ಬಡತನ ಶಾಪವಲ್ಲ ಸವಾಲು

ಮೆಡಿಕಲ್ ಕಾಲೇಜಿನಲ್ಲಿ ನಾನು ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ವೇಳೆ. ಒಂದು ದಿನ ವಿದ್ಯಾರ್ಥಿಯೊಬ್ಬ ತಲೆ ಬಗ್ಗಿಸಿ, ನಿದ್ದೆ ಮಾಡುತ್ತಿರೋದು ನನಗೆ ಗೋಚರಿಸಿತು. ನಾನು ‘ನಿದ್ದೆ ಮಾಡಲು ಕಾಲೇಜಿಗೇಕೆ ಬರುವೆ? ಹೋಗಿ ಮನೆಯಲ್ಲೇ ನಿದ್ದೆ ಮಾಡು’ ಎಂದು ಹೇಳುತ್ತಾ ಅವನನ್ನು ಕ್ಲಾಸಿನಿಂದ ಹೊರ ಹಾಕಿದೆ.

ಕ್ಲಾಸು ಮುಗಿಯುತ್ತಲೇ, ಆ ಹುಡುಗ ನನ್ನ ಚೇಂಬರ್ ಒಳಗೆ ಬಂದ. ಬಂದವನೇ ‘ತಪ್ಪಾಯಿತು, ಕ್ಷಮಿಸಿ ಬಿಡಿ ಸಾರ್’ ಎಂದ. ನಾನು ಅವನನ್ನು ಕೇಳಿದೆ, ‘ಅಲ್ಲಯ್ಯಾ,ಯಾಕೆ ರಾತ್ರಿ ನಿದ್ದೆ ಮಾಡಿರಲಿಲ್ಲವೇ?’ ಅದಕ್ಕವನು ‘ಇಲ್ಲ ಸಾರ್’ ಅಂದ. ‘ಏಕೆ?’ ಎಂದು ಪ್ರಶ್ನಿಸಿದೆ. ‘ಆಟೋ ರಿಕ್ಷಾ ಓಡಿಸುತ್ತಿದ್ದೆ ಸರ್’ ಅಂದ. ‘ಕುಡುಕ ಅಪ್ಪನನ್ನು ಬಾಲ್ಯದಲ್ಲೇ ಕಳಕೊಂಡೆ. ನನ್ನ ಅಮ್ಮ, ತಮ್ಮ, ತಂಗಿಯರನ್ನು ಸಾಕುವ ಜವಾಬ್ದಾರಿಯೂ ನನ್ನ ಮೇಲಿದೆ. ರಾತ್ರಿ ಆಟೋ ಓಡಿಸಿ, ಮನೆಯ ಖರ್ಚನ್ನು ನಿಭಾಯಿಸುತ್ತಿದ್ದೇನೆ ಸಾರ್’ ಅಂದ. ಇದನ್ನು ದೃಢಪಡಿಸಿಕೊಳ್ಳಲು, ಅವನ ಮನೆಗೆ ಹೋಗಿ ಪರಿಶೀಲಿಸಿದಾಗ ಇದು ಸತ್ಯ ಎಂದು ತಿಳಿಯಿತು.

ಕಾರಣವನ್ನು ತಿಳಿದುಕೊಳ್ಳದೆ, ಇವನನ್ನು ಕ್ಲಾಸಿನಿಂದ ಹೊರ ಹಾಕಿದುದಕ್ಕಾಗಿ ನಾನು ಅವನಿಗೆ ಮರುದಿನ ಕ್ಲಾಸಿನಲ್ಲಿ, ಎಲ್ಲ ಮಕ್ಕಳ ಎದುರು ‘ಸಾರಿ’ ಹೇಳಿದೆ. ಇಷ್ಟೊಂದು ಬಡತನವಿದ್ದರೂ, ಆತ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲೇ ಪಾಸಾದ. ಇದರ ಬಗ್ಗೆ ಕೇಳಿದಾಗ ಆತ, ‘ನಮ್ಮ ಅಮ್ಮ 60ರ ವಯಸ್ಸಿನಲ್ಲೂ, ಮನೆ ಮನೆಗೆ ಹೋಗಿ, ಕಸ ಗುಡಿಸಿ, ಪಾತ್ರೆ ಬೆಳಗಿ, ಬಟ್ಟೆ ತೊಳೆದು ಬಂದ ಹಣದಿಂದ ಎಲ್ಲಾ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳುತ್ತಿದ್ದಾಳೆ. ಒಂದು ವರ್ಷ ನಾನು ಫೇಲಾದರೂ, ಆಕೆ ಒಂದು ವರ್ಷ ಜಾಸ್ತಿ ದುಡಿಯ ಬೇಕಾಗುತ್ತದೆ. ಆದ್ದರಿಂದ ಪ್ರತೀ ವರ್ಷ ಪಾಸಾಗ ಲೇಬೇಕು; ಈ ಬಡತನ ಸವಾಲಿನ ಜತೆ ಧೈರ್ಯದಿಂದ ಎದುರಿಸುವ ಶಕ್ತಿಯನ್ನೂ ಕೊಟ್ಟಿದೆ’ ಎಂದ.

ಖ್ಯಾತ ವಿಜ್ಞಾನಿ ಮೈಕೆಲ್ ಫ್ಯಾರಡೆ ಪುಸ್ತಕ ವ್ಯಾಪಾರಿಯಾಗಿ; ಅಮೆರಿಕದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ಕಟ್ಟಿಗೆ ಒಡೆಯುವವನ ಮಗನಾಗಿ; ಎರಡೆರಡು ವಿಷಯಗಳಲ್ಲಿ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಮೇಡಂ ಕ್ಯೂರಿ ಬಡ ಶಿಕ್ಷಕಿಯ ಮಗಳಾಗಿ ಬಡತನದಲ್ಲೇ ಬೆಳೆದವರು. ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು, ಬೀದಿ ದೀಪದಲ್ಲಿ ಓದಿದವರು, ಟ್ಯೂಷನ್ ನೀಡಿ ಬಂದ ಹಣದಿಂದ, ಶಾಲಾ ಖರ್ಚು ನಿಭಾಯಿಸಿದವರು. ಅವರು, ಸೋದರ ಮಾವನಿಂದ, ಕಾಲೇಜು ಫೀಸ್ ಪಡೆಯಲು ಮುದ್ದೇನಹಳ್ಳಿಯಿಂದ ಬೆಂಗಳೂರಿನವರೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವೃತ್ತ ಪತ್ರಿಕೆಗಳನ್ನು ಹಾಕಿ ಬಂದ 150 ರೂಪಾಯಿಗಳಿಂದ ಓದನ್ನು ಮುಂದುವರಿಸಿದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಗೂ ಬಡತನ ಕಾಡದಿರಲಿಲ್ಲ. ಆದರೆ ಇವರೆಲ್ಲರೂ, ಬಡತನವನ್ನು ಶಾಪವನ್ನಾಗಿ ಪರಿಗಣಿಸಿದವರಲ್ಲ, ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದವರು; ಜಯಶಾಲಿಗಳಾದವರು.

ಹಾಗೆ ನೋಡಿದರೆ, ಜೀವನದಲ್ಲಿ ಸಮಸ್ಯೆಗಳಿಲ್ಲದವರಾರೂ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ತರದ ಸವಾಲುಗಳು, ಸಂಕಷ್ಟಗಳು. ಒಂದು ರೀತಿಯಲ್ಲಿ ನೋಡಿದರೆ, ಬಡತನ ಒಂದು ಶಾಪವಲ್ಲ, ಅದೊಂದು ಸವಾಲು. ಅದನ್ನು ಎದುರಿಸಿ, ಮುನ್ನಡೆಯುವ ಧೃಢ ಸಂಕಲ್ಪ ನಮ್ಮದಾಗಬೇಕು. ಇಲ್ಲವಾದರೆ, ಜೀವನದಲ್ಲಿ ನಾವು ವಿಫಲರಾದಂತೆ. ಈ ಸತ್ಯವನ್ನೇ ಜಗತ್ತಿನ ಅತಿ ದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಈ ರೀತಿಯಾಗಿ ಹೇಳಿದ “If you are born as a poor man, that is not your mistake, but if you also die as a poor man, that is your mistake.”

ಅರ್ಥಾತ್ ನೀನು ಬಡವನಾಗಿ ಹುಟ್ಟಿದರೆ, ಅದು ನಿನ್ನ ತಪ್ಪಲ್ಲ; ಆದರೆ, ಬಡವನಾಗಿಯೇ ಸತ್ತರೆ ಅದು ನಿನ್ನ ತಪ್ಪು. ಈ ದೃಷ್ಟಿಯಿಂದ ಬಡತನವನ್ನು ಮೆಟ್ಟಿ ನಿಲ್ಲುವ ಸಂಕಲ್ಪ ನಮ್ಮದಾಗಬೇಕು.

ಇದರರ್ಥ ನಮ್ಮ ಮಕ್ಕಳನ್ನು ಬಡತನದಲ್ಲೇ ಬೆಳೆಸಬೇಕೆಂದಲ್ಲ; ಆದರೆ ಅವರಿಗೆ ಬಡತನದ ಪರಿಚಯವೂ ಇರುವಂತಾಗಬೇಕು. ಈ ಸತ್ಯವನ್ನೇ ಸಾರಲು ಅಬ್ರಹಾಂ ಲಿಂಕನ್ ತನ್ನ ಮಗನ ಶಾಲಾ ಶಿಕ್ಷಕಿಗೆ ಪತ್ರ ಬರೆದು ‘ಮಗನಿಗೆ 10 ಡಾಲರ್ ಹೇಗೆ ಖರ್ಚು ಮಾಡೋದು ಎಂದು ಹೇಳಿಕೊಡುವ ಬದಲು ಒಂದು ಡಾಲರ್ ಹೇಗೆ ಸಂಪಾದಿಸೋದು ಎಂಬುದನ್ನು ತಿಳಿ ಹೇಳಿ’ ಎಂದಿದ್ದರು. ಬಡತನಕ್ಕೆ ಸಮಯ ಸಂದರ್ಭಗಳಿಲ್ಲ. ಎಂತಹ ಕೋಟ್ಯಧಿಪತಿಗಳೂ ಭಿಕ್ಷುಕರಾಗಬಹುದು. ಬಡತನಕ್ಕೆ ಜಾತಿ ಇಲ್ಲ. ಮೇಲ್​ವರ್ಗದವರಲ್ಲೂ ಬಡವರಿದ್ದಾರೆ, ಹಾಗೆಯೇ ಹಿಂದುಳಿದ ಜಾತಿಯವರಲ್ಲಿಯೂ ಶ್ರೀಮಂತರಿದ್ದಾರೆ. ಈ ದೃಷ್ಟಿಯಲ್ಲಿ ಜಾತ್ಯಾಧಾರಿತವಲ್ಲದ, ವೃತ್ತಿಯ ಆರ್ಥಿಕ ಸ್ಥಿತಿಗನುಗುಣವಾದ ಮೀಸಲಾತಿ ನೀತಿ ಸಮಂಜಸವೆನಿಸೀತು.

ಸಿರಿತನ ಬದುಕನ್ನು ಬದಲಿಸುತ್ತದೆ; ಆದರೆ ಬಡತನ ಬದುಕುವುದನ್ನು ಕಲಿಸುತ್ತದೆ ಎಂಬ ಮಾತಿದೆ. ತುಂಬಿದ ಜೇಬು ದಾರಿ ತಪ್ಪುವಂತೆ ಮಾಡಿದರೆ, ಖಾಲಿ ಜೇಬು ಬದುಕುವ ದಾರಿಯನ್ನು ಕಂಡು ಹಿಡಿಯಲು ನೆರವಾಗುತ್ತದೆ. ಕಾರಣ, ಬಡತನ ಕಾಡಿದಾಗಲೇ ಶಕ್ತಿ ಸಾಮರ್ಥ್ಯ ಪ್ರಕಟವಾಗೋದು. ಅಲೆಗಳೇ ಇಲ್ಲದ ಶಾಂತ ಸಮುದ್ರ ಸಮರ್ಥ ಈಜುಗಾರನನ್ನು ಸೃಷ್ಟಿಸಲಾರದು. ಆದ್ದರಿಂದ ಬಡತನವೆಂದರೆ ಭಯವೂ ಬೇಡ, ಬೇಸರವೂ ಬೇಡ. ಇಷ್ಟಕ್ಕೂ ಮೌನವಾಗಿದ್ದರೆ, ಜಗಳವಿಲ್ಲ; ಜಾಗೃತ ರಾಗಿದ್ದರೆ ಭಯವಿಲ್ಲ ಹಾಗೂ ದುಡಿದರೆ ಬಡತನವಿಲ್ಲ ಎಂಬ ಮಾತಿನಂತೆ, ದುಡಿಯುವವನ ಬಳಿ ಬಡತನ ಬಾರದು; ದುಡಿಯದೆ ತಿನ್ನುವವನಿಗೆ ಎಷ್ಟಿದ್ದರೂ ಸಾಲದು!

One Reply to “ಬಡತನ ಶಾಪವಲ್ಲ ಸವಾಲು”

Leave a Reply

Your email address will not be published. Required fields are marked *