ಬೆಂಗಳೂರು: ಗೃಹಬಳಕೆಯ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಕೈಗಾರಿಕೆಗಳ ತ್ಯಾಜ್ಯಗಳನ್ನು ಇಂಧನವಾಗಿ ಪರಿವರ್ತಿಸುವ ತಂತ್ರಜ್ಞಾನ ಸಂಶೋಧನೆಗೆ ಕೇಂದ್ರ ಸರ್ಕಾರ ಒತ್ತು ನೀಡಿರುವುದಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ಅನಿಲ ಸಚಿವಾಲಯ ಕಾರ್ಯದರ್ಶಿ ಡಾ.ಎಂ.ಎಂ. ಕುಟ್ಟಿ ಹೇಳಿದ್ದಾರೆ.
ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿ. ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘24ನೇ ರಿಪೈನಿಂಗ್ ಅಂಡ್ ಪೆಟ್ರೋ ಕೆಮಿಕಲ್ ಟೆಕ್ನಾಲಜಿ ಕುರಿತ 3 ದಿನಗಳ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ನಗರದ ಪ್ರದೇಶಗಳಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದೆ. ಅದರಂತೆ ತ್ಯಾಜ್ಯ ಸಮಸ್ಯೆಯೂ ಉಲ್ಬಣಿಸುತ್ತಿದೆ. ತ್ಯಾಜ್ಯ ಸಮಸ್ಯೆಗೆ ಪರಿಹಾರ ಹಾಗೂ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ತಾಂತ್ರಿಕತೆಯ ಸಂಶೋಧನೆಗೆ ಆದ್ಯತೆ ನೀಡಲಾಗಿದೆ ಎಂದರು.
ಸಿಎನ್ಜಿ ಬಳಕೆಗೆ ಪ್ರೋತ್ಸಾಹ: ಕೇಂದ್ರ ಸರ್ಕಾರ ಪರಿಸರಸ್ನೇಹಿ, ಶುದ್ಧ ಇಂಧನ ಬಳಕೆ ಉದ್ದೇಶದಿಂದ ದೆಹಲಿಯ ಸಮೂಹ ಸಾರಿಗೆಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಇದನ್ನು ಅನ್ಯ ರಾಜ್ಯಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಮನಸ್ಸು ಮಾಡಬೇಕು. ಕಡಿಮೆ ಮಾಲಿನ್ಯ ಉಂಟುಮಾಡುವ ಬಿಎಸ್-6 ಪೆಟ್ರೋಲ್ ಮತ್ತು ಬಿಎಸ್-5 ಡೀಸೆಲ್ ಅನ್ನು ದೆಹಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು ದೇಶದ ಎಲ್ಲ ನಗರಗಳಿಗೂ ವಿಸ್ತರಿಸಲಾಗುವುದು. ಮಾಲಿನ್ಯ ನಿಯಂತ್ರಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುತ್ತಿದ್ದು, ಇದರ ಪ್ರಮಾಣ 2030ಕ್ಕೆ ಶೇ.20 ತಲುಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಎಂಆರ್ಪಿಎಲ್ ಎಂಡಿ ಎಂ.ವೆಂಕಟೇಶ್, ಎಸ್ಎಸಿ ಅಧ್ಯಕ್ಷ ಡಾ. ಅನಿಲ್ ಕಾಕೋಡ್ಕರ್ ಇತರರಿದ್ದರು.
1,500 ಪ್ರತಿನಿಧಿಗಳು ಭಾಗಿ
ಮಂಗಳವಾರದವರೆಗೆ (ಜ.21) ನಡೆಯಲಿರುವ ಸಮ್ಮೇಳನ ಒಟ್ಟು 17 ವಿದೇಶಿ ಮತ್ತು 27 ದೇಶೀಯ ತೈಲ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ.1,500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. 15 ತಾಂತ್ರಿಕ ಗೋಷ್ಠಿಗಳು, 82 ತಾಂತ್ರಿಕತೆ ಕುರಿತ ವಿಷಯ ಮಂಡನೆಯಾಗಲಿವೆ.
ದೇಶದ ಅರ್ಥ ವ್ಯವಸ್ಥೆ ಇಂಧನ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಕಲ್ಲಿದ್ದಲಿನ ಇಂಧನ ಸಂಶೋಧನೆಯಿಂದ ಪ್ರಯೋಜನವಿಲ್ಲ. ಈಗಾಗಲೇ ಜಪಾನ್ ಸೇರಿ ಹಲವು ದೇಶದಲ್ಲಿ ಕಲ್ಲಿದ್ದಲು ಬಳಕೆ ನಿಷೇಧಿಸಲಾಗಿದೆ. ಹೀಗಾಗಿ ಪರಿಸರಸ್ನೇಹಿ ಇಂಧನಗಳಾದ ಬಯೋಮಾಸ್, ಜೈವಿಕ ಇಂಧನ ಉತ್ಪಾದನೆ ಕಡೆಗೆ ಗಮನಹರಿಸಬೇಕಿದೆ.
| ಡಾ. ಅನಿಲ್ ಕಾಕೋಡ್ಕರ್ ಹೈಡ್ರೋಕಾರ್ಬನ್ಸ್ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷ