ಮೋದಿ ಬಲ-ಮೈತ್ರಿ ವೈಫಲ್ಯ ಎರಡೂ ಬಿಜೆಪಿಗೆ ವರ

ಅತ್ತ ಕೇಂದ್ರದಲ್ಲಿ ಅತ್ಯಂತ ಸಮರ್ಥ ಪ್ರಧಾನಿ, ಬಲಾಢ್ಯ ಸರ್ಕಾರ. ಇತ್ತ ರಾಜ್ಯದಲ್ಲಿ ನೋಡಿದರೆ ಸರ್ಕಾರ ಇದೆಯಾ? ಎಲ್ಲಿದೆ…? ಈ ಎರಡೂ ಬಿಜೆಪಿಗೆ ಪ್ರಸಕ್ತ ಚುನಾವಣೆಯಲ್ಲಿ ವರವಾಗಿದೆ. ಹೀಗಾಗಿ ಏನಿಲ್ಲವೆಂದರೂ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿ ಎಲ್ಲ ಕಡೆ ನಮ್ಮದೇ ಗೆಲುವು.

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಆತ್ಮವಿಶ್ವಾಸದ ನುಡಿ ಇದು. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತಿರುವ ಅವರು ಭಾನುವಾರ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ಸಮರ್ಥಿಸುತ್ತ ಸದ್ಯದ ವಿದ್ಯಮಾನಗಳನ್ನು ವಿಶ್ಲೇಷಿಸಿದರು. ಅದರ ಸಾರಾಂಶ ಇಲ್ಲಿದೆ. ಕಳೆದ ಸಲ ನಾವು ಚಿಕ್ಕೋಡಿ ಕ್ಷೇತ್ರ ಕಳೆದುಕೊಂಡಿದ್ದೆವು. ಈ ಸಲ ಅಲ್ಲಿಯೂ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿ ನಾವು ಮೊದಲಿನಿಂದಲೂ ಪ್ರಬಲವಾಗಿಯೇ ಇದ್ದೇವೆ. ಈ ಸಲ ಇನ್ನೂ ಹೆಚ್ಚು ಅನುಕೂಲಕರ ಪರಿಸ್ಥಿತಿ ಇದೆ. ಪೂರ್ಣ ಬಹುಮತದ ಸರ್ಕಾರ ಮತ್ತು ಸಮರ್ಥ ನಾಯಕ ಎಂತೆಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎನ್ನುವುದು ಜನರಿಗೆ ಅರ್ಥವಾಗಿದೆ. ಪ್ರತಿ ಕ್ಷೇತ್ರದಲ್ಲೂ 60-70 ಸಾವಿರ ಹೊಸ ಮತದಾರರಿದ್ದಾರೆ. ಅವರಲ್ಲಿ ಶೇ.90 ಮೋದಿ ಅವರ ಕರ್ತೃತ್ವಶಕ್ತಿಯನ್ನು ಅರ್ಥ ಮಾಡಿಕೊಂಡವರೇ. ಹಾಗಾಗಿ ಎಲ್ಲೆಡೆ ಮತ್ತೆ ಮೋದಿ ಅಲೆ ಇದೆ. ಉ.ಕ.ದಲ್ಲಿ ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ.

ಹೈ.ಕ. ಭಾಗದ ಕಲಬುರ್ಗಿ, ಬಳ್ಳಾರಿಯಲ್ಲೂ ಗೆಲ್ಲಲಿದ್ದೇವೆ. ಕರಾವಳಿ, ಮಲೆನಾಡು ಪ್ರಾಂತ್ಯ, ಹಳೇ ಮೈಸೂರು ಜಿಲ್ಲೆಗಳು, ಬೆಂಗಳೂರಿನ ಕ್ಷೇತ್ರಗಳು ಸೇರಿ 22-23 ಕಡೆ ಕಮಲ ಅರಳುವುದು ಖಾತ್ರಿ. ಅತಿಹೆಚ್ಚು ಸ್ಥಾನ ಗೆದ್ದವರು ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. 36 ಸ್ಥಾನ ಗೆದ್ದವರು ಸರ್ಕಾರ ರಚಿಸಿಕೊಂಡಿದ್ದಾರೆ. ರೈತರ ಸಾಲವೆಲ್ಲ ಮನ್ನಾ ಭರವಸೆ ಕೊಟ್ಟರು. ಎಲ್ಲಿ ಮಾಡಿದರು? ಇರುವ ಸೌಲಭ್ಯವನ್ನೂ ವಾಪಸ್ ಪಡೆದರು. ಹಲವು ತಾಲೂಕಿನಲ್ಲಿ ಬರ ಕಾಡುತ್ತಿವೆ. ಜನ ಗುಳೆ ಹೋಗುವ ಪರಿಸ್ಥಿತಿ ಇದೆ. ಜನ-ಜಾನುವಾರುಗಳಿಗೆ ನೀರಿಲ್ಲ. ಒಬ್ಬ ಮಂತ್ರಿಯೂ ಜನರ ಮಧ್ಯೆ ಹೋಗುತ್ತಿಲ್ಲ. ಏನಾಗುತ್ತಿದೆ ಎಂದು ನೋಡುತ್ತಿಲ್ಲ. ಕೇವಲ ಅಧಿಕಾರಕ್ಕಾಗಿ ಕಚ್ಚಾಟ. ಮಹಾಘಟಬಂಧನ್​ದಲ್ಲಿ ಪ್ರಧಾನಿಯಾಗುವವರು ಯಾರು ಎಂದರೆ 5-6 ಹೆಸರು ಹೇಳುತ್ತಾರೆ. ಬಿಜೆಪಿ ನೇತೃತ್ವದ ಎನ್​ಡಿಎದಲ್ಲಿ ಗೊಂದಲ ಇಲ್ಲ. ಮೋದಿಯವರೇ ಪ್ರಧಾನಿ. ಯಾವುದನ್ನು ಪ್ರಯತ್ನ ಪೂರ್ವಕವಾಗಿ ಮಾಡಲು ಸಾಧ್ಯವೋ ಅದನ್ನೇ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಬಿಜೆಪಿ ಮತ್ತು ಎದುರಾಳಿಗಳಲ್ಲಿಯ ಈ ವ್ಯತ್ಯಾಸವೇ ರಾಜ್ಯದಲ್ಲಿ ಚುನಾವಣೆ ವಿಷಯ. ಮತದಾರರು ಬುದ್ಧಿವಂತರಿದ್ದಾರೆ. ನಮ್ಮ ಅಭ್ಯರ್ಥಿಗಳು ಸಮರ್ಥ ರಿದ್ದಾರೆ. ಹೀಗಾಗಿ 22-23 ಸ್ಥಾನ ಗೆಲ್ಲುತ್ತೇವೆಂಬ ವಿಶ್ವಾಸ ಸಕಾರಣವಾದುದು ಎಂದು ಕೋರೆ ವಿವರಿಸಿದರು.

ಧರ್ಮ ‘ಪ್ರತ್ಯೇಕ’ರದ್ದೇ ಮತ್ತೊಂದು ಕತೆ

ಲಿಂಗಾಯತ ಪ್ರತ್ಯೇಕ ಧರ್ಮ ಆಂದೋಲನ ಕಾಂಗ್ರೆಸ್ ಕನಸಿನ ಕೂಸು. ಈಗ ತಪ್ಪಾಗಿದೆ, ಕ್ಷಮಿಸಿ ಎನ್ನುತ್ತಿದ್ದಾರೆ ಒಬ್ಬರು. ಧರ್ಮದ ವಿಷಯ ಈಗ ಅಪ್ರಸ್ತುತ ಎನ್ನುತ್ತಿದ್ದಾರೆ ಇನ್ನೊಬ್ಬರು. ನಮ್ಮ ಅಸ್ಮಿತೆ ಪ್ರಶ್ನೆ ಎಂದು ಅಬ್ಬರಿಸುತ್ತಿದ್ದಾರೆ ಎಂ.ಬಿ.ಪಾಟೀಲರು. ಅವರೇ ಡಿಕೆಶಿ ವಿರುದ್ಧ ತಿರುಗಿಬಿದ್ದಿರುವುದು ಜಗಜ್ಜಾಹೀರು. ಹೀಗಾಗಿ ಈ ಚುನಾವಣೆಯಲ್ಲೂ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಲಿಂಗಾಯತ-ವೀರಶೈವರನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜನರು ಮೂರ್ಖರಲ್ಲ. ಇದನ್ನು ಕಾಂಗ್ರೆಸ್ ಅರ್ಥಮಾಡಿಕೊಂಡು ಜಾತಿ ರಾಜಕಾರಣ ಮಾಡುವುದನ್ನು ಬಿಡಲಿ ಎಂದು ಡಾ.ಪ್ರಭಾಕರ ಕೋರೆ ಟಾಂಗ್ ನೀಡಿದರು.

ಮೈತ್ರಿ ಎನ್ನುವುದೇ ನಗೆಪಾಟಲು

ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿ ಹಾಕಿದ್ದಾಗಿ ಕಾಂಗ್ರೆಸ್-ಜೆಡಿಎಸ್​ನವರು ಹೇಳಿಕೊಳ್ಳುತ್ತಾರೆ. ಮೈತ್ರಿ ಭಾವ ಎಲ್ಲಿದೆ? ಕೆಲವು ನಾಯಕರ ಮಟ್ಟದಲ್ಲಿ ಇರಬಹುದು. ಕಾರ್ಯಕರ್ತರ ಮಟ್ಟದಲ್ಲಿ ಕಾಣಿಸಬೇಕಲ್ಲ? ಮಂಡ್ಯ, ಹಾಸನ, ಮೈಸೂರಲ್ಲೆಲ್ಲ ಕಾರ್ಯಕರ್ತರೇ ಆಯಾ ಪಕ್ಷದ ನಾಯಕರ ಫರ್ವನು ಒಪ್ಪುತ್ತಿಲ್ಲ. ಹೀಗಾಗಿ ಮೈತ್ರಿ ಎನ್ನುವುದು ನಗೆಪಾಟಲಾಗಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ಗೆ ಬಲ ಇಲ್ಲ. ಅವರ ಅಭ್ಯರ್ಥಿ ಇರುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆರಾಮಾಗಿದ್ದಾರೆ ಎಂದು ಡಾ.ಕೋರೆ ಹೇಳಿದರು.

| ಜಿ.ಟಿ.ಹೆಗಡೆ, ಹುಬ್ಬಳ್ಳಿ