ಗಾಯಾಳು ಶಿಖರ್​ ಧವನ್​ ಬದಲು ಕ್ರಿಕೆಟ್​ ವಿಶ್ವಕಪ್​ಗೆ ತೆರಳಲು ರಿಷಬ್​ ಪಂತ್​ಗೆ ಲಂಡನ್​ ಟಿಕೆಟ್​

ಮುಂಬೈ: ಕ್ರಿಕೆಟ್​ ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಐಪಿಎಲ್​ ಟೂನಿಯಲ್ಲಿ ದೆಹಲಿ ರಣಜಿ ಟ್ರೋಫಿ ತಂಡದ ಆಟಗಾರ ರಿಷಬ್​ ಪಂತ್​ಗೆ ಲಂಡನ್​ ಟಿಕೆಟ್​ ಲಭಿಸುವುದು ಬಹುತೇಕ ಖಚಿತವಾಗಿದೆ. ಇನ್ನು 48 ಗಂಟೆಗಳಲ್ಲಿ ಅವರು ಲಂಡನ್​ಗೆ ತೆರಳಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಭಾರತೀಯ ಕ್ರಿಕೆಟ್​ ಮಂಡಳಿಯ ಮೂಲಗಳು ತಿಳಿಸಿವೆ.

ಕ್ರಿಕೆಟ್​ ವಿಶ್ವಕಪ್​ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಶಿಖರ್​ ಧವನ್​ ಅವರ ಹೆಬ್ಬರಳಿಗೆ ಚೆಂಡು ಅಪ್ಪಳಿಸಿ, ಮೂಳೆ ಮುರಿತವಾಗಿದೆ ಎಂದು ವೈದ್ಯರು ಮಂಗಳವಾರ ದೃಢೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧವನ್​ಗೆ ಮೂರು ವಾರಗಳ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಆ ವೇಳೆಗೆ ಕ್ರಿಕೆಟ್​ ವಿಶ್ವಕಪ್​ ಮುಗಿದಿರುತ್ತದೆ. ಹಾಗಾಗಿ, ಇನ್ನುಳಿದ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಲು ರಿಷಬ್​ ಪಂತ್​ಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಕ್ರಿಕೆಟ್​ ವಿಶ್ವಕಪ್​ಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಿಸಿಸಿಐನ ಆಯ್ಕೆಗಾರರು ರಿಷಬ್​ ಪಂತ್​ ಅವರನ್ನು ನಿರ್ಲಕ್ಷಿಸಿದ್ದರು. ಅವರಿಗೆ ಬ್ರಿಟನ್​ ಪಿಚ್​ಗಳಲ್ಲಿ ಆಡಿದ ಹೆಚ್ಚಿನ ಅನುಭವ ಇಲ್ಲ ಎಂಬ ಕಾರಣವನ್ನು ನೀಡಿದ್ದರು. ಈಗ ಆಕ್ರಮಣಕಾರಿ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಟೂರ್ನಿಯಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಅವರಷ್ಟೇ ಆಕ್ರಮಣಕಾರಿ ಆಟವಾಡಲು ಶಕ್ತರಾದ ಪಂತ್​ ಅವರ ಆಯ್ಕೆ ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *