ಬಿಬಿಎಂಪಿ ಅಣಕಿಸುತ್ತಿರುವ ರಸ್ತೆಗುಂಡಿಗಳು!

| ಗಿರೀಶ್ ಗರಗ ಬೆಂಗಳೂರು

ಬಿಬಿಎಂಪಿ ಅಧಿಕಾರಿಗಳು ಬೆಂಗಳೂರನ್ನು ರಸ್ತೆ ಗುಂಡಿಮುಕ್ತ ನಗರ ವನ್ನಾಗಿಸುತ್ತೇವೆ ಎನ್ನುತ್ತಾರೆ. ಆದರೆ, ದುರಸ್ತಿ ಮಾಡಿದ ರಸ್ತೆಗಳಲ್ಲಿ ಮತ್ತೆ ಉದ್ಭವಿಸಿರುವ ಗುಂಡಿಗಳು ಅವರ ಮಾತನ್ನು ಅಣಕಿಸುತ್ತಿವೆ.

ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ರಸ್ತೆಗುಂಡಿಗಳಿಗೆ ಪರಿಹಾರ ನೀಡುತ್ತೇವೆ ಎಂದು ಬಿಬಿಎಂಪಿ ತಿಳಿಸಿತ್ತು. ಪೈಥಾನ್ ಯಂತ್ರ ಸೇರಿ ಇನ್ನಿತರ ವಿಧಾನಗಳಿಂದ ರಸ್ತೆಗುಂಡಿಗಳಿಗೆ ಮುಕ್ತಿ ನೀಡುವುದಾಗಿಯೂ ಹೇಳಿತ್ತು. ಆದರೆ, ‘ವಿಜಯವಾಣಿ’ ನಡೆಸಿರುವ ರಿಯಾಲಿಟಿ ಚೆಕ್​ನಲ್ಲಿ ನಗರದ ರಸ್ತೆಗಳಲ್ಲಿ ಗುಂಡಿಗಳ ಸಾಮ್ರಾಜ್ಯ ಮುಂದುವರಿದಿರುವುದು ಗೋಚರವಾಗಿದೆ. ಪ್ರಮುಖ ರಸ್ತೆಗಳಲ್ಲೇ ಗುಂಡಿಗಳು ಹೆಚ್ಚಿದ್ದು, ವಾಹನ ಸವಾರರಿಗೆ ಸವಾಲೊಡ್ಡುತ್ತಿವೆ.

ದಾಖಲೆ ಬೇರೆ, ವಾಸ್ತವವೇ ಬೇರೆ: ಬಿಬಿಎಂಪಿ ದಾಖಲೆಗಳಲ್ಲಿರು ವುದಕ್ಕಿಂತ ಹೆಚ್ಚಿನ ರಸ್ತೆಗುಂಡಿಗಳು ನಗರದಲ್ಲಿವೆ. ಮೆಜೆಸ್ಟಿಕ್, ಚಾಮರಾಜಪೇಟೆ, ಕಬ್ಬನ್ ಉದ್ಯಾನ, ಶಿವಾನಂದ ವೃತ್ತ, ಈಜಿಪುರ, ದೊಮ್ಮಲೂರು, ಇಂದಿರಾನಗರ, ಸಿಎಂಎಸ್ ರಸ್ತೆ, ಬಸವನಗುಡಿ, ಓಕಳಿಪುರದಂತಹ ನಗರದ ಕೇಂದ್ರ ಭಾಗದಲ್ಲಿಯೇ ರಸ್ತೆಗುಂಡಿಗಳು ರಾರಾಜಿಸುತ್ತಿವೆ. ಮಲ್ಲೇಶ್ವರ, ಮತ್ತಿಕೆರೆ, ರಾಜಾಜಿನಗರ ಸೇರಿ ಇನ್ನಿತರ ಕಡೆಗಳಲ್ಲಿ ಗುಂಡಿಗಳಿಗೆ ಹಾಕಲಾಗಿದ್ದ ತೇಪೆ ಮಳೆಯಿಂದಾಗಿ ಕಿತ್ತುಬಂದಿದೆ. ಇದರ ಬಗ್ಗೆಯೂ ಪಾಲಿಕೆ ಅಧಿಕಾರಿಗಳು ಗಮನಹರಿಸಿಲ್ಲ.

850 ಕಿ.ಮೀ. ನಿರ್ವಹಣಾ ಅವಧಿ: ಬಿಬಿಎಂಪಿ ವ್ಯಾಪ್ತಿ ಯಲ್ಲಿನ ಮುಖ್ಯ ಮತ್ತು ಉಪ ಮುಖ್ಯರಸ್ತೆಗಳಲ್ಲಿ ಒಟ್ಟು 850 ಕಿ.ಮೀ. ಉದ್ದದ ರಸ್ತೆಗಳ ನಿರ್ವಹಣೆ ಮತ್ತು ಲೋಪ ಬಾಧ್ಯತಾ ಅವಧಿಯಿದೆ. ಅದರಂತೆ, ಆ ರಸ್ತೆಗಳ ದುರಸ್ತಿಯನ್ನು ಗುತ್ತಿಗೆದಾರರೇ ಮಾಡಬೇಕು. ಉಳಿದ 400 ಕಿ.ಮೀ. ರಸ್ತೆಗಳಲ್ಲಿನ ಗುಂಡಿಗಳನ್ನು ಪೈಥಾನ್ ಯಂತ್ರದ ಮೂಲಕ ಮುಚ್ಚಲಾಗುತ್ತಿದ್ದು, ಅದಕ್ಕೆ ವಾರ್ಡ್ ಮಟ್ಟದ ಅನುದಾನದಲ್ಲಿ ಹಣ ನೀಡಲಾಗಿದೆ.

1,242 ರಸ್ತೆಗುಂಡಿ

ಬಿಬಿಎಂಪಿ ದಾಖಲೆ ಪ್ರಕಾರ 2018ರ ಮೇ 31ರವರೆಗೆ 8,321 ರಸ್ತೆಗುಂಡಿಗಳನ್ನು ಗುರುತಿಸಲಾಗಿತ್ತು. ಅದಾದ ನಂತರ ಸುರಿದ ಮಳೆಗೆ 9,338 ಗುಂಡಿಗಳು ಪತ್ತೆಯಾಗಿ ದ್ದವು. ಅದರಂತೆ ಒಟ್ಟಾರೆ 17,659 ರಸ್ತೆಗುಂಡಿಗಳನ್ನು ಮುಚ್ಚುವ ಹೊಣೆ ಬಿಬಿಎಂಪಿ ಮೇಲಿತ್ತು. ಅದರಲ್ಲಿ ಬಿಬಿಎಂಪಿ ಅಧಿಕಾರಿಗಳು ಹೇಳುವಂತೆ ಈವರೆಗೆ 16,417 ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲಾಗಿದೆ. ಇನ್ನೂ 1,242 ಗುಂಡಿಗಳಿಗೆ ಪರಿಹಾರ ನೀಡಬೇಕಿದೆ.

ಕಳಪೆ ಕಾಮಗಾರಿ ವಿರುದ್ಧ ಕ್ರಮವಿಲ್ಲ

ಈ ಹಿಂದೆ ಕಳಪೆ ಕಾಮಗಾರಿ ಮಾಡಿದ ಮತ್ತು ನಿರ್ವಹಣಾ ಅವಧಿಯಿರುವ ರಸ್ತೆಗಳ ದುರಸ್ತಿಗೆ ಮುಂದಾಗದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಮೇಯರ್ ಸಂಪತ್​ರಾಜ್ ತಿಳಿಸಿದ್ದರು. ಆದರೆ, ಅದಕ್ಕೆ ಸಂಬಂಧಿಸಿದಂತೆ ಈವರೆಗೆ ಕ್ರಮ ಕೈಗೊಂಡಿಲ್ಲ. ಕೇವಲ ಎಚ್ಚರಿಕೆ ನೀಡುವುದರಲ್ಲೇ ಮೇಯರ್ ನಿರತ ರಾಗಿದ್ದಾರೆಯೇ ಹೊರತು ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಹೀಗಾಗಿ ಗುತ್ತಿಗೆದಾರರು, ಅಧಿಕಾರಿಗಳು ರಸ್ತೆ ದುರಸ್ತಿ ಮಾಡದೆ ನಿರಾಳರಾಗಿದ್ದಾರೆ.

ರಸ್ತೆಗುಂಡಿಮುಕ್ತ ನಗರದ ಆಶಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ. ಗುಂಡಿ ಕಾಣಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

| ಆರ್. ಸಂಪತ್​ರಾಜ್ ಮೇಯರ್