ಉತ್ತರ ಪ್ರದೇಶದಲ್ಲಿ ದುರ್ಗಾ ಮಾತೆಯಾಗಿ ಅವತರಿಸಿದ ಪ್ರಿಯಾಂಕಾ ಗಾಂಧಿ

ಲಖನೌ: ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಲಖನೌಗೆ ಭೇಟಿ ನೀಡಿದರು. ಈ ವೇಳೆ ಅವರ ಸ್ವಾಗತಕ್ಕಾಗಿ ಪ್ರದರ್ಶಿಸಲಾಗಿದ್ದ ಭಿತ್ತಿಚಿತ್ರಗಳಲ್ಲಿ ಪ್ರಿಯಾಂಕಾ ಅವರನ್ನು ದುರ್ಗಾ ದೇವತೆಯಾಗಿ ಬಿಂಬಿಸಿದ್ದು ಗಮನ ಸೆಳೆಯಿತು.

ಆಯುಧಗಳನ್ನು ಹಿಡಿದು ಹುಲಿಯ ಮೇಲೆ ಕುಳಿತಿರುವ ಪ್ರಿಯಾಂಕಾ ಚಿತ್ರದ ಕೆಳಗೆ ದುರ್ಗಾ ಮಾತೆಯಾಗಿ ಸಹೋದರಿ ಪ್ರಿಯಾಂಕಾ ಗಾಂಧಿ ಎಂದು ಹಿಂದಿ ಭಾಷೆಯಲ್ಲಿ ಬರೆಯಲಾಗಿತ್ತು. ಅಲ್ಲದೆ, ಪ್ರಿಯಾಂಕಾ ಅವರು ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಪಕ್ಷದ ಬಾವುಟ ಪ್ರದರ್ಶಿಸಿ ಕಾಂಗ್ರೆಸ್​ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.

ಉತ್ತರ ಪ್ರದೇಶದಲ್ಲಿರುವ ಪಕ್ಷದ ಕಚೇರಿಯನ್ನು ಕೂಡ ಬಾವುಟ ಹಾಗೂ ಹೂವಿನಿಂದ ಅಲಂಕರಿಸಲಾಗಿತ್ತು. ಅಲ್ಲದೆ, ಕಚೇರಿಗೆ ತೆರಳುವ ಮಾರ್ಗದಲ್ಲಿ ಪಕ್ಷದ ಕುರಿತಾದ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು.

ಪ್ರಿಯಾಂಕಾ ಅವರ ರೋಡ್​ ಶೋ ವೇಳೆ ಕಾಂಗ್ರೆಸ್​ ಅಧ್ಯಕ್ಷ ಹಾಗೂ ಸಹೋದರ ರಾಹುಲ್​ ಗಾಂಧಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಸಾಥ್​ ನೀಡಿದರು.

ರೋಡ್​ ಶೋ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ ಚೌಕಿದಾರ್​ ನರೇಂದ್ರ ಮೋದಿ ಅವರು ವಾಯುಪಡೆ ಹಾಗೂ ಉತ್ತರ ಪ್ರದೇಶ ಸೇರಿ ಇತರೆ ರಾಜ್ಯಗಳಿಂದ ಹಣವನ್ನು ಕಸಿದುಕೊಂಡಿದ್ದಾರೆ. ಚೌಕಿದಾರ್​ ಕಳ್ಳರಿದ್ದಾರೆ. ಉತ್ತರ ಪ್ರದೇಶ ದೇಶದ ಹೃದಯ ಭಾಗವಾಗಿದ್ದು, ಇಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಸ್ಥಾಪಿಸುವವರೆಗೂ ನಾವು ವಿರಮಿಸುವುದಿಲ್ಲ ಎಂದು ಹೇಳಿದರು.

ಉತ್ತರ ಪ್ರದೇಶಕ್ಕೆ ಆಗಮಿಸುವ ಒಂದು ದಿನದ ಮುಂಚೆ ನಾನು ನಾಳೆ ಲಖನೌಗೆ ಬರುತ್ತಿದ್ದೇನೆ. ನಾವೆಲ್ಲ ಸೇರಿ ಪ್ರಾರಂಭಿಸಬೇಕೆಂದುಕೊಂಡಿರುವ ಹೊಸ ರಾಜಕೀಯದಲ್ಲಿ ನೀವೂ ಭಾಗಿಯಾಗಿರುತ್ತೀರಿ ಎಂದು ಭಾವಿಸಿದ್ದೇನೆ. ಯುವಕರು, ಮಹಿಳೆಯರು ಹಾಗೂ ಹಿಂದುಳಿದವರು ಸೇರಿ ಎಲ್ಲರ ಧ್ವನಿಯನ್ನು ನಾನು ಕೇಳಿದ್ದೇನೆ. ರಾಜಕೀಯದಲ್ಲಿ ಹೊಸ ಭವಿಷ್ಯವನ್ನು ರೂಪಿಸೋಣ ಎಂದು ಹೇಳಿದ್ದರು. (ಏಜೆನ್ಸೀಸ್​)