ಪಾಕ್ಸ್ ವೈರಸ್‌ನಿಂದ ಸಾಯುತ್ತಿವೆ ಪಕ್ಷಿಗಳು

ಭರತ್‌ರಾಜ್ ಸೊರಕೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಕಳೆದ ಒಂದು ವಾರದಿಂದ ಪಾರಿವಾಳ, ಗಿಡುಗ, ಹದ್ದು, ಕಾಗೆ ಮೊದಲಾದ ಪಕ್ಷಿಗಳು ವ್ಯಾಪಕವಾಗಿ ಸಾಯುತ್ತಿವೆ. ಕೆಲವೆಡೆ ಬಳಲಿರುವ ಹಕ್ಕಿಗಳ ಕೊಕ್ಕಿನ ಮೇಲೆ ಮತ್ತು ಬಾಯಿಯ ಒಳಗೆ ಗುಳ್ಳೆಗಳೆದ್ದ ಸ್ಥಿತಿ ಕಂಡುಬಂದಿದೆ.

ಇದಕ್ಕೆ ಕಾರಣವಾಗಿರುವುದು ಪಾಕ್ಸ್ ವೈರಸ್. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡುಬರುವ ಪಾಕ್ಸ್ ವೈರಸ್, ಮಳೆಗಾಲದ ಸಂದರ್ಭ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಬೇಸಿಗೆಯಲ್ಲಿ ತೀವ್ರಗೊಂಡಿದೆ.

ರಾತ್ರಿ ವೇಳೆ ಪಕ್ಷಿಗಳು ಮನೆ, ಫ್ಲಾೃಟ್ ಸಂದುಗಳಲ್ಲಿ, ಅಂಗಡಿಗಳ ಬಾಗಿಲಿನಲ್ಲಿ ವಾಸಿಸುವ ಪಾರಿವಾಳಗಳು ಬೆಳಗಾಗುತ್ತಲೇ ಹಾರಲಾಗದೆ ಕೆಳಗೆ ಬೀಳುತ್ತ್ತಿವೆ. ಮಂಗಳೂರಿನ ಪ್ರಮುಖ ಪ್ರದೇಶಗಳಾದ ಮಾರ್ಕೆಟ್, ಬಂದರು, ಪಿ.ವಿ.ಎಸ್, ಕದ್ರಿ ವ್ಯಾಪ್ತಿಯಲ್ಲಿ ರೋಗ ಹೆಚ್ಚು ಹಬ್ಬುತ್ತಿದೆ. ಮಂಗಳೂರಿನಲ್ಲಿ ನಾಲ್ಕೈದು ದಿನಗಳಲ್ಲಿ 20ಕ್ಕೂ ಅಧಿಕ ದೂರುಗಳು ಪಕ್ಷಿಗಳ ಅನಾರೋಗ್ಯದ ಬಗ್ಗೆ ಕೇಳಿ ಬಂದಿವೆ ಎಂದು ಪ್ರಾಣಿ ಸಂರಕ್ಷಕ ತೌಸಿಫ್ ಅಹಮ್ಮದ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಬಳಲುತ್ತಿದ್ದ ಕೆಲವು ಪಕ್ಷಿಗಳಿಗೆ ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಪಕ್ಷಿಗಳಿಗಿಂತ ಪಾರಿವಾಳಗಳಿಗೆ ಹೆಚ್ಚು ರೋಗ ಬಾಧಿಸುತ್ತಿದ್ದು, ಸಾಯುತ್ತಿವೆ. ಪಾರಿವಾಳಗಳ ಬಗ್ಗೆಯೇ ಹಲವು ದೂರುಗಳು ಬರುತ್ತಿವೆ. ಶಕ್ತಿನಗರದಲ್ಲಿ ಗಿಡುಗವೊಂದಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದೆ. ಪಕ್ಷಿಗಳು ಒಂದೆಡೆಯಿಂದ ಮತ್ತೊಂದೆಡೆ ವಲಸೆ ಹೋಗುವುದರಿಂದ ಪಕ್ಷಿಯಿಂದ ಪಕ್ಷಿಗೆ ಬೇಗನೆ ರೋಗ ಹಬ್ಬುತ್ತಿದೆ ಎನ್ನುತ್ತಾರೆ ವೈದ್ಯರು.

ಮುನ್ನೆಚ್ಚರಿಕೆ ಅಗತ್ಯ: ವೈರಸ್ ಬಂದ ಮೇಲೆ ಚಿಕಿತ್ಸೆ ಇಲ್ಲ. ಅದರಷ್ಟಕ್ಕೆ ಕಡಿಮೆಯಾಗಬೇಕು. 15ರಿಂದ 20 ದಿನ ಬಾರದ ಹಾಗೆ ಮುನ್ನೆಚ್ಚರಿಕೆ ಅಗತ್ಯ. ರೋಗ ಬಂದಿರುವ ಸಮಯದಲ್ಲಿ ವಿಟಮಿನ್ ಎ ಯುಕ್ತ ಆಹಾರ ಮತ್ತು ಮದ್ದು ನೀಡಬೇಕು. ಮನೆಯೊಳಗೆ ಪಕ್ಷಿಗಳನ್ನು ಸಾಕುವವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ.

ಪಕ್ಷಿಗಳನ್ನು ಸಾಕುವ ಸ್ಥಳ, ಆಹಾರ ನೀಡುವ ಪಾತ್ರೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಸಣ್ಣ ಸ್ಥಳದಲ್ಲಿ ಪಕ್ಷಿಗಳನ್ನು ಕೂಡಿಹಾಕಿದರೆ ರೋಗ ಹರಡುವ ಸಾಧ್ಯತೆಗಳು ಹೆಚ್ಚು. ಸೊಳ್ಳೆ, ನೊಣ ಜಾಸ್ತಿ ಇದ್ದರೆ ಹಬ್ಬಬಹುದು. ವೈರಸ್ ಇಲ್ಲದೇ ಇರುವ ಪಕ್ಷಿಗಳಿಗೂ ವಿಟಮಿನ್ ಎ ನೀಡಿದರೆ ರೋಗ ತಗಲುವ ಸಾಧ್ಯತೆ ಕಡಿಮೆಮಾಡಬಹುದು. ಮಳೆಗಾಲದ ತನಕ ವಿಟಮಿನ್‌ಯುಕ್ತ ವೈಮರಲ್ ಔಷಧ 100 ಪಾರಿವಾಳವಿದ್ದರೆ 10 ಎಂ.ಎಲ್.ನಷ್ಟು ನೀರಿಗೆ ಮಿಶ್ರಣ ಮಾಡಿ ಕೊಡುವುದೊಳಿತು ಎನ್ನುತ್ತಾರೆ ವೈದ್ಯರು.

ಪಾಕ್ಸ್ ವೈರಸ್ ಇರುವ ಪಕ್ಷಿಯನ್ನು ಏಕಾಏಕಿ ಕೈಯಲ್ಲಿ ಹಿಡಿಯಬಾರದು. ಹದ್ದು, ಗಿಡುಗದಂಥ ಪಕ್ಷಿಗಳು ನೋವಿನಿಂದ ಏಕಾಏಕಿ ಕುಕ್ಕಬಹುದು. ಈ ಬಗ್ಗೆ ಜಾಗರೂಕವಾಗಿರಬೇಕು. ಮನುಷ್ಯನೂ ಮುನ್ನೆಚ್ಚರಿಕೆಗಾಗಿ ಗ್ಲೌಸ್ ಹಾಕಿ ಹಕ್ಕಿಯನ್ನು ಹಿಡಿಯಬೇಕು ಎನ್ನುತ್ತಾರೆ ಪ್ರಾಣಿಸಂರಕ್ಷಕ ತೌಸಿಫ್ ಅಹಮ್ಮದ್.

ಏನಿದು ರೋಗ?: ತಜ್ಞ ವೈದ್ಯ ಡಾ.ವಸಂತ ಶೆಟ್ಟಿ ಹೇಳುವ ಪ್ರಕಾರ ಮನುಷ್ಯರಿಗೆ ಚಿಕನ್‌ಪಾಕ್ಸ್ ರೋಗ ಹಬ್ಬುವಂತೆ ಹಕ್ಕಿಗಳಿಗೆ ಪಾಕ್ಸ್ ವೈರಸ್ ಹರಡುತ್ತಿದೆ. ಮಕ್ಕಳ ಮೈಮೇಲೆ ಬೀಳುವುದು ಚಿಕನ್ ಪಾಕ್ಸ್, ಕೋಳಿಗೆ ಫೌಲ್ ಪಾಕ್ಸ್, ಪಾರಿವಾಳಕ್ಕೆ ಪಿಜನ್ ಪಾಕ್ಸ್ ಎಂದು ಈ ರೋಗವನ್ನು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಹೆಚ್ಚಾಗಿ ಆಹಾರ ಮತ್ತು ಗಾಳಿಯಿಂದ ಹರಡುವ ಸಾಧ್ಯತೆ ಇದೆ.

ಪಕ್ಷಿಯಿಂದ ಮನುಷ್ಯನಿಗೆ ಹರಡಲ್ಲ: ಪಕ್ಷಿಯಲ್ಲಿರುವ ಪಾಕ್ಸ್ ವೈರಸ್ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ. ಆಯಾ ಜಾತಿಯ ಪಕ್ಷಿಗಳಲ್ಲಿ ಮಾತ್ರ ವೇಗವಾಗಿ ಹರಡುತ್ತದೆ. ಪಾರಿವಾಳದಿಂದ ಪಾರಿವಾಳಕ್ಕೆ, ಕಾಗೆಯಿಂದ ಕಾಗೆಗೆ, ಗಿಡುಗದಿಂದ ಗಿಡುಗಕ್ಕೆ, ಮನುಷ್ಯನಿಂದ ಮನುಷ್ಯನಿಗೆ ವೈರಸ್ ತಲುಪುತ್ತದೆ ಹೊರತು ಪಕ್ಷಿಯಿಂದ ಮನುಷ್ಯನಿಗೆ ಹರಡುವುದಿಲ್ಲ. ಕೋಳಿಗಳಿಗೂ ಇತರ ಪಕ್ಷಿಗಳಿಂದ ರೋಗ ಹರಡುವುದಿಲ್ಲ.

ಬೇಸಿಗೆಯಲ್ಲಿ ಈ ವೈರಸ್ ಹೆಚ್ಚಾಗಿ ಹಬ್ಬುತ್ತದೆ. ಬಳಿಕ ಕಡಿಮೆಯಾಗುತ್ತದೆ. ಪಕ್ಷಿಗಳಲ್ಲಿ ಕೂದಲಿಲ್ಲದ ಜಾಗದಲ್ಲಿ ಕಜ್ಜಿಗಳು ಕಾಣಿಸಿಕೊಳ್ಳುತ್ತದೆ. ಬಾಯಿ, ಗಂಟಲೊಳಗೆ ಗುಳ್ಳೆಗಳೆದ್ದರೆ ಉಸಿರಾಟ ಮತ್ತು ಆಹಾರ ಸೇವನೆಗೆ ತೊಂದರೆಯಾಗಿ ಸಾಯಬಹುದು. ಪಕ್ಷಿಗಳಲ್ಲಿ ಇಂಥ ರೋಗ ಕಂಡುಬಂದರೆ ಇಲಾಖೆಗೆ ಮಾಹಿತಿ ನೀಡಬೇಕು.
| ಡಾ.ವಸಂತ ಶೆಟ್ಟಿ, ಪಕ್ಷಿ ವೈದ್ಯ, ಪಶು ಸಂಗೋಪನಾ ಇಲಾಖೆ, ಮಂಗಳೂರು