ನೆಲಮಂಗಲ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ನಾಗರಿಕರಿಗೆ ತೊಂದರೆ ಇಲ್ಲ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ತಿಳಿಸಿದರು.
ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ಗುರುವಾರ ಬೆಂ.ಗ್ರಾಮಾಂತರ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿದ್ದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳನ್ನೆ ಪ್ರಮುಖವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಪಾರ್ಲಿಮೆಂಟ್ ಪ್ರತಿ ಪಕ್ಷ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗದ ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿಟ್ಟುಕೊಂಡು ದೇಶದಲ್ಲಿರುವ ಮುಸ್ಲಿಮರನ್ನು ದಾರಿತಪ್ಪಿಸುತ್ತಿದೆ. ದೇಶದಲ್ಲಿ ಅರಾಜಕತೆ, ಅಭದ್ರತೆ ವಾತಾವರಣ ಸೃಷ್ಟಿಸುತ್ತಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆ ಎಬಿವಿಪಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪೌರತ್ವ ಕಾಯ್ದೆ ದೇಶದ ಗಡಿಯನ್ನು ರಕ್ಷಿಸುವುದು, ಒಳನುಸುಳುವಿಕೆಯನ್ನು ತಪ್ಪಿಸಲು ಪೂರಕವಾಗಿದೆ. ದೇಶಭದ್ರತೆಗೆ ಸಹಕಾರಿಯಾಗಬಲ್ಲ ಕಾಯ್ದೆಗೆ ಜಾರಿಗೆ ಬೆಂಬಲ ನೀಡುವುದು ಎಲ್ಲರ ಕರ್ತವ್ಯ ಎಂದರು.
ಎಬಿವಿಪಿ ಗ್ರಾಮಾಂತರ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಸಂಚಾಲಕ ಸುಧಾಕರ್, ವಿದ್ಯಾರ್ಥಿನಿ ಘಟಕ ಜಿಲ್ಲಾಧ್ಯಕ್ಷೆ ವಿನುತಾ, ತಾಲೂಕು ಅಧ್ಯಕ್ಷ ಭರತ್, ಸಂಚಾಲಕ ಮಹೇಶ್, ವಿದ್ಯಾರ್ಥಿನಿ ಘಟಕ ತಾಲೂಕು ಅಧ್ಯಕ್ಷೆ ಮಂಜುಶ್ರೀ, ಸಂಚಾಲಕಿ ಸಹನಾ, ಎಬಿವಿಪಿ ಕಾರ್ಯಕರ್ತ ಹೇಮಂತ್, ಗೌತಮ್, ಪವಿತ್ರಾ, ಸೋನು, ಕೆ.ಪವಿತ್ರಾ ಮತ್ತಿತರರಿದ್ದರು.
ಆಕರ್ಷಕ ಬೃಹತ್ ತಿರಂಗ ಯಾತ್ರೆ: ಪೌರತ್ವ ಕಾಯ್ದೆ ಬೆಂಬಲಿಸಿ ಎಬಿವಿಪಿ ಆಯೋಜಿಸಿದ್ದ ಬಹಿರಂಗ ಸಭೆಗೂ ಮುನ್ನ ಬಸವಣ್ಣದೇವರಮಠದ ಆವರಣದಿಂದ ತಾಲೂಕು ಕಚೇರಿವರೆಗಿನ ಪಟ್ಟಣದ ಮುಖ್ಯರಸ್ತೆಯಲ್ಲಿ ಬೃಹತ್ ತಿರಂಗ ಯಾತ್ರೆ ಆಯೋಜಿಸಲಾಗಿತ್ತು. ವಿವಿಧ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳು ಸುಮಾರು 500 ಅಡಿ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ಪೌರತ್ವ ಕಾಯ್ದೆ ಪರವಾಗಿ ಘೋಷಣೆ ಕೂಗುತ್ತಾ ನಡೆದ ದೃಶ್ಯ ಅತ್ಯಂತ ಆಕರ್ಷಕವಾಗಿತ್ತು.
ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ, ಸರ್ಕಾರಿ, ಹೊಯ್ಸಳ, ಹರ್ಷಮಹೇಶ್, ಸರ್ಕಾರಿ, ಸೌಂದರ್ಯ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಸುಮಾರು 3000 ಸಾವಿರ ವಿದ್ಯಾರ್ಥಿಗಳು ತಿರಂಗ ಯಾತ್ರೆಯಲ್ಲಿ ಭಾಗಿಯಾಗಿದ್ದರು.