ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

>

ಬಿ. ರಾಘವೇಂದ್ರ ಪೈ, ಗಂಗೊಳ್ಳಿ
ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಅಂಚೆ ಇಲಾಖೆ ಜನರಿಗೆ ಅನೇಕ ಅತ್ಯುತ್ತಮ ಸೌಲಭ್ಯ ನೀಡುತ್ತಿದ್ದರೂ, ಇಲಾಖೆಯಲ್ಲಿ ಕಾಡುತ್ತಿರುವ ಸಿಬ್ಬಂದಿ ಸಮಸ್ಯೆಯಿಂದ ಯೋಜನೆಗಳ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತಿಲ್ಲ.
ಸುಮಾರು 35 ಸಾವಿರ ಜನಸಂಖ್ಯೆಯುಳ್ಳ ಉಡುಪಿ ಜಿಲ್ಲೆಯ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಗ್ರಾಮದಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದೆ. ಗಂಗೊಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಅಂಚೆ ಕಚೇರಿಯನ್ನು ವಿಲೀನಗೊಳಿಸಿದ ಅಂಚೆ ಇಲಾಖೆ ಗಂಗೊಳ್ಳಿ ಹೃದಯ ಭಾಗದಲ್ಲಿ ಒಂದು ಅಂಚೆ ಕಚೇರಿಯನ್ನು ಆರಂಭಿಸಿತು. ಪೋಸ್ಟ್ ಮಾಸ್ಟರ್, ಕ್ಲರ್ಕ್, ಇಬ್ಬರು ಪೋಸ್ಟ್‌ಮ್ಯಾನ್ ಹಾಗೂ ಪ್ಯಾಕರ್ ಹುದ್ದೆ ಮಂಜೂರುಗೊಳಿಸಿ ಕಾರ‌್ಯಾರಂಭಿಸಿದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್, ಒಬ್ಬರು ಪೋಸ್ಟ್‌ಮ್ಯಾನ್ ಮತ್ತು ಪ್ಯಾಕರ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

1.5 ಕೋಟಿ ರೂ. ವಿದ್ಯುತ್, ದೂರವಾಣಿ ಬಿಲ್ ಸಂಗ್ರಹ
ಗಂಗೊಳ್ಳಿಯಲ್ಲಿ ಸುಮಾರು 13 ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳು, 13 ಶಾಲಾ ಕಾಲೇಜು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯ ಅಂಚೆ ಕಚೇರಿ ತಿಂಗಳಿಗೆ ಸುಮಾರು 1.5 ಕೋಟಿ ರೂ. ವಿದ್ಯುತ್ ಮತ್ತು ದೂರವಾಣಿ ಬಿಲ್ ಸಂಗ್ರಹಿಸುತ್ತಿದೆ. ಅಲ್ಲದೆ ನೋಂದಾಯಿತ ಅಂಚೆ ಮೂಲಕ ಸಾವಿರಾರು ರೂ. ಸಂಗ್ರಹವಾಗುತ್ತಿದೆ. ವಿಪರ್ಯಾಸವೆಂದರೆ ಜನಸಂಖ್ಯೆ ದಟ್ಟಣೆಯಿಂದ ಕೂಡಿರುವ ಗಂಗೊಳ್ಳಿಯಲ್ಲಿ ಜನರಿಗೆ ಸಮರ್ಪಕ ಸೇವೆ ನೀಡುವಲ್ಲಿ ಅಂಚೆ ಕಚೇರಿ ವಿಫಲವಾಗುತ್ತಿದೆ. ಬೆಳಗಿನ ಜಾವ ಪೋಸ್ಟ್ ಬಂದ ಬಳಿಕ ವಿದ್ಯುತ್, ದೂರವಾಣಿ ಬಿಲ್ ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಂಚೆ ಇಲಾಖೆಯ ಎಲ್ಲ ಸೇವೆಯನ್ನು ಸ್ಥಗಿತಗೊಳಿಸಿ ಅಂಚೆ ವಿತರಣೆ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ದೂರವಾಣಿ ಮತ್ತು ವಿದ್ಯುತ್ ಬಿಲ್ ಪಾವತಿಸಲು ಬಂದ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸಿಬ್ಬಂದಿ ಕೊರತೆಯಿಂದ ಪೋಸ್ಟ್ ಮಾಸ್ಟರ್ ಎಲ್ಲ ಕಾರ್ಯವನ್ನು ಒಬ್ಬರೇ ಮಾಡಬೇಕಾಗಿದೆ. ಗಂಗೊಳ್ಳಿಗೆ ಅಗತ್ಯ ಇರುವ ಒಂದು ಸಿಬ್ಬಂದಿಯನ್ನು ನೇಮಕ ಮಾಡಬೇಕೆನ್ನುವ ಸ್ಥಳೀಯರ ಬೇಡಿಕೆಗೆ ಇಲಾಖೆ ಸ್ಪಂದಿಸಿಲ್ಲ.
ಸುಮಾರು 35 ಸಾವಿರ ಜನಸಂಖ್ಯೆ ಹೊಂದಿರುವ ಗಂಗೊಳ್ಳಿಯಲ್ಲಿ ಸುಸಜ್ಜಿತ ಅಂಚೆ ಕಚೇರಿ ನಿರ್ಮಾಣವಾಗಬೇಕು. ಅಂಚೆ ಕಚೇರಿಯಲ್ಲಿ ಸಮರ್ಪಕ ಸಿಬ್ಬಂದಿ ನೇಮಕ ಮಾಡಿ ಜನರಿಗೆ ಉತ್ತಮ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಮಸ್ಯೆ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರೂ, ಅಂಚೆ ಕಚೇರಿಯಲ್ಲಿ ಸಿಬ್ಬಂದಿ ನಿಯೋಜನೆಗೆ ಇಲಾಖೆ ಮುಂದಾಗಿಲ್ಲ. ಜನರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಅಂಚೆ ಕಚೇರಿ ಮುಂದೆ ಧರಣಿ ನಡೆಸಲು ನಾಗರಿಕ ಹೋರಾಟ ಸಮಿತಿ ಮುಂದಾಗಿದೆ.

ಗಂಗೊಳ್ಳಿ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಸಿಬ್ಬಂದಿ ನೇಮಿಸಬೇಕೆಂದು ಆಗ್ರಹಿಸಿದ್ದರೂ ಇಲಾಖಾಧಿಕಾರಿಗಳು ಗಮನ ಹರಿಸಿಲ್ಲ. ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶದಲ್ಲಿರುವ ಏಕೈಕ ಅಂಚೆ ಕಚೇರಿ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಹೋರಾಟ ಮಾಡಲಾಗುವುದು.
ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ, ಗಂಗೊಳ್ಳಿ

ಗಂಗೊಳ್ಳಿ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಾರಣದಿಂದ ಸಮಸ್ಯೆಯಾಗಿದೆ. ಕೂಡಲೇ ಸಿಬ್ಬಂದಿ ನೇಮಕ ಮಾಡಿ ಜನರಿಗೆ ಸರಿಯಾದ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಅಂಚೆ ಕಚೇರಿ ನಿರ್ಮಾಣ ಮಾಡಬೇಕು.
ಎನ್.ನರೇಶ ಕಿಣಿ, ಉದ್ಯಮಿ, ಗಂಗೊಳ್ಳಿ