ಜಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕಗಳ ಬೇಡಿಕೆ ಹೆಚ್ಚಿದೆ. ಒಮ್ಮೆ ಸುಟ್ಟು ಹೋದರೆ ವಾರ ಅಲೆದರೂ ಸಿಗುವುದಿಲ್ಲ. ಆದರೆ, ಹಣಕೊಟ್ಟರೆ ಸಾಕು ಇಲ್ಲೊಬ್ಬ ಲೈನ್‌ಮನ್ ಒಂದೇ ದಿನದಲ್ಲಿ ಟಿಸಿ ಕೂರಿಸುತ್ತಾನೆ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ.
ಜಗಳೂರು ತಾಲೂಕಿನ ಜಮ್ಮಾಪುರ ಸೇರಿ ಐದಾರು ಹಳ್ಳಿ ವ್ಯಾಪ್ತಿಯ ಲೈನ್‌ಮನ್ ಇಪ್ಪತ್ತು ವರ್ಷಗಳಿಂದ ಒಂದೇ ಕಡೆ ಬೇರೂರಿದ್ದು, ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾನೆ.
ಗ್ರಾಮಗಳಲ್ಲಿ ಕೃಷಿ ಅಥವಾ ಕುಡಿವ ನೀರಿನ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದರೆ ಕನಿಷ್ಠ ಐದಾರು ದಿನಗಳಾದರೂ ದುರಸ್ತಿಪಡಿಸುವುದಿಲ್ಲ. ರೈತರು ಅಲೆದಾಡಿದರೂ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಆದರೆ, ಹಣ ಕೊಟ್ಟರೆ ಲೈನ್‌ಮನ್ ಒಂದೇ ದಿನದಲ್ಲಿ ಟಿಸಿ ಅಳವಡಿಸುತ್ತಾನೆ. ಹಾಗಾದಾರೆ ಅವುಗಳನ್ನು ಎಲ್ಲಿಂದ ತರುತ್ತಾನೆ? ಎಷ್ಟು ದಾಸ್ತಾನು ಮಾಡಿದ್ದಾನೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ರೈತ ಈಶ್ವರಪ್ಪ ಒತ್ತಾಯಿಸಿದ್ದಾರೆ.
ಜಮ್ಮಾಪುರ ಗ್ರಾಮದಲ್ಲಿ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಲೈನ್‌ಮನ್ ಮೂರು ವಿದ್ಯುತ್ ಪರಿವರ್ತಕಗಳನ್ನು (ಟಿಸಿ ನಂಬರ್: 370717, 321952, 341122) ಬಚ್ಚಿಟ್ಟಿದ್ದಾರೆ ಎಂದು ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.
ಶಾಸಕರಿಂದ ಎಚ್ಚರಿಕೆ: ಲೈನ್‌ಮನ್ ವಿರುದ್ಧ ವರ್ಷದ ಹಿಂದೆ ಆರೋಪ ಕೇಳಿಬಂದಿತ್ತು. ಹಾಗಾಗಿ, ಎಇಇ ಸುಧಾಮಣಿ ಬಿಳಿಚೋಡು ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ರೈತರು ಆತನ ವಿರುದ್ಧ ದೂರು ನೀಡಿದಾಗ, ಶಾಸಕ ಬಿ. ದೇವೇಂದ್ರಪ್ಪ ಅವರು ಲೈನ್‌ಮನ್‌ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಆದರೂ, ಪ್ರಭಾವಿಗಳನ್ನು ಬಳಸಿಕೊಂಡು ಮತ್ತೆ ಜಮ್ಮಾಪುರಕ್ಕೆ ವರ್ಗಾವಣೆಯಾಗಿ ಬಂದಿದ್ದಾನೆ. ಆದರೆ, ಆತ ಅಕ್ರಮಗಳನ್ನು ನಿಲ್ಲಿಸಿಲ್ಲ. ಟಿಸಿ ಮಾರಾಟ ದಂಧೆ ಹೆಚ್ಚಾಗಿದೆ. ಪ್ರತಿ ವರ್ಷ ರೈತರಿಂದ ತಲಾ ಒಂದೊಂದು ಸಾವಿರ ರೂ. ವಸೂಲಿ ಮಾಡುತ್ತಾನೆ ಎನ್ನುವ ದೂರಿದೆ.
20 ವರ್ಷಗಳಿಂದ ಒಂದೇ ಕಡೆ ಕೆಲಸ: ಒಬ್ಬ ಲೈನ್‌ಮನ್ ಐದಾರು ವರ್ಷ ಒಂದೇ ಕಡೆ ಕೆಲಸ ಮಾಡುವುದು ಕಷ್ಟ. ಆದರೆ, ಈ ರುದ್ರಗೌಡ ಕಳೆದು ಇಪ್ಪತ್ತು ವರ್ಷಗಳಿಂದಲೂ ಜಮ್ಮಾಪುರ ಸುತ್ತಲೂ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಈತ ಎಷ್ಟು ರಾಜಕೀಯ ಪ್ರಭಾವ ಬೀರಿದ್ದಾನೆ. 20 ವರ್ಷಗಳಲ್ಲಿ ಮುರು ಬಾರಿ ವರ್ಗವಾದರೂ ಪುನಃ ಇಲ್ಲಿಗೆ ಹಣ ಕೊಟ್ಟು ವರ್ಗಮಾಡಿಸಿಕೊಳ್ಳುತ್ತಾನೆ. ಇವರಿಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕೈ ಜೋಡಿಸುತ್ತಿದ್ದಾರೆ. ಇಷ್ಟೆಲ್ಲ ಅಕ್ರಮಗಳು ಹೊರಬಂದರೂ ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಬೆಸ್ಕಾಂ ಇಲಾಖೆ ರೈತರ ಒಳಿತನ್ನು ಬಯಸುತ್ತದೆ. ಲೈನ್‌ಮನ್ ಟಿಸಿ ವಿಚಾರದಲ್ಲಿ ಲೋಪ ಎಸಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಎಇಇ ಸುಧಾಮಣಿ ಅವರಿಗೆ ಸೂಚನೆ ನೀಡಲಾಗಿದೆ. ತಪ್ಪಿದ್ದರೆ ಲೈನ್‌ಮನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
l ಎಸ್.ಕೆ. ಪಾಟೀಲ್, ಬೆಸ್ಕಾಂ ಎಇ, ದಾವಣಗೆರೆ.