ಕುಶಾಲನಗರ:
ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೂಡಿಗೆ ವಿಭಾಗದ ಸಹಾಯಕ ಲೈನ್ ಮ್ಯಾನ್ ಇಸ್ಮಾಯಿಲ್ ಅತ್ತಾರ ಶನಿವಾರ ವಿದ್ಯುತ್ ಸುರಕ್ಷತೆಯ ಬಗ್ಗೆ, ವಿದ್ಯುತ್ ನಿಂದ ಆಗುವ ಅನಾಹುತಗಳು ಮತ್ತು ಅವಘಡಗಳ ಬಗ್ಗೆ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಇವರು ತನ್ನ ವೈಯಕ್ತಿಕ ಅನುಭವದ ಮೂಲಕ ವಿದ್ಯುತ್ ಸುರಕ್ಷತೆ, ವಿದ್ಯುತ್ ನಿಂದ ಆಗುವ ಅನಾಹುತ, ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಟ್ಟದೆ ಗ್ರಾಮದ ಹಿರಿಯರಿಗೆ, ಶಾಲಾ ಶಿಕ್ಷಕರಿಗೆ ತಿಳಿಸುವ, ವಿದ್ಯಾರ್ಥಿಗಳು ಮನೆ ಹತ್ತಿರ, ಅಥವಾ ಶಾಲೆ ಆವರಣದಲ್ಲಿ, ವಿದ್ಯುತ್ ಇಲಾಖೆಯ ವತಿಯಿಂದ ಅಳವಡಿಸಲಾಗಿರುವ ಟ್ರಾನ್ಸ್ ಫಾರ್ಮರ್ಗಳ ಹತ್ತಿರಕ್ಕೆ ಹೋದರೆ ಅಲ್ಯೂಮಿಲಿಯಂ ತಂತಿಗಳಲ್ಲಿಯೂ ಸಹ ವಿದ್ಯುತ್ ಸಂಚಾರವಾಗುತ್ತಿರುವ ಬಗ್ಗೆ ಅಲ್ಲದೆ ಮಕ್ಕಳ ಪೋಷಕರು ಟ್ರಾನ್ಸ್ಪಾರ್ಮರ್ ಹತ್ತಿರ ಹಸುಗಳನ್ನು ಸಿಮೆಂಟ್ ಕಂಬಕ್ಕೆ ಕಟ್ಟುವುದು, ವಿದ್ಯಾರ್ಥಿಗಳು ಗಾಳಿಪಟ ಹಾರಾಟ ಮಾಡುವ ಸಂದರ್ಭದಲ್ಲಿ ಅಲ್ಲಿಗೆ ಸಿಲುಕಿದ ಸಂದರ್ಭದಲ್ಲಿ ಸಮೀಪಕ್ಕೆ ಹೋದಾಗ ಆಗಿರುವ ಅನೇಕ ಅವಘಡಗಳ ಮಾಹಿತಿ ನೀಡಿದರು.
ಆರ್.ಸಿ.ಸಿ.ಮನೆಗಳ ಸಮೀಪದಲೇ ಹೋಗಿರುವ ವಿದ್ಯುತ್ ತಂತಿಗಳ ಸಮೀಪದಲ್ಲಿ ಬಟ್ಟೆಗಳನ್ನು ಒಣಗಿಸಲು ಹಾಕುವುದರ ಅಪಾಯ ಸೇರಿದಂತೆ ಸಾಮಾನ್ಯ ಜ್ಞಾನದ ಮೂಲಕ ಸಮಗ್ರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸೀಗೆಹೊಸೂರು, ಕಣಿವೆ, ಜೇನುಕಲ್ಲು ಬೆಟ್ಟದ ಶಾಲೆ, ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆ ಗಳಿಗೆ ಭೇಟಿ ನೀಡಿ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಶಿಕ್ಷಕರು , ಇಲಾಖೆಯ ನೌಕರರ ವೃಂದ ಹಾಜರಿದ್ದರು.