ಕುಕ್ಕುಟ ಉದ್ಯಮಕ್ಕೆ ನೆರವು ಅಗತ್ಯ

ಬೆಂಗಳೂರು: ಒಟ್ಟು ದೇಶಿಯ ಉತ್ಪನ್ನದಲ್ಲಿ (ಜಿಡಿಪಿ) ಕುಕ್ಕುಟ ಉದ್ಯಮ ಶೇ.1 ಕೊಡುಗೆ ನೀಡುತ್ತಿದೆ. ಸರ್ಕಾರ ಸೂಕ್ತ ಸಹಕಾರ ನೀಡಿದಲ್ಲಿ ಇದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಿದೆ ಎಂದು ಅಂತಾರಾಷ್ಟ್ರೀಯ ಮೊಟ್ಟೆ ಆಯೋಗದ ಉಪಾಧ್ಯಕ್ಷ ಸುರೇಶ್ ಚಿತ್ತೂರಿ ಹೇಳಿದ್ದಾರೆ.

ಇನ್​ಸ್ಟಿಟ್ಯೂಟ್ ಆಫ್ ವೆಟರ್ನರಿಸ್ ಆಫ್ ಪೌಲ್ಟ್ರಿ ಇಂಡಸ್ಟ್ರಿ (ಐವಿಪಿಐ) ಅಯೋಜಿಸಿದ್ದ ವಾರ್ಷಿಕ ವಿಜ್ಞಾನ ಮೇಳದಲ್ಲಿ ಮಾತನಾಡಿದರು.

ಒಬ್ಬ ವ್ಯಕ್ತಿ ವಾರದಲ್ಲಿ 3 ಮೊಟ್ಟೆ ತಿಂದರೆ ಉತ್ತಮ ಪೌಷ್ಟಿಕಾಂಶ ಲಭಿಸುತ್ತದೆ. ಈಗಾಗಲೇ ಇದು ಹಲವಾರು ಸಂಶೋಧನೆ ಗಳಿಂದ ಸಾಬೀತುಗೊಂಡಿದೆ. ಆಂಧ್ರಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ ನೀಡಲಾಗುತ್ತಿದೆ. ಇದೇ ರೀತಿ ಎಲ್ಲ ರಾಜ್ಯಗಳಲ್ಲೂ ಜಾರಿ ಮಾಡಿದರೆ ಮಕ್ಕಳ ಪೌಷ್ಟಿಕಾಂಶ ಕೊರತೆಯಿಂದ ಬಳಲುವುದು ತಪ್ಪಲಿದೆ. ಉದ್ಯಮ ವಹಿವಾಟು ಕೂಡ ಹೆಚ್ಚಲಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ ಎಂದರು.

ದೇಶದಲ್ಲಿ ವಾರ್ಷಿಕ ಸರಾಸರಿ 75 ಮೊಟ್ಟೆ ಮತ್ತು 4 ಕೆ.ಜಿ. ಕೋಳಿ ಮಾಂಸ ತಲಾ ಬಳಕೆ ಮಾಡಲಾಗುತ್ತಿದೆ. 2030ರ ವೇಳೆಗೆ ಇದು 125 ಮತ್ತು 7.8 ಕೆ.ಜಿ.ಗೆ ಏರಿಕೆಯಾಗುವ ಸಾಧ್ಯತೆ ಇದ್ದು, 1,300 ಕೋಟಿ ರೂ. ವಹಿವಾಟು ನಡೆಸಬಹುದಾಗಿದೆ. ವಿಶ್ವದಲ್ಲಿ ಮೊಟ್ಟೆಯ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನ ಮತ್ತು ಮಾಂಸದಲ್ಲಿ 4ನೇ ಸ್ಥಾನವನ್ನು ಪಡೆದಿದೆ. ಜನರಲ್ಲಿ ಪೌಷ್ಟಿಕಾಂಶದ ಅರಿವು ಮೂಡಿಸಿದಲ್ಲಿ ನಮ್ಮ ವಹಿವಾಟು ಮತ್ತಷ್ಟು ಹೆಚ್ಚಳವಾಗಲಿದೆ. ಪೌಲ್ಟ್ರಿ ಉದ್ಯಮದಲ್ಲಿ ನೇರವಾಗಿ 4 ಲಕ್ಷ ಜನರು ಮತ್ತು ಪರೋಕ್ಷವಾಗಿ 1.3 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿದೆ. ಕೇಂದ್ರ ಸರ್ಕಾರದ ನರೇಗಾ ನೀಡುತ್ತಿರುವ ಉದ್ಯೋಗಕ್ಕಿಂತ ನಮ್ಮ ಉದ್ಯಮ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ ಎಂದು ಸುರೇಶ್ ಚಿತ್ತೂರಿ ತಿಳಿಸಿದರು.

ಮೇಳದಲ್ಲಿ ನೂರಾರು ಪೌಲ್ಟ್ರಿ ಉದ್ಯಮಿಗಳು ಭಾಗವಹಿಸಿದ್ದರು. ಸಾಧಕ ಉದ್ಯಮಿಗಳನ್ನು ಸನ್ಮಾನಿಸಲಾಯಿತು. ನಾಮಕಲ್ ಕ್ಷೇತ್ರದ ಸಂಸದ ಎ.ಕೆ.ಪಿ. ಚಿನ್ನರಾಜ್, ಐವಿಪಿಐ ಅಧ್ಯಕ್ಷ ಪ್ರೊ.ಜಿ. ದೇವೇಗೌಡ, ಕಾರ್ಯದರ್ಶಿ ಡಾ. ಹರ್ಷಕುಮಾರ್ ಶೆಟ್ಟಿ, ಡಾ. ಪಿ.ಎಸ್. ಮಹೇಶ್ ಮತ್ತಿತರರಿದ್ದರು.

42 ಮೆಗಾ ಫುಡ್ ಪಾರ್ಕ್​ಗಳನ್ನು ತೆರೆಯಲು ಚಿಂತಿಸಲಾಗಿದೆ. ಈಗಾಗಲೇ 36 ಪಾರ್ಕ್​ಗಳಿಗೆ ಅನುಮತಿ ಸಿಕ್ಕಿದೆ. ಪ್ರತಿ ಪಾರ್ಕ್​ಗೆ 350 ಕೋಟಿ ರೂ. ವೆಚ್ಚವಾಗಲಿದ್ದು, ವಾರ್ಷಿಕ ವಾಹಿವಾಟು 400 ರಿಂದ 450 ಕೋಟಿ ರೂ. ತಲುಪುವ ಸಾಧ್ಯತೆ ಇದೆ. 30 ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಉದ್ಯಮಿಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಮೊಟ್ಟೆ ಮತ್ತು ಮಾಂಸವನ್ನು ಒದಗಿಸಿದಲ್ಲಿ ಹೆಚ್ಚಿನ ಗ್ರಾಹಕರನ್ನು ನಾವು ಸೆಳೆಯಬಹುದು.

| ಸುರೇಶ್ ಚಿತ್ತೂರಿ, ಅಂತಾರಾಷ್ಟ್ರೀಯ ಮೊಟ್ಟೆ ಆಯೋಗದ ಉಪಾಧ್ಯಕ್ಷ

Leave a Reply

Your email address will not be published. Required fields are marked *