ಹೈಟೆಕ್ ಕಾಲದಲ್ಲಿ ಅಂಚೆ ಕ್ರಾಂತಿ

ಪ್ರವೀಣ ಬುದ್ನಿ ತೇರದಾಳ

ತಂತ್ರಜ್ಞಾನ ಯುಗದಲ್ಲೂ ಅಂಚೆ ಪತ್ರಗಳ ಮೂಲಕ ಸಂಬಂಧ ಗಟ್ಟಿಗೊಳಿಸುವ ಪ್ರಯತ್ನವನ್ನು ಶಿಕ್ಷಕರೊಬ್ಬರು 26 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ಸಮೀಪದ ಸಸಾಲಟ್ಟಿಯ ಹಿರೇಹಳ್ಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ಚಂದ್ರಶೇಖರ ಬಾಡಗಿ ವಿದ್ಯಾರ್ಥಿ ದೆಸೆಯಿಂದಲೇ ಹಬ್ಬಗಳ ಸಂದರ್ಭ ಸಂಬಂಧಿಕರು ಹಾಗೂ ಗೆಳೆಯರು ಸೇರಿ ರಾಜಕೀಯ ನೇತಾರರು, ಸಚಿವರಿಗೆ ಅಂಚೆ ಪತ್ರಗಳಲ್ಲೇ ಶುಭಾಶಯ ತಿಳಿಸುತ್ತ ಬಂದಿದ್ದಾರೆ.

ಏನಿದು ಅಂಚೆ ಬರಹ: ಹೈಟೆಕ್ ಕಾಲದಲ್ಲಿಯೂ ಹಳೆಯ ವ್ಯವಸ್ಥೆ ಜೀವಂತ ಇಡುವ ಸದುದ್ದೇಶದಿಂದ ಹೊಸವರ್ಷ ಮತ್ತು ಸಂಕ್ರಮಣದ ಶುಭಾಶಯಗಳನ್ನು ಅಂಚೆ ಪತ್ರದಲ್ಲೇ ಹಂಚಿಕೊಳ್ಳುತ್ತಾರೆ. 1998ರಲ್ಲಿ 15 ಪೈಸೆಯ 30-40 ಪತ್ರ ಬರೆಯಲು ಪ್ರಾರಂಭಿಸಿ, ಈಗ 26ನೇ ವರ್ಷಕ್ಕೆ 50 ಪೈಸೆಯ 1700 ಪತ್ರಗಳನ್ನು ಬರೆದು ಪತ್ರ ಹೀರೋ’ ಆಗಿದ್ದಾರೆ.

ಪತ್ರದಲ್ಲಿ ಏನಿರುತ್ತೆ: ಅಂಚೆ ಪತ್ರದಲ್ಲಿ ಎಡಗಡೆ ಮೂಲೆಯಲ್ಲಿ ಕುಶಲ ಎಂದು, ಗೆಳೆಯರು, ಸಂಬಂಧಿಕರು, ಸ್ವಾಮೀಜಿಗಳು, ಸಚಿವರಿಗೆ ಆತ್ಮಿಯರೆ ಎಂದು ಬರೆದು, ಹೊಸವರ್ಷದ ಮತ್ತು ಸಂಕ್ರಮಣದ ಶುಭಾಶಯಗಳು ಎಂದು ಬರೆಯುತ್ತಾರೆ. ಹಿಂಬದಿಯಲ್ಲಿ ಇವರ ವಿಳಾಸದ ಸೀಲು, ಸಹಿ ಇರುತ್ತೆ.

ಅಂಚೆ ನಿಯಮ

ಶಿಕ್ಷಕ ಬಸವರಾಜ ಅವರೇ ಹೇಳುವಂತೆ ಒಬ್ಬ ವ್ಯಕ್ತಿ ದಿನಕ್ಕೆ 165 ಪತ್ರ ಮಾತ್ರ ಕಳುಹಿಸಬೇಕು. ಹೆಚ್ಚಾದರೆ ಮಿಸಲೆನಿಯಸ್ ಹಣ ಸಂದಾಯ ಮಾಡಬೇಕಾ ಗುತ್ತದೆ. ಆದರೆ ಇವರೀಗ 1700ರಷ್ಟು ಪತ್ರ ಕಳುಹಿಸ ಬೇಕಾಗಿರುವುದರಿಂದ ಬೇರೆ ಬೇರೆ ಅಂಚೆ ಕಚೇರಿಗಳಿಂದ ಪತ್ರ ರವಾನಿಸುತ್ತಾರೆ.

ತಯಾರಿ ಹೇಗಿರುತ್ತೆ

ವಿಶೇಷವಾಗಿ ಹೊಸವರ್ಷ ಹಾಗೂ ಸಂಕ್ರಮಣಕ್ಕಾಗಿ ಶುಭಾ ಶಯ ಪತ್ರ ಬರೆಯಲಾಗುತ್ತಿದ್ದು, ಡಿ.1ರಿಂದಲೇ ಬಿಡುವಿನ ಸಂಜೆ ಸಮಯದಲ್ಲಿ ಪತ್ರ ಬರೆಯುತ್ತಾರೆ. ಕುಟುಂಬದ ಪತ್ನಿ, ಮಕ್ಕಳೂ ಜತೆಗೂಡುತ್ತಾರೆ. ಹೊಸವರ್ಷ ಮೂರ್ನಾಲ್ಕು ದಿನಗಳಿರುವಾಗಲೇ ಪತ್ರಗಳನ್ನು ಅಂಚೆ ಮೂಲಕ ರವಾನಿಸುತ್ತಾರೆ.

ಸಂಪರ್ಕದ ಏರಿಯಾ

ದೇಶದ ವಾಣಿಜ್ಯ ನಗರಿ ಮುಂಬೈ, ಪುಣೆ, ಗುಜರಾತ, ತಮಿಳ್ನಾಡು ಸೇರಿ ರಾಜ್ಯದ ಬೆಂಗಳೂರು, ಕೊಡಗು, ದಾವಣಗೆರೆ, ಹಾಸನ, ಅವಳಿ ಜಿಲ್ಲೆಯಲ್ಲಿರುವ ಸಂಬಂಧಿಕ, ಗೆಳೆಯರಿಗೆ ಪತ್ರ ಕಳುಹಿಸುತ್ತಾರೆ.

ದೊಡ್ಡಪ್ಪನೇ ಸ್ಪೂರ್ತಿ

ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ದೊಡ್ಡಪ್ಪ ಡಿ.ಬಿ. ಬಾಡಗಿ ಅವರು ಬರೆದ ಶುಭಾಶಯ ಪತ್ರಗಳನ್ನು ಅಂಚೆ ಕಚೇರಿಗೆ ಕೊಡುವ ಕೆಲಸ ಮಾಡುತ್ತಿದ್ದರು. ಅಂದಿನಿಂದ ಪತ್ರ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದು ಇಲ್ಲಿವರೆಗೆ ನಿರಂತರವಾಗಿ ನಡೆದಿದೆ.