ಪಿಪಿಪಿ ನೀತಿ-2025, 15 ಇಲಾಖೆಗಳಲ್ಲಿ 109 ಅವಕಾಶ ಹುಡುಕಿದ ಸರ್ಕಾರ

Vidhanasoudha

ಬೆಂಗಳೂರು: ತನ್ನ ಯೋಜನೆಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಇರುವ ಅವಕಾಶಗಳನ್ನು ಹುಡುಕಿರುವ ರಾಜ್ಯ ಸರ್ಕಾರ, ಪಿಪಿಪಿ ನೀತಿ -2025ಯ ಮೂಲಕ ಅದಕ್ಕೊಂದು ಸ್ಪಷ್ಟ ಚೌಕಟ್ಟು ಹಾಕಿಕೊಂಡಿದೆ.
ಹೊಸ ಯೋಜನೆಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡುವುದು, ಹಳೇ ಯೋಜನೆಗಳಿದ್ದರೂ ಅದರ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ವಹಿಸಿ ಆದಾಯ ವೃದ್ಧಿಸಿಕೊಳ್ಳು ಅಂದಾಜು ಮಾಡಿದೆ. ಒಟ್ಟಾರೆ 15 ಇಲಾಖೆಗಳಲ್ಲಿ 109 ಅವಕಾಶಗಳನ್ನು ಖಾಸಗಿಗೆ ವಲಯಕ್ಕೆ ತೆರೆದಿಟ್ಟಿದೆ.
ಸರ್ಕಾರದ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಮೂಲಸೌಕರ್ಯಕ್ಕೆ ಹೆಚ್ಚಿನ ಹಣ ವೆಚ್ಚಮಾಡುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕೆ ಖಾಸಗಿಯವರ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡುವ ಒಂದು ದಾರಿ ಬಹಳ ಹಿಂದಿನಿಂದಲೂ ಇದೆ. ಆದರೆ, ಅದು ಚದುರಿದಂತಿತ್ತು. ಅಂದರೆ ಇಲಾಖಾವಾರು ತರುವ ಪ್ರಸ್ತಾಪಗಳಿಗೆ ಒಪ್ಪಿಗೆ ಸಿಗುತ್ತಿತ್ತು. ಆದರೀಗ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲು ಒಂದು ನೀತಿಯನ್ನೇ ತರಲಾಗಿದೆ.
ಈ ನೀತಿಯ ಲಾಭದ ಲೆಕ್ಕಹಾಕಿದರೆ, ಸರ್ಕಾರಿ ಭೂಮಿ ನೀಡಿದರೆ ನಿರ್ಮಾಣ, ನಿರ್ವಹಣೆಯನ್ನು ಖಾಸಗಿಯವರೇ ವೆಚ್ಚ ಮಾಡುತ್ತಾರೆ. ಸರ್ಕಾರ ಯಾವುದೇ ಹಣ ವೆಚ್ಚ ಮಾಡದೇ ಕಾಮಗಾರಿಗಳು ನಡೆದು ಹೋಗುತ್ತದೆ. ಕೆಲವು ಸಂದರ್ಭದಲ್ಲಿ ಆದಾಯದ ಮೂಲವೂ ಸೃಷ್ಟಿಯಾಗುತ್ತದೆ.
ಕೆಲವು ಉದಾಹರಣೆ ಗಮನಿಸುವುದಾದರೆ, ವಸತಿ ಯೋಜನೆಗಳಲ್ಲಿ ಸರ್ಕಾರದ ಭೂಮಿಯಲ್ಲಿ ಖಾಸಗಿ ಬಿಲ್ಡರ್‌ಗಳು ವಸತಿ ಸಮುಚ್ಛಯ ನಿರ್ಮಿಸಿಕೊಳ್ಳುತ್ತಾರೆ, ಒಂದು ಪಾಲು ಮನೆಗಳನ್ನು ಸರ್ಕಾರಕ್ಕೆ ನೀಡುತ್ತಾರೆ. ಆ ಮನೆಗಳನ್ನು ಸರ್ಕಾರ ಲಾನುಭವಿಗೆ ಹಂಚಿಕೆ ಮಾಡಿದರಾಯಿತು. ಇಲ್ಲಿ ಸರ್ಕಾರ ಬಿಡಿಗಾಸು ವೆಚ್ಚ ಮಾಡದೇ ಯೋಜನೆ ಮಾಡಿದಂತಾಯಿತು.
ಕುಡಿಯುವ ನೀರಿನ ಯೋಜನೆಗಳಲ್ಲೂ ಸಹ ಖಾಸಗಿಗೆ ವಹಿಸಿದಲ್ಲಿ ಯೋಜನೆ ಪೂರ್ಣಗೊಳಿಸಿ, ನಿರ್ವಹಣೆ ಮಾಡುವುದು, ಶುಲ್ಕ ವಸೂಲಿಯಂತಹ ಕೆಲಸವನ್ನೂ ಖಾಸಗಿ ಕಂಪನಿಯವರು ಮಾಡಿಕೊಳ್ಳುತ್ತಾರೆ. ಸರ್ಕಾರಕ್ಕೆ ನಿಗದಿತ ಆದಾಯ ಸಂದಾಯವಾಗುತ್ತದೆ.
ಈಗಾಗಲೇ ರಾಜ್ಯದಲ್ಲಿ ಯಶಸ್ವಿಯಾದ ಯೋಜನೆಗಳೂ ಇವೆ. ಪ್ರಮುಖ ಉದಾಹರಣೆಯಾಗಿ ಕಾಣುವುದು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಪಿಪಿಪಿ ಸ್ವರೂಪದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2008 ರಲ್ಲಿ ಕಾರ್ಯಾರಂಭ ಮಾಡಿತು. ಇದು ಭಾರತದಲ್ಲಿನ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು, ಆಧುನಿಕ ತಂತ್ರಜ್ಞಾನ ಒಳಗೊಂಡಿದೆ.
ಈ ನೀತಿಯ ಪ್ರಕಾರ ಸರ್ಕಾರದ ಯೋಜನೆಗಳ ಮೇಲೆ ಹೂಡಿಕೆ ಮಾಡುವವರಿಗೆ ಅನೇಕ ರಿಯಾಯಿತ, ವಿನಾಯಿತಿಗಳು ಸಹ ಕೊಡಲಾಗುತ್ತದೆ. ಹೂಡಿಕೆದಾರರನ್ನು ಸೆಳೆಯಲು ಮತ್ತು ಪ್ರೋತ್ಸಾಹ ನೀಡುವ ಅವಕಾಶವನ್ನೂ ಮಾಡಿಕೊಳ್ಳಲಾಗಿದೆ.
ಖಾಸಗಿಯವರು ಹೂಡಿಕೆ ಮಾಡುತ್ತಾರೆಂದು ನಿಯಮಗಳಲ್ಲಿ ಯಾವುದೇ ಸಡಿಲ ಇರುವುದಿಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯ ಅನ್ವಯವೇ ಎಲ್ಲಾ ಒಪ್ಪಂದಗಳನ್ನು ನ್ಯಾಯಯುತ ಮತ್ತು ಪಾರದರ್ಶಕ ಆಧಾರದ ಮೇಲೆ ನೀಡಲಾಗುತ್ತದ ಎಂದು ಹೊಸ ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆಸಕ್ತಿಯ ಅಭಿವ್ಯಕ್ತಿ, ಅರ್ಹತೆ, ಪ್ರಸ್ತಾವನೆ ಹಂತ, ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನದ ಬಳಿಕವಷ್ಟೇ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ.

ಸರ್ಕಾರದ ಯೋಜನೆಗೆ ಖಾಸಗಿಯವರು ಹೂಡಿಕೆ ಮಾಡಿದರೂ ಹಿರಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ವಾಹಕ ರಚಿಸಲಾಗುತ್ತದೆ (ಸ್ಪೆಷಲ್ ಪರ್ಪಸ್ ವೆಹಿಕಲ್). ಇದರಿಂದ ಸರ್ಕಾರದ ನಿಗಾ ಹಾಗೂ ನಿಯಂತ್ರಣದಲ್ಲೇ ಅನುಷ್ಠಾನವಾಗಲಿದೆ.
ಈ ನೀತಿಯಡಿ ಕಾರ್ಯನಿರ್ವಹಣೆಗೆ ಮೂಲಸೌಕರ್ಯ ಅಭಿವೃದ್ಧಿಯನ್ನು ನೋಡಲ್ ಏಜೆನ್ಸಿ ರೀತಿ ಕಾಣಲಾಗುತ್ತದೆ. ಪಿಪಿಪಿ ಕೋಶ ರಚಿಸಿ ಅದರ ಮೂಲಕ ತಾಂತ್ರಿಕ, ಕಾನೂನು ಪ್ರಕ್ರಿಯೆ ಮತ್ತು ಅಂತಹವುಗಳಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

3 ವರ್ಷಕ್ಕೊಮ್ಮೆ ಪರಾಮರ್ಶೆ
ಪಿಪಿಪಿ ಅಡಿಯ ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ರಾಜ್ಯ ಮಟ್ಟದಲ್ಲಿ ಮಾಡಲಾಗುವುದು. ಸಚಿವರ ನೇತೃತ್ವದ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ ಎಲ್ಲವನ್ನೂ ನೇರವಾಗಿ ಪರಾಮರ್ಶೆ ಮಾಡಲಿದೆ. ಸಮನ್ವಯಕ್ಕಾಗಿ ಅಧಿಕಾರಿಗಳ ಹಂತದ ಸಮಿತಿಗಳನ್ನೂ ರಚಿಸಲಾಗುತ್ತದೆ.
ಹಾಗೆಯೇ ಪ್ರತಿ ಮೂರು ವರ್ಷಕ್ಕೊಮ್ಮೆ ಈ ನೀತಿಯ ಮಧ್ಯಂತರ ಪರಿಶೀಲನೆ ನಡೆಸಲಾಗುತ್ತದೆ. ಮೌಲ್ಯಮಾಪನ ನಡೆಸಿ ಅಗತ್ಯ ಇದ್ದರೆ ನೀತಿಗೆ ಬದಲಾವಣೆಯನ್ನೂ ತರಲು ಉದ್ದೇಶಿಸಲಾಗಿದೆ.

 

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…