ಏಷ್ಯನ್​ ಚಾಂಪಿಯನ್​ಷಿಪ್​ಗಾಗಿ ತಾಯಿಯ ಚಿನ್ನ ಅಡವಿಟ್ಟರೂ ತೀರದ ಬವಣೆ

ಮಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಮಂಗಳೂರಿನ ಪ್ರದೀಪ್ ಆಚಾರ್ಯ ಅವರಿಗೆ ಈ ಬಾರಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಆರ್ಥಿಕ ಮುಗ್ಗಟ್ಟು ಅಡ್ಡಿಯಾಗಿದೆ.

ಸರ್ಕಾರದಿಂದ ಕಿಂಚಿತ್ತೂ ಪ್ರೋತ್ಸಾಹ ಸಿಗದೆ ತಾಯಿಯ ಚಿನ್ನವನ್ನೇ ಅಡವಿಟ್ಟು ಸ್ಪರ್ಧೆಗೆ ಅಣಿಯಾಗುತ್ತಿರುವ ನೃತದೃಷ್ಟ ಕ್ರೀಡಾಪಟು ಪ್ರದೀಪ್. ಸೆ.18ರಂದು ದುಬೈನಲ್ಲಿ ಸ್ಪರ್ಧಾಕೂಟ ನಡೆಯಲಿದ್ದು, ಸೆ.15 (ಇಂದು) ಭಾಗವಹಿಸಲು ಬೇಕಾದ ಮೊತ್ತ ಕಟ್ಟಲು ಕೊನೇ ದಿನಾಂಕ. ಕೂಟದಲ್ಲಿ ಭಾಗವಹಿಸುವ ಉದ್ದೇಶದಿಂದ ತಾಯಿಯ ಚಿನ್ನ ಅಡವಿಟ್ಟು, ಬಂಧು-ಮಿತ್ರರ ಸಹಕಾರದಿಂದ 49 ಸಾವಿರ ರೂ. ಮೊತ್ತ ಪಾವತಿಸಿದ್ದು, ಇನ್ನೂ 80 ಸಾವಿರ ರೂ. ಅಗತ್ಯವಿದೆ. ಯಾರಾದರೂ ಪ್ರಾಯೋಜಕರು ಸಿಗಬಹುದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರದೀಪ್.

ಸರ್ಕಾರ ನಿರ್ಲಕ್ಷ್ಯ

2013ರಲ್ಲಿ ಪವರ್‌ಲಿಫ್ಟಿಂಗ್ ತರಬೇತಿ ಪಡೆಯಲು ಆರಂಭಿಸಿದ್ದಾರೆ ಪ್ರದೀಪ್. 2015ರಿಂದ ರಾಷ್ಟ್ರಮಟ್ಟದಲ್ಲಿ ಪದಕ ಗಳಿಕೆ ಆರಂಭವಾಯಿತು. ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ 2 ಚಿನ್ನ, 3 ಬೆಳ್ಳಿ ಪದಕದ ಜತೆಗೆ ಬೆಂಚ್‌ಪ್ರೆಸ್‌ನಲ್ಲಿ ಬೆಸ್ಟ್ ಲಿಫ್ಟರ್ ಪ್ರಶಸ್ತಿ ಗೆದ್ದು ಹೊಸ ದಾಖಲೆ ಬರೆದಿದ್ದಾರೆ. ಅವರ ಸಾಧನೆಗೆ ಸರ್ಕಾರದಿಂದ ಮೂರು ವರ್ಷದಲ್ಲಿ ಸುಮಾರು 7ರಿಂದ 10 ಲಕ್ಷ ರೂ. ನಗದು ಪುರಸ್ಕಾರ ಸಿಗಬೇಕಿತ್ತು. ಆದರೆ, ಇಲ್ಲಿಯವರೆಗೆ ಒಂದು ಪೈಸೆಯೂ ಸಿಕ್ಕಿಲ್ಲ. ಇದರ ನಡುವೆ ಇತ್ತೀಚೆಗೆ ನಗದು ಪುರಸ್ಕಾರ ನೀಡುವ ನಿಯಮಾವಳಿ ಬದಲಾವಣೆ ಮಾಡಿದ್ದು, ಅದರಂತೆ ಪವರ್‌ಲಿಫ್ಟಿಂಗ್ ವಿಜೇತರಿಗೆ ನೀಡುವ ನಗದು ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡಲಾಗಿದೆ. ಇದು ಪ್ರದೀಪ್ ನಿರಾಸೆಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸ್ಪರ್ಧೆಗಳ ಮಾನದಂಡಕ್ಕೆ ಅನುಗುಣವಾಗಿ ದೇಹವನ್ನು ಒಗ್ಗಿಸಲು ತಿಂಗಳಿಗೆ 20ರಿಂದ 30 ಸಾವಿರ ರೂ. ಖರ್ಚು ಇದೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸಾಲ ಪಡೆದು ಮಂಗಳೂರಿನಲ್ಲಿ ಜಿಮ್ ನಡೆಸುತ್ತಿರುವ ಪ್ರದೀಪ್‌ಗೆ ಇದು ದೊಡ್ಡ ಹೊರೆ. ಪ್ರಾಯೋಜಕರು ಲಭಿಸಿದರೆ ಇನ್ನಷ್ಟು ಸಾಧನೆ ಸಾಧ್ಯವಿದೆ.
ಪ್ರದೀಪ್ ಅವರ ಮೊಬೈಲ್ ಸಂಖ್ಯೆ: 9663034824

ನಾವು ಬಾಡಿಗೆ ಮನೆಯಲ್ಲಿದ್ದೇವೆ. ನನ್ನ ಆದಾಯ ಮನೆ ಖರ್ಚಿಗೆ ಸಾಕಾಗುತ್ತಿಲ್ಲ. ಕಳೆದ ಬಾರಿಯ ಸ್ಪರ್ಧೆಗೆ ಅಡವಿಟ್ಟಿದ್ದ ಅಮ್ಮನ ಒಡವೆ ಇನ್ನೂ ಬಿಡಿಸಿಲ್ಲ. ಅದನ್ನು ಯಾವಾಗ ಬಿಡಿಸಿಕೊಡ್ತಿಯಾ ಎಂದು ಕೇಳುತ್ತಿರುತ್ತಾರೆ. ಇದರ ನಡುವೆ ಮತ್ತೆ ಚಿನ್ನ ಅಡವಿಟ್ಟಿದ್ದೇನೆ. ಸರ್ಕಾರದಿಂದ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಿದರೂ ಸ್ವೀಕರಿಸುತ್ತಿಲ್ಲ.
– ಪ್ರದೀಪ್ ಆಚಾರ್ಯ, ಕ್ರೀಡಾಪಟು

ಇಬ್ಬರು ಕ್ರೀಡಾಪಟುಗಳು ಅತಂತ್ರ

ದುಬೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯ ಅಬಕಾರಿ ಇಲಾಖೆ ಅನುಮತಿ ಸಿಗದೆ ಮಂಗಳೂರಿನ ಇಬ್ಬರು ಕ್ರೀಡಾಪಟುಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಸೆ.18ರಿಂದ 24ರವರೆಗೆ ಯುಎಇ ದುಬೈನಲ್ಲಿ ಏಷ್ಯನ್ ಬೆಂಚ್‌ಪ್ರೆಸ್ ಸ್ಪರ್ಧೆ ನಡೆಯಲಿದೆ. ರಾಜ್ಯ ಅಬಕಾರಿ ಇಲಾಖೆಯ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ವಲಯದಲ್ಲಿ ಅಬಕಾರಿ ನಿರೀಕ್ಷಕರಾಗಿರುವ ಸತೀಶ್ ಕುಮಾರ್ ಕುದ್ರೋಳಿ, ಮಂಗಳೂರು ಅಬಕಾರಿ ಜಂಟಿ ಆಯುಕ್ತರ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿರುವ ವಿನ್ಸೆಂಟ್ ಪ್ರಕಾಶ್ ಕಾರ್ಲೋ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಆದರೆ ಅಬಕಾರಿ ಇಲಾಖೆಯಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸೂಕ್ತ ಅನುಮತಿ ಹಾಗೂ ರಜೆ ಮಂಜೂರಾಗಿಲ್ಲ. ಈ ಬಗ್ಗೆ ಅರ್ಜಿ ಸಲ್ಲಿಸಿದ್ದರೂ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಇಬ್ಬರ ಅಂತಾರಾಷ್ಟ್ರೀಯ ಸ್ಪರ್ಧೆಯ ಭಾಗವಹಿಸುವಿಕೆ ನಿರೀಕ್ಷೆ ಹುಸಿಯಾಗುವ ಚಿಂತೆ ಇದೆ.

ಸ್ಪರ್ಧೆಯಲ್ಲಿ ಈ ಕ್ರೀಡಾಪಟುಗಳು ಭಾಗವಹಿಸದೇ ಇದ್ದಲ್ಲಿ ದೇಶ ಪದಕ ವಂಚಿತವಾಗುವುದು ಖಂಡಿತ. ಭಾರತ ತಂಡ ಸೆ.17ರಂದು ದುಬೈಗೆ ಪ್ರಯಾಣಿಸಲಿದ್ದು, ಅನುಮತಿ ಹಾಗೂ ರಜೆ ಮಂಜೂರಾತಿಯನ್ನು ಸೂಕ್ತ ಸಮಯದಲ್ಲಿ ಮಾಡಬೇಕು ಎಂದು ಮುಖ್ಯಮಂತ್ರಿ, ಕ್ರೀಡಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಒತ್ತಾಯಿಸಿದೆ.