ಭಾರತ 146 ಕೋಟಿ ಜನಸಂಖ್ಯೆಯ ಮೂಲಕ ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊಮ್ಮಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 2023ರಲ್ಲಿ ಚೀನಾವನ್ನು ಹಿಂದಿಕ್ಕಿ 143 ಕೋಟಿ ಜನಸಂಖ್ಯೆಯೊಂದಿಗೆ ಭಾರತವು ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿ ಮಾರ್ಪಟ್ಟಿತು. ಮುಂದಿನ ಕೆಲ ದಶಕಗಳಲ್ಲೇ ಜನಸಂಖ್ಯೆ 170 ಕೋಟಿಗೆ ತಲುಪಲಿದೆ. ಆದರೆ, 40 ವರ್ಷಗಳ ತರುವಾಯ ಜನಸಂಖ್ಯೆಯಲ್ಲಿ ಇಳಿಕೆಯ ಕ್ರಮ ಆರಂಭವಾಗಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ದುಡಿಯುವ ವರ್ಗ ಜಾಸ್ತಿ ಇರುವುದರಿಂದ ಆರ್ಥಿಕ ಅಭಿವೃದ್ಧಿ ಸಾಧಿಸಲು ಹೇರಳ ಅವಕಾಶಗಳಿರುವುದು ಸಕಾರಾತ್ಮಕ ಸಂಗತಿ. ದೇಶದ ಶೇಕಡ 68 ಜನಸಂಖ್ಯೆ ದುಡಿಯುವ ವರ್ಗಕ್ಕೆ (15ರಿಂದ 64 ವರ್ಷದವರು) ಸೇರಿದೆ. 14 ವರ್ಷದವರೆಗಿನ ಮಕ್ಕಳ ಸಂಖ್ಯೆ ಶೇಕಡ 24, ಹತ್ತರಿಂದ 19 ವಯೋಮಾನದವರ ಸಂಖ್ಯೆ ಶೇ.17 ಮತ್ತು 10-24 ವಯೋಮಾನದವರ ಸಂಖ್ಯೆ ಶೇ.26ರಷ್ಟಿದೆ. 65 ವರ್ಷಕ್ಕೂ ಮೇಲ್ಪಟ್ಟವರ ಪ್ರಮಾಣ ಶೇ.7ರಷ್ಟಿದೆ. ಆದರೆ, ಜನನ ಪ್ರಮಾಣ ಮತ್ತು ಫಲವಂತಿಕೆ ದರ ಕುಸಿಯುತ್ತಿರುವುದು ಭವಿಷ್ಯದ ದೃಷ್ಟಿಯಲ್ಲಿ ಶೋಚನೀಯ. 1970ರಲ್ಲಿ ಭಾರತದಲ್ಲಿ ಪ್ರತಿ ಮಹಿಳೆ ಸರಾಸರಿ 5 ಮಕ್ಕಳಿಗೆ ಜನ್ಮ ನೀಡುತ್ತಿದ್ದಳು, ಆ ಪ್ರಮಾಣ ಈಗ 2ಕ್ಕೆ ತಗ್ಗಿದೆ ಎಂಬುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.
ಭಾರತ ಈಗ ಯುವರಾಷ್ಟ್ರವಾಗಿದ್ದರೂ, ಇದೇ ಜನನ ದರ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿ, ವೃದ್ಧರ ಸಂಖ್ಯೆ ಹೆಚ್ಚಲಿದೆ. ಉದ್ಯೋಗದಲ್ಲಿ ಅಸುರಕ್ಷತೆ, ದುಬಾರಿ ಮನೆಗಳು, ಶಿಕ್ಷಣ ಶುಲ್ಕದ ಭಾರಿ ಹೆಚ್ಚಳದ ಕಾರಣ ದಂಪತಿ ಮಕ್ಕಳನ್ನು ಹೊಂದಲು ನಿರಾಕರಿಸುತ್ತಿರುವುದು ದೇಶದ ಸಾಮಾಜಿಕ, ಆರ್ಥಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಿಂದ ಗಾಬರಿಗೊಂಡು ಶೇ.38 ಹಾಗೂ ನಿರುದ್ಯೋಗದ ಕಾರಣದಿಂದ ಶೇ.21ರಷ್ಟು ದಂಪತಿ ಮಕ್ಕಳನ್ನು ಹೊಂದುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿ ವಿವರಿಸಿದೆ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಜನನ ಪ್ರಮಾಣ ದರ ಕುಸಿದಿದೆ. ಬಿಹಾರ, ಜಾರ್ಖಂಡ, ಉತ್ತರಪ್ರದೇಶಗಳಂಥ ರಾಜ್ಯಗಳಲ್ಲಿ ಜನನ ಪ್ರಮಾಣ ದರ ಉಚ್ಚವಾಗಿದ್ದರೆ, ದೆಹಲಿ, ಕೇರಳ, ತಮಿಳುನಾಡಿನಲ್ಲಿ ಕಡಿಮೆ ಇದೆ.
ಜನಸಂಖ್ಯೆ ಸೃಷ್ಟಿಸುವ ವಿಷಮ ಪರಿಸ್ಥಿತಿಗಳನ್ನೂ ಅವಲೋಕಿಸಿ, ಪರಿಹಾರ ಕಂಡುಕೊಳ್ಳಲು ಇದು ಸಕಾಲ. ಅಂದರೆ, ನಮ್ಮ ಸರ್ಕಾರಗಳ ಯೋಜನೆಗಳ ರೀತಿ, ಸಾಮಾಜಿಕ ಭದ್ರತಾ ಸೌಲಭ್ಯಗಳು ಸೇರಿದಂತೆ ಹಲವು ಸಂಗತಿಗಳಲ್ಲಿ ಬದಲಾವಣೆ ಆಗಬೇಕಿದೆ. ರಾಜಕೀಯ ಪಕ್ಷಗಳು ಸಾಮಾಜಿಕ ಸ್ಥಿತಿಯನ್ನು ಅವಲೋಕಿಸದೆ ಕೇವಲ ಮತಗಳನ್ನು ಸೆಳೆಯಲು ‘ಉಚಿತ’ ಯೋಜನೆಗಳನ್ನು ಘೋಷಿಸುತ್ತಿವೆ. ಆದರೆ, ಇಂದಿಗೂ, ದೇಶದಲ್ಲಿ ಒಂದೇ ಬಗೆಯ ಆರೋಗ್ಯ ಸೇವೆ, ವಿಮಾ ಸೇವೆ ಜನರಿಗೆ ಲಭ್ಯವಾಗುತ್ತಿಲ್ಲ ಮತ್ತು ಶಿಕ್ಷಣ ಕೂಡ ಉಳ್ಳವರಿಗೆ ಎಂಬಂತಾಗಿದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಬೆಲೆಯೇರಿಕೆಗೆ ಬೇಸತ್ತು ದಂಪತಿ ಮಕ್ಕಳು ಪಡೆಯದ ಕಠಿಣ ನಿರ್ಧಾರ ಮಾಡುತ್ತಿದ್ದಾರೆ ಎಂದರೆ, ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಹಾಗೂ ಸುಧಾರಣೆ ಆಗಬೇಕಿದೆ ಎಂಬುದು ನಿರ್ವಿವಾದ. ನೀತಿ ನಿರೂಪಕರು ಇದನ್ನು ಗಂಭೀರವಾಗಿ ಪರಿಗಣಿಸಿ, ಭವಿಷ್ಯದ ಹಿತದೃಷ್ಟಿಯಿಂದ ಪರಿಹಾರದ ದಾರಿ ಹುಡುಕಬೇಕು.
ಈ 3 ರಾಶಿಯವರು ಜೀವನದುದ್ದಕ್ಕೂ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs