ಪರೀಕ್ಷೆ ಸಂದರ್ಭ ವಿದ್ಯುತ್ ನಿಲುಗಡೆ

 

ಬಾಲಚಂದ್ರ ಕೋಟೆ ಬೆಳ್ಳಾರೆ

ಮಾರ್ಚ್ ತಿಂಗಳಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮುಂದೆ ಪೂರ್ವ ತಯಾರಿ, ಪಬ್ಲಿಕ್ ಪರೀಕ್ಷೆ, ಸಿಇಟಿ ಇತ್ಯಾದಿ ಹಲವು ಪರೀಕ್ಷೆಗಳ ಸರಣಿಯೇ ಇರುತ್ತದೆ. ಈ ಸಮಯದಲ್ಲೇ ಬೆಳ್ಳಾರೆ ಹಾಗೂ ಸುತ್ತಮುತ್ತ ಅನಿಯಮಿತ ಪವರ್ ಕಟ್ ಸಮಸ್ಯೆ ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಚಿಂತೆಗೀಡು ಮಾಡಿದೆ.

ಇತ್ತೀಚೆಗಿ ಬೆಳ್ಳಾರೆಯಲ್ಲಿ ಪದೇಪದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಹೆಚ್ಚಿನ ಮನೆಗಳಲ್ಲಿ ಸೀಮೆಎಣ್ಣೆ ದೀಪದ ನೆರವಿನಿಂದಲೇ ವಿದ್ಯಾರ್ಥಿಗಳು ಓದುತ್ತಿರುವುದು ಸಾಮಾನ್ಯವಾಗುತ್ತಿದೆ. ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ.

ಪರ್ಯಾಯ ವ್ಯವಸ್ಥೆ ಕಷ್ಟ: ಬೆಳ್ಳಾರೆ ಆಸುಪಾಸು ಸಂಪೂರ್ಣ ಗ್ರಾಮೀಣ ಭಾಗವಾಗಿದ್ದು, ಹೆಚ್ಚಿನವರು ಕೂಲಿ ಕಾರ್ಮಿಕರೇ ಇರುವುದರಿಂದ ಶೇ.60ರಷ್ಟು ಮನೆಗಳಲ್ಲಿ ವಿದ್ಯುತ್‌ಗೆ ಪರ್ಯಾಯ ವ್ಯವಸ್ಥೆ ಇರುವುದಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸುವಷ್ಟು ಶಕ್ತರೂ ಆಗಿರುವುದಿಲ್ಲ. ಹೀಗಾಗಿ ವಿದ್ಯುತ್ ಅವಲಂಬನೆಯೇ ಅನಿವಾರ್ಯ. ಬೆಳ್ಳಾರೆ, ಚೊಕ್ಕಾಡಿ, ಕುಕ್ಕುಜಡ್ಕ, ಬಾಳಿಲ, ನಿಂತಿಕಲ್ಲು ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದು, ವಿದ್ಯುತ್ ಸಮಸ್ಯೆ ತೀವ್ರ ಕಾಡುತ್ತಿದೆ.

ಮಾಮೂಲು ಈ ಗೋಳು: ಪ್ರತಿ ವರ್ಷವೂ ಪರೀಕ್ಷಾ ವೇಳೆಯಲ್ಲಿ ಅನಿಯಮಿತ ವಿದ್ಯುತ್ ಕಡಿತದ ಗೋಳು ಮಾಮೂಲು. ವಿದ್ಯಾರ್ಥಿಗಳ ಪಾಲಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ವಿದ್ಯುತ್ ಕಡಿತಗೊಳಿಸದಂತೆ ವಿನಂತಿಸಿಕೊಂಡರೂ ಸಮಸ್ಯೆ ಪರಿಹಾರ ಕಂಡಿಲ್ಲ. ಸಾರ್ವಜನಿಕರು ಇದರಿಂದ ತೊಂದರೆಗೊಳಗಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದರೆ ರಿಪೇರಿಯ ಸಬೂಬು ನೀಡುತ್ತಾರೆ. ಇದರಿಂದ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ತ್ವರಿತ ಕ್ರಮಕ್ಕೆ ಮೆಸ್ಕಾಂ ಅನ್ನು ಆಗ್ರಹಿಸಿದ್ದಾರೆ.

ಪದೇಪದೆ ಗಂಟೆಗಟ್ಟಲೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಓದಲು ತೀವ್ರ ತೊಂದರೆಯಾಗುತ್ತಿದೆ. ವಿಶೇಷವಾಗಿ ರಾತ್ರಿ ವಿದ್ಯುತ್ ಕಡಿತ ಮಾಡುತ್ತಿರುವುದು ಇನ್ನಷ್ಟು ಸಮಸ್ಯೆಯಾಗಿದೆ.
ಅಜಿತ್, ವಿದ್ಯಾರ್ಥಿ

ಪವರ್ ಕಟ್ ಮಾಡಲು ಸರ್ಕಾರದ ಆದೇಶವಿದ್ದು, ಮಾಡಲಾರದೆ ಬೇರೆ ದಾರಿಯಿಲ್ಲ. ನಾವು ಸರ್ಕಾರದ ಆದೇಶ ಪಾಲಿಸುತ್ತಿದ್ದೇವೆ.
ಸತೀಶ್, ಜೆ.ಇ ಮೆಸ್ಕಾಂ ಬೆಳ್ಳಾರೆ