ರಾಷ್ಟ್ರಭಕ್ತಿ ಜಾಗೃತಗೊಂಡರೆ ಸಕಾರಾತ್ಮಕ ಬದಲಾವಣೆ

ರಾಣೆಬೆನ್ನೂರ: ಯುವ ಜನತೆಯಲ್ಲಿ ರಾಷ್ಟ್ರಭಕ್ತಿ ಜಾಗೃತಗೊಳಿಸಿದರೆ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಪಿಬಿ ರಸ್ತೆಯ ಲಲಿತ ಭವನದಲ್ಲಿ ಶುಕ್ರವಾರ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಏರ್ಪಡಿದ್ದ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್​ನ ಐದನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ತತ್ತಾ್ವದರ್ಶಗಳು ಪ್ರಸ್ತುತ ರಾಷ್ಟ್ರಕ್ಕೆ ಅವಶ್ಯಕವಾಗಿವೆ. ಶಾಂತಿ, ಸಹನೆ, ಪ್ರೀತಿ, ಸಹಿಷ್ಣುತೆಯೇ ವಿವೇಕಾನಂದರ ಪ್ರಮುಖ ಬೋಧನೆ. ಪ್ರಸ್ತುತ ಜಾತಿ-ಧರ್ಮ ವಿಚಾರಗಳ ಕಲಹಗಳಿಗೆ ಅಂತ್ಯ ಹಾಡಲು ಸಹನೆ ಮತ್ತು ಸಹಿಷ್ಣುತೆಯನ್ನು ಪ್ರತಿಷ್ಠಾಪಿಸುವ ಅಗತ್ಯವಿದೆ. ಶ್ರೀ ರಾಮಕೃಷ್ಣ ಪರಮಹಂಸರು, ಶ್ರೀ ಶಾರದಾ ಮಾತೆ ಹಾಗೂ ವಿವೇಕಾನಂದರ ಚಿಂತನೆಗಳನ್ನು ಯುವಜನತೆ ಮೈಗೂಡಿಸಿಕೊಳ್ಳುವ ಜತೆಗೆ ರಾಷ್ಟ್ರಾಭಿಮಾನ ಮತ್ತು ಶಾರೀಕರ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಕೋಲ್ಕತ್ತಾ ರಾಮಕೃಷ್ಣ ಮಠ ಮತ್ತು ಮಿಷನ್, ಬೇಲೂರು ಮಠದ ಉಪಾಧ್ಯಕ್ಷ ಶ್ರೀ ಸ್ವಾಮಿ ಗೌತಮಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಿ ಮಾತನಾಡಿ, ಸನಾತನ ಧರ್ಮದ ಬಗೆಗೆ ರಾಮಕೃಷ್ಣರು ಸರಳ ರೀತಿಯಲ್ಲಿ ಬೋಧಿಸಿದ್ದಾರೆ ಜತೆಗೆ ಎಲ್ಲ ಧರ್ಮಗಳ ಮೂಲತತ್ತ್ವಗಳನ್ನು ತಿಳಿಸಿರುವುದರಿಂದ ಸರ್ವ ಧರ್ವಿುಯರೂ ರಾಮಕೃಷ್ಣರನ್ನು ಆರಾಧಿಸುತ್ತಾರೆ. ಈ ನಿಟ್ಟಿನಲ್ಲಿ ಅವರ ಸಂದೇಶಗಳನ್ನು ನಾಡಿನ ಎಲ್ಲಡೆ ಪ್ರಚುರ ಪಡಿಸಲು ಶ್ರೀ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ಕಾರ್ಯನಿರ್ವಹಿಸುತ್ತಿದೆ ಎಂದರು.

ವಿವೇಕಾನಂದರ ವಿಶ್ವಧರ್ಮದ ಕಲ್ಪನೆ, ವಿಜ್ಞಾನ ಮತ್ತು ಅಧ್ಯಾತ್ಮದ ಸಮನ್ವಯ, ವಿಶ್ವವೇದಿಕೆ-ವಿಜಯಪತಾಕೆ, ಅನುಭಾವಿಯಾಗಿ ವಿವೇಕಾನಂದರು, ತ್ಯಾಗ ಮತ್ತು ಸೇವೆ ಭಾರತದ ಚಿರಂತನ ಆದರ್ಶಗಳು, ಪ್ರಾಚ್ಯ-ಪೌರ್ವಾತ್ಯ ಸಮನ್ವಯ, ರಾಷ್ಟ್ರ ಪಥದರ್ಶಕವಾಗಿ ವಿವೇಕಾನಂದ ಸೇರಿ ವಿವಿಧ ವಿಷಯಗಳ ಕುರಿತು ಗೋಷ್ಠಿ ನಡೆಯಿತು.

ಪರಿಷತ್ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್, ಕೋಲ್ಕತ್ತಾ ರಾಮಕೃಷ್ಣ ಮಠದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಗದಗ-ವಿಜಯಪುರದ ಶ್ರೀ ಸ್ವಾಮಿ ನಿರ್ಭಯಾನಂದಜೀ ಸೇರಿ ದೇಶದ ವಿವಿಧೆಡೆಯಿಂದ ನೂರಕ್ಕೂ ಅಧಿಕ ಸ್ವಾಮೀಜಿ ಹಾಗೂ ಮಾತಾಜಿ ಆಗಮಿಸಿದ್ದರು.

ಶ್ರೀ ಸ್ವಾಮಿ ರಘುವೀರಾನಂದಜೀ, ಶ್ರೀ ಸ್ವಾಮಿ ಸುಮೇಧಾನಂದಜೀ, ಶ್ರೀ ಸ್ವಾಮಿ ಸದಾನಂದಜೀ ಭಜನೆ ನೆರವೇರಿಸಿದರು. ಶ್ರೀ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಸ್ವಾಗತಿಸಿದರು. ಎಚ್.ವಿ. ಶಂಕರ ವಂದಿಸಿದರು. ಪ್ರೊ. ಬಿ.ಬಿ. ನಂದ್ಯಾಳ, ನಿರ್ಮಲಾ ಮಾನೆ, ಡಾ. ಚಂದ್ರಶೇಖರ ಕೇಲಗಾರ, ಚಂದ್ರಕಲಾ ನಿರೂಪಿಸಿದರು. ಹುಬ್ಬಳ್ಳಿ ಶರ್ವರಿ ನೃತ್ಯ ಪ್ರದರ್ಶಿಸಿದರು. ಬಳ್ಳಾರಿ ಜಿಲ್ಲೆಯ ಎಮ್ಮಿಗನೂರಿನ ಬಾಲ ಕಲಾವಿದ ಜ್ಞಾನೇಶ್ವರ ಗೀತ ಗಾಯನ ನಡೆಸಿಕೊಟ್ಟರು.

ನಾನೂ ಸಚಿವ ಸ್ಥಾನದ ಆಕಾಂಕ್ಷಿ

ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಸಚಿವ ಸಂಪುಟ ವಿಸ್ತರಣೆ ವೇಳೆ ಅರ್ಹರನ್ನು ಆಯ್ಕೆ ಮಾಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ವನಕ್ಕೆ ಬದ್ಧನಾಗಿದ್ದೇನೆ ಎಂದರು. ಮೇಕೆದಾಟು ಯೋಜನೆಯ ತಕರಾರು ಮಾಡುವವರಿಗೆ ನೈತಿಕ ಹಕ್ಕಿಲ್ಲ. ರಾಜಕೀಯ ಕಾರಣಕ್ಕಾಗಿ ಯೋಜನೆಗಳಿಗೆ ಅಡ್ಡಗಾಲು ಹಾಕುವುದು ಸಲ್ಲದು. ಇದಕ್ಕೆ ಯಾವುದೇ ಅರ್ಥವಿಲ್ಲ ಎಂದರು.