ವಿದ್ಯುತ್ ಅವಘಡಕ್ಕೆ ಮೂರು ವರ್ಷದಲ್ಲಿ 333 ಬಲಿ

ಬೆಳಗಾವಿ: ವಿದ್ಯುತ್ ಅವಘಡ ತಪ್ಪಿಸಲು ಹಾಗೂ ವಿದ್ಯುತ್ ಇಲಾಖೆಯನ್ನು ಸಕಾಲ ಯೋಜನೆ ಅಡಿ ಅಳವಡಿಸುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿದ್ಯುತ್ ಅವಘಡದಿಂದ 333 ಜನರು ಮರಣ ಹೊಂದಿದ್ದಾರೆ. 241 ಜನ ಅಂಗವಿಕಲರಾಗಿದ್ದಾರೆ. 163 ಜಾನುವಾರು ಸತ್ತಿವೆ. 6 ಸಾವಿರ ಎಕರೆ ಬೆಳೆ ನಾಶ ಆಗಿದೆ.

ಇದಕ್ಕೆ ಬದಲಾಯಿಸದ ಹಳೆ ವಿದ್ಯುತ್ ತಂತಿ, ಜೋತು ಬಿದ್ದ ವಿದ್ಯುತ್ ತಂತಿ, ಪರಿವರ್ತಕಗಳ ಮೇಲೆ ಹೆಚ್ಚಿನ ಲೋಡ್ ಹಾಗೂ ಹೈವೋಲ್ಟೇಜ್ ಕಾರಣವಾಗಿದೆ. ಈ ಅಂಕಿ ಅಂಶಗಳು ಬೆಳಗಾವಿ, ವಿಜಯಪುರ,ಬಾಗಲಕೋಟೆ ಜಿಲ್ಲೆಗಳಿಗಳಿಗೆ ಮಾತ್ರ ಸಂಬಂಧಿಸಿದ್ದು, ಇಡೀ ರಾಜ್ಯದ ಮಾಹಿತಿ ಬಹಿರಂಗಗೊಂಡರೆ ಜನರ ಸಾವಿನ ಸಂಖ್ಯೆ ಹೆಚ್ಚುವ ಆತಂಕ ಇದೆ ಎಂದರು.

ವಿದ್ಯುತ್ ಅವಘಡ, ದುರಂತದಲ್ಲಿ ಮೃತಪಟ್ಟವರಿಗೆ ನೀಡಿದ ಪರಿಹಾರದ ವಿವರವನ್ನು ಅಧಿಕಾರಿಗಳು ನೀಡದಿರುವುದು ವಿಷಾದನೀಯ ಎಂದರು.
ವಿದ್ಯುತ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ವಾಸ ಮಾಡದೆ ಇರುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ. ಇನ್ನು ಅಕ್ರಮ ಸಕ್ರಮ ಯೋಜನೆಯಲ್ಲಿ ಕೆಲವು ರೈತರು ಸಾಲ ಮಾಡಿ ಕಂಪನಿಗಳಿಗೆ ಹಣ ಪಾವತಿಸಿದರೂ ಹಲವು ವರ್ಷಗಳಿಂದ ಅವರಿಗೆ ಸಾಮಗ್ರಿ ದೊರೆತಿಲ್ಲ.

ಅಕ್ರಮ ಸಕ್ರಮ ಯೋಜನೆಯಲ್ಲಿ 4 ವರ್ಷಗಳ ಅವಧಿಯಲ್ಲಿ 89,988 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 53,284 ಕಾಮಗಾರಿಗಳು ಪ್ರಗತಿಯಲ್ಲಿವೆ. 19,777 ಪಂಪ್‌ಸೆಟ್‌ಗಳ ಕೆಲಸ ಬಾಕಿ ಇದೆ. ರೈತರ ಪಂಪ್‌ಸೆಟ್‌ಗಳಿಗೆ ಸತತ 7 ಗಂಟೆ ವಿದ್ಯುತ್ ಪೂರೈಸುವುದಾಗಿ ಮುಖ್ಯಮಂತ್ರಿ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಇಷ್ಟೊಂದು ತಾಂತ್ರಿಕ ತೊಂದರೆಗಳಿರುವಾಗ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂದು ಭೀಮಪ್ಪ ಗಡಾದ ಪ್ರಶ್ನಿಸಿದರು. ಈ ಎಲ್ಲ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಭೀಮಪ್ಪ ಗಡಾದ ಒತ್ತಾಯಿಸಿದರು.