಲಿ ಮೂರನೆಯದು. ಇದು ಪ್ರತಿನಿಧಿಸುವ ಆಕಾರ ತ್ರಿಕೋನ. ಬಣ್ಣ ಕೆಂಪು. ಗ್ರಹಿಕೆ ದೃಷ್ಟಿ. ಕಾರ್ಯ ಚಲನೆ. ಚಕ್ರ ಮಣಿಪೂರ. ದೇವರು ಸೂರ್ಯ.
ವಾಯು: ಋಗ್ವೇದದಲ್ಲಿ, ಪ್ರಕೃತಿಯಲ್ಲಿ ಗೋಚರಿಸುವ ಪ್ರತಿಯೊಂದನ್ನೂ ದೇವರೆಂದು, ಶಕ್ತಿಯೆಂದು ಪೂಜಿಸುತ್ತಿದ್ದರು. ಜೀವವಾಯುವನ್ನು ನೀಡುವ ವನಸಂಪತ್ತಿನಿಂದಲೇ ಮನುಷ್ಯನ ಜೀವನ ಸಾಗುತ್ತಿದೆ. ‘ಅ’ಕಾರಕ್ಕೆ ವಾಯು ಅಭಿಮಾನ ದೇವತೆ. ಪ್ರಾಣವೂ ವಾಯುವೇ! ಮುಖ್ಯಪ್ರಾಣವೂ ವಾಯುವೇ! ವಾಯು ಅಥವಾ ಗಾಳಿ ಪಂಚಭೂತಗಳಲ್ಲಿ ನಾಲ್ಕನೆಯದು. ಇದು ಪ್ರತಿನಿಧಿಸುವ ಆಕಾರ ವರ್ತಳ. ಬಣ್ಣ ನೀಲಿ ಅಥವಾ ಕಪ್ಪು. ಗ್ರಹಿಕೆ ಸ್ಪರ್ಶ. ಮಾಡುವ ಕಾರ್ಯ ನಿರ್ವಹಣೆ. ಚಕ್ರ ಅನಾಹತ. ದೇವರು ಶಿವ.
ಆಕಾಶ: ತದೇಜತಿ ತನ್ನೈಜತಿ ತದ್ದೂರೇ ತದ್ವನ್ತಿಕೇ | ತದನ್ತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ || (ಯಜು.40.5.) ‘ಆತ್ಮತತ್ವವೆಂಬುದು ಚಲವೂ ಹೌದು, ನಿಶ್ಚಲವೂ ಹೌದು. ಇದು ಅತಿ ದೂರದಲ್ಲಿದೆ, ಅತಿ ಸಮೀಪದಲ್ಲೂ ಇದೆ. ಎಲ್ಲದರ ಒಳಗೂ ಇದೆ, ಹೊರಗೂ ಇದೆ.’
ಈ ಎಲ್ಲ ಗುಣಗಳು ಆಕಾಶಕ್ಕೆ ಇರುವುದರಿಂದ ಅದನ್ನು ‘ಕಣ್ಣಿಲ್ಲದೆ ಕಾಣಬಲ್ಲ ದೇವರ ಕಣ್ಣು’ ಎಂದು ಕರೆಯುವರು. ಇಂತಹ ಸ್ಥಳದಲ್ಲಿ ಆಕಾಶ ಇದೆ, ಇಂತಹ ಸ್ಥಳದಲ್ಲಿ ಇಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದು ಅಸ್ತಿತ್ವದಲ್ಲಿದೆ. ಧಗಧಗಿಸುವ ಅಗ್ನಿಯ ಜತೆಗೂ ಇದೆ. ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು. ನೀರು ತೋಯಿಸಲಾರದು. ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು. ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜತೆಗೂ ಅದಿರುತ್ತದೆ. ಪ್ರಳಯ, ವಿನಾಶಕಾಲದಲ್ಲೂ ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ. ಕೊನೆಯಿಲ್ಲ. ಆದಿಯೂ ಇಲ್ಲ, ಅಂತ್ಯವೂ ಇಲ್ಲ. ದೇವರ ವಿಶ್ವರೂಪದರ್ಶನವೇ ಆಕಾಶ. ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಸಾಮರ್ಥ್ಯಕ್ಕೆ ಅನುಸಾರ ನೋಡಿಯಾರು. ನಿಜವಾಗಿ ಇದು ದೇವರ ಪ್ರತಿನಿಧಿ. ಆಕಾಶವು ಪಂಚಭೂತಗಳಲ್ಲಿ ಐದನೆಯದು. ಉನ್ನತವಾದುದು. ಇದು ಪ್ರತಿನಿಧಿಸುವ ಆಕಾರ ಜ್ವಾಲೆ. ಬಣ್ಣ ನೇರಳೆ. ಗ್ರಹಿಕೆ ಶ್ರವಣ. ಕಾರ್ಯ ಸಂಪರ್ಕ. ಚಕ್ರ ವಿಶುದ್ಧಿ. ದೇವರು ದೇವಿ.
ಪಂಚಭೂತ ದೇವಾಲಯಗಳು: ಕಂಚಿಯ ಏಕಾಂಬರೇಶ್ವರ (ಪೃಥ್ವಿತತ್ತ್ವ), ತಿರುವಾನೈಕ್ಕಾವಲ್ನಲ್ಲಿರುವ ಜಂಬುಕೇಶ್ವರ (ಜಲತತ್ತ್ವ), ತಿರುವಣ್ಣಾಮಲೈನ ಅರುಣಾಚಲೇಶ್ವರ (ಅಗ್ನಿತತ್ತ್ವ), ಕಾಳಹಸ್ತಿಯ ಕಾಳಹಸ್ತೀಶ್ವರ (ವಾಯುತತ್ತ್ವ), ಚಿದಂಬರಂನ ನಟರಾಜ (ಆಕಾಶತತ್ತ್ವ) ಹಾಗೂ ಕೇದಾರನಾಥ ದೇವಾಲಯವನ್ನೂ ಸೇರಿಸಿದರೆ ಈ ಆರೂ ಶಿವಮಂದಿರಗಳು ಭಾರತದ ಭೂಪಟದಲ್ಲಿ ಒಂದೇ ಸರಳ ರೇಖೆಯಲ್ಲಿ ಬರುವುದು ಕುತೂಹಲಕಾರಿ ಸಂಗತಿ.