ಕಾಶ್ಮೀರಿ ಕಣಿವೆಯಲ್ಲಿ ಭಾರಿ ಹಿಮಪಾತ, ಆಸ್ಪತ್ರೆಗಳಲ್ಲಿ ವಿದ್ಯುತ್‌ ಕಡಿತ

ಶ್ರೀನಗರ: ಕಾಶ್ಮೀರದ ಕಣಿವೆಯಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಆ ಪ್ರದೇಶದಾದ್ಯಂತ ವಿದ್ಯುತ್‌ ಸ್ಥಗಿತಗೊಂಡಿದೆ. ಶನಿವಾರ ಮುಂಜಾನೆವರೆಗೂ ರಾಜ್ಯದ ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಅಧಿಕಾರಿಗಳು ಪರದಾಡುವಂತಾಗಿದೆ.

ಹಿಮಪಾತದಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ರದ್ದುಗೊಂಡ ವಿಮಾನಗಳು ಮತ್ತು ಜಮ್ಮು ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಿರುವ ವಿಮಾನಗಳ ಪಟ್ಟಿಯನ್ನು ಅಧಿಕಾರಿಗಳು ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ನಗರದ ಹಲವೆಡೆಯಲ್ಲಿ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ಹಲವಾರು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ಸಂಪರ್ಕ ಕಡಿತಗೊಂಡಿದೆ. ಸೇಬು ತೋಟಗಳ ಮೇಲೆ ಹಿಮಪಾತವು ಭಾರಿ ಪರಿಣಾಮ ಬೀರಿದ್ದು, ಸೇಬು ಬೆಳೆಯುವ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಇನ್ನು ನಿನ್ನೆಯಷ್ಟೇ ಮುಘಲ್‌ ರಸ್ತೆಯಲ್ಲಿನ ಪೀರ್‌ ಕಿ ಗಾಲಿಬಳಿ ಹಿಮಪಾತಕ್ಕೆ ಸಿಲುಕಿದ್ದ 120 ಜನರನ್ನು ರಕ್ಷಿಸಲಾಗಿತ್ತು.

ಇಂದಿನಿಂದ ಹಮಾಮಾನದಲ್ಲಿ ಬದಲಾವಣೆ ಕಂಡುಬರಲಿದ್ದು, ನವೆಂಬರ್‌ 5ರಿಂದ ಎರಡು ಮೂರು ವಾರಗಳಲ್ಲಿ ಒಣ ವಾತಾವರಣವಿರಲಿದೆ ಎಂದು ಕಾಶ್ಮೀರ ಹವಾಮಾನ ಇಲಾಖೆ ಊಹಿಸಿದೆ. (ಏಜೆನ್ಸೀಸ್)