ಬಂತು ಪೋಸ್ಟ್​ಮಾರ್ಟಂ ವರದಿ

ಮಂಗಳೂರು/ಉಡುಪಿ: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದ್ದು, ಕೆಲ ವಿಷಯಗಳ ಕುರಿತ ಸ್ಪಷ್ಟತೆಗಾಗಿ ಅಂತಿಮ ವರದಿಗೆ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ಶ್ರೀಗಳ ಅನುಮಾನಾಸ್ಪದ ಸಾವು ದಿನೇದಿನೆ ತಿರುವು ಪಡೆಯುತ್ತಿರುವ ನಡುವೆ ಪೊಲೀಸರಿಗೆ ತನಿಖೆಯೂ ಸವಾಲಾಗುತ್ತಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಜುಲೈ 19ರಂದು ಬೆಳಗ್ಗೆ ಶ್ರೀಗಳು ಕೊನೆಯುಸಿರೆಳೆದ ಬಳಿಕ ಆಸ್ಪತ್ರೆ ವೈದ್ಯರು ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂದು ಶಂಕಿಸಿದ್ದರಿಂದ ಪ್ರಕರಣ ಗಂಭೀರವಾಗಿತ್ತು.

ಪೊಲೀಸ್ ಮೂಲಗಳ ಪ್ರಕಾರ, ಈ ವಾರದ ಆರಂಭದಲ್ಲೇ ಪೋಸ್ಟ್​ಮಾರ್ಟಂ ಪ್ರಾಥಮಿಕ ವರದಿ ಲಭಿಸಿದೆ. ಆದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಲಭಿಸದೆ, ಅದನ್ನು ತಾಳೆ ಮಾಡದೆ ಅಂತಿಮ ನಿರ್ಧಾರಕ್ಕೆ ಬರಲಾಗದು. ಹಾಗಾಗಿ ಎಫ್​ಎಸ್​ಎಲ್ ವರದಿ ಬಂದ ಬಳಿಕ ಪೋಸ್ಟ್ ಮಾರ್ಟಂ ವರದಿಯಲ್ಲಿ ನಮೂದಿಸಿರುವ ಅಂಶಗಳ ಬಗ್ಗೆ ಸ್ಪಷ್ಟತೆ ಲಭಿಸಲಿದೆ. ಎಫ್​ಎಸ್​ಎಲ್ ಮತ್ತು ಪೋಸ್ಟ್​ಮಾರ್ಟಂ ಅಂತಿಮ ವರದಿಗಾಗಿ ಇನ್ನೂ ಐದಾರು ದಿನ ಕಾಯಬೇಕಿದೆ. ಪ್ರಾಥಮಿಕ ವರದಿಯನ್ನು ಆಧರಿಸಿ ಏನೂ ಹೇಳುವಂತಿಲ್ಲ. ಅಂತಿಮ ವರದಿಯ ಅಧ್ಯಯನದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದ್ದು, ನಂತರ ತನಿಖೆ ಸ್ಪಷ್ಟವಾಗಿ ಚುರುಕು ಪಡೆಯಲಿದೆ ಎಂದು ಮೂಲಗಳು ಹೇಳಿವೆ.

ತಪ್ಪಿಸಿಕೊಳ್ಳಲೆಂದೇ ಕಾರಿನಲ್ಲಿ ಹೊರಟಿದ್ದ ರಮ್ಯಾ

ಶಿರೂರುಶ್ರೀ ಆಪ್ತೆ ಎನ್ನಲಾಗಿರುವ ರಮ್ಯಾ ಶೆಟ್ಟಿ ಪೊಲೀಸ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಆಪ್ತರೊಬ್ಬರ ಸಲಹೆಯಂತೆ ಕೆಲ ದಿನಗಳ ಮಟ್ಟಿಗೆ ಬೇರೆಡೆಗೆ ಹೋಗಲು ನಿರ್ಧರಿಸಿದ್ದರು. ಈ ಮಾಹಿತಿ ಪೊಲೀಸರಿಗೆ ಲಭಿಸಿ ದಾರಿ ಮಧ್ಯೆ ಸಿಕ್ಕಿಬಿದ್ದಿದ್ದರು. ಆಕೆಗೆ ನೆರವು ನೀಡಿದ ಹಾಗೂ ಕಾರು ಚಲಾಯಿಸುತ್ತಿದ್ದ ಇಕ್ಬಾಲ್ ಎಂಬಾತನನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಾಪು ಮೂಲದ ಇಕ್ಬಾಲ್ ದುಬೈಯಲ್ಲಿದ್ದು, ಆರು ತಿಂಗಳ ಹಿಂದೆ ಊರಿಗೆ ಬಂದು ಉದ್ಯಮ ಆರಂಭಿಸಿದ್ದ. ಮೂಲತಃ ಸುಳ್ಯದವರಾದ ರಮ್ಯಾ ಈ ಹಿಂದೆ ಮುಂಬೈಯಲ್ಲಿದ್ದು, ಪತಿಯ ನಿಧನದ ನಂತರ ಬ್ರಹ್ಮಾವರಕ್ಕೆ ಬಂದು ನೆಲೆಸಿದ್ದರು. ಸ್ವಾಮೀಜಿ ಸಾವಿನ ನಂತರ ರಮ್ಯಾ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದರೂ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರು. ಇದಕ್ಕಾಗಿ ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೊಬೈಲ್ ಸಿಗ್ನಲ್​ಗಳನ್ನೂ ಗಮನಿಸಲಾಗುತ್ತಿತ್ತು. ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕೆಲದಿನ ಹೊರಗೆ ಆಶ್ರಯ ಪಡೆಯುವಂತೆ ರಮ್ಯಾಳಿಗೆ ಆಪ್ತರು ಸಲಹೆ ನೀಡಿದ್ದು, ಉಡುಪಿ ವ್ಯಾಪ್ತಿಯಿಂದ ದೂರ ಹೋಗಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಇಕ್ಬಾಲ್​ನ ಮಾರುತಿ ಎರ್ಟಿಗಾ (ಕೆಎ 20 ಝುಡ್ 4546) ಕಾರಿನಲ್ಲಿ ಕಾಪುವಿನಿಂದ ಹೊಸ್ಮಾರು-ನಾರಾವಿ ಮಾರ್ಗವಾಗಿ ಸಾಗುತ್ತಿದ್ದಾಗ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನ ಸಮೀಪ ಟಯರ್ ಪಂಕ್ಚರ್ ಆಗಿದ್ದರಿಂದ ಪ್ರಯತ್ನ ವಿಫಲವಾಗಿತ್ತು. ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗುವ ಮೂವರು ಮುಸ್ಲಿಂ ಮಹಿಳೆಯರಿದ್ದು, ಅವರು ಬುರ್ಖಾ ಧರಿಸಿದ್ದರು. ಪರಿಚಯ ಮರೆ ಮಾಚಲು ರಮ್ಯಾ ಶೆಟ್ಟಿ ಕೂಡ ಬುರ್ಖಾ ಧರಿಸಿದ್ದರು. ಈಗ ಆ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಿದ್ದು, ಇಕ್ಬಾಲ್ ಮತ್ತು ರಮ್ಯಾ ಶೆಟ್ಟಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ.

ಆತ್ಮಕಥೆ ಬರೆಯಲು ಮುಂದಾಗಿದ್ದ ಲಕ್ಷ್ಮೀವರ ತೀರ್ಥರು

ಮಂಗಳೂರು: ಶಿರೂರುಶ್ರೀ ಆತ್ಮಕಥೆ ಬರೆಯಲು ಮುಂದಾಗಿದ್ದು, ಇದಕ್ಕಾಗಿ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ನಿಯೋಜಿಸಿದ್ದರು ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆ ವ್ಯಕ್ತಿ ಯಾರೆಂಬುದನ್ನು ಅವರಲ್ಲಿ ಕೇಳದೆ ಈ ಹಂತದಲ್ಲಿ ಹೇಳಲಾರೆ ಎಂದರು. ಉಡುಪಿ ಅಷ್ಟಮಠದ ಆಂತರಿಕ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ. ಶ್ರೀಗಳ ನಿಗೂಢ ಸಾವಿನ ಬಗ್ಗೆ ಮಾತ್ರ ಧ್ವನಿ ಎತ್ತಿದ್ದೇನೆ. ಅಷ್ಟಮಠ ಹಾಗೂ ಶಿರೂರು ಶ್ರೀಗಳ ವೈಯಕ್ತಿಕ ವಿಷಯ ನನಗೆ ಸಂಬಂಧಿಸಿದ್ದಲ್ಲ. ಶಿರೂರು ಸ್ವಾಮೀಜಿ ಸಾವಿಗೆ ಮುನ್ನ ಅವರ ದೇಹದಲ್ಲಿ ವಿಷ ಸೇರಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀಗಳ ಆಹಾರವೇ ವಿಷವಾಗಿತ್ತೇ ಅಥವಾ ಆಹಾರಕ್ಕೆ ವಿಷ ಬೆರೆಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರತಿಭಟನೆ, ಹೋರಾಟ ನಡೆಸುವುದಿಲ್ಲ ಎಂದರು.

ಶ್ರೀಗಳಿಗೆ ಬೆದರಿಕೆ

ಶಿರೂರುಶ್ರೀ ನಿಗೂಢ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸಿದ ಕಾರಣ ತಮಗೆ ಕೆಲ ದಿನಗಳಿಂದ ವಾಟ್ಸ್​ಆಪ್, ಫೇಸ್​ಬುಕ್ ಮೂಲಕ ಬೆದರಿಕೆಗಳು ಬರುತ್ತಿವೆ. ಈ ಕುರಿತು ದೂರು ನೀಡುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ಕೇಮಾರುಶ್ರೀ ಹೇಳಿದರು.