ಬೆಂಗಳೂರು ನಗರದ ಮೇಲೆ ಪಾಕ್​ ಉಗ್ರರ ದಾಳಿ ಭೀತಿ: ನಗರದಾದ್ಯಂತ ಹೈಅಲರ್ಟ್​ ಘೋಷಣೆ

ಬೆಂಗಳೂರು: ರಾಷ್ಟ್ರದ ಸಿಲಿಕಾನ್​ ಸಿಟಿ ಎಂದೇ ಪ್ರಖ್ಯಾತವಾದ ಬೆಂಗಳೂರು ನಗರದ ಮೇಲೆ ಪಾಕಿಸ್ತಾನದ ಉಗ್ರರ ಕಾಕದೃಷ್ಟಿ ಬಿದ್ದಿದೆ. ಉದ್ಯಾನ ನಗರಿಯ ಮೇಲೆ  ನಡೆಸಲು ಅದು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಹೈ ಅಲರ್ಟ್​ ಘೋಷಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಕ್ಯಾತೆ ತೆಗೆಯುತ್ತಲೇ ಇದೆ. ವಿಶ್ವಸಂಸ್ಥೆಯಲ್ಲಿ ಕೂಡ ಈ ವಿಷಯ ಪ್ರಸ್ತಾಪಿಸಲು ಅದು ಮಾಡಿ ಪ್ರಯತ್ನ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಅದು ಭಾರತದೊಂದಿಗೆ ಯುದ್ಧ ಉನ್ಮಾದತೆ ತೋರಲಾರಂಭಿಸಿದೆ.

ಒಂದೆಡೆ ಪಾಕ್​ ಅನ್ನು ಸುರಕ್ಷಿತ ಅಡಗುದಾಣವನ್ನಾಗಿಸಿಕೊಂಡಿರುವ ಉಗ್ರರು ಈ ವರ್ಷದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಮಾಡಿದ್ದ ಆತ್ಮಾಹುತಿ ದಾಳಿ ರೀತಿಯ ದಾಳಿಗಳನ್ನು ಹೆಚ್ಚಿಸುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪಾಕ್​ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ದಾಳಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯುದ್ಧವೇನಾದರೂ ಆದರೆ ಅದಕ್ಕೆ ಜಾಗತಿಕ ಸಮುದಾಯ ಕಾರಣವಾಗುತ್ತದೆ ಎಂದು ಪಾಕ್​ ಆಕ್ರಮಿತ ಕಾಶ್ಮೀರದ ಸಂಸತ್​ನಲ್ಲಿ ತಾವು ಮಾಡಿದ್ದ ಭಾಷಣದಲ್ಲಿ ಇಮ್ರಾನ್​ ಖಾನ್​ ಎಚ್ಚರಿಸಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಬೆಂಗಳೂರು ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಪಡೆಗಳಿಂದ ಮಾಹಿತಿ ಲಭ್ಯವಾಗಿದೆ.

ನಗರದಾದ್ಯಂತ ಕಟ್ಟೆಚ್ಚರ
ಬೆಂಗಳೂರು ನಗರ ಪೊಲೀಸ್​ ಆಯುಕ್ತರು ದಿಢೀರನೆ ಬೆಂಗಳೂರು ನಗರದಾದ್ಯಂತ ಕಟ್ಟೆಚ್ಚರ ಘೋಷಿಸಿದ್ದಾರೆ. ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​,ಬೆಂಗಳೂರು ಮಾತ್ರವಲ್ಲ, ರಾಷ್ಟ್ರದ ಹಲವು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

ನಗರದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್​ ಪಡೆಯ ತುಕುಡಿಗಳನ್ನು ಭದ್ರತಾ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *