ಕಳಚಿತು ಅಗರಿ ಶೈಲಿ ಭಾಗವತಿಕೆಯ ಕೊನೇ ಕೊಂಡಿ

ಮಂಗಳೂರು: ಪರಂಪರೆ ಹಾಗೂ ಸಂಗೀತ ಶೈಲಿ ಅರಿತಿದ್ದ ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಅಗರಿ ರಘುರಾಮ ಭಾಗವತರು(84) ಅಲ್ಪಕಾಲದ ಅಸೌಖ್ಯದಿಂದ ಜ.27ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು ಅಗರಿ ಶೈಲಿ ಭಾಗತಿಕೆ ಪರಂಪರೆಯಲ್ಲಿ ಕೊನೆಯ ಕೊಂಡಿ ಕಳಚಿದಂತಾಗಿದೆ.
ತಂದೆ ತೆಂಕುತಿಟ್ಟಿನಲ್ಲಿ ಪ್ರಾತಃಸ್ಮರಣೀಯ ಭಾಗವತ, ದಕ್ಷ ನಿರ್ದೇಶಕ ದಿ.ಅಗರಿ ಶ್ರೀನಿವಾಸ ಭಾಗವತರಿಂದ ರಘುರಾಮರಿಗೂ ಬಾಲ್ಯದಲ್ಲೇ ಯಕ್ಷಗಾನ ಆಸಕ್ತಿ ಬೆಳೆದಿತ್ತು. ತಂದೆಯವರನ್ನೇ ಗುರುವಾಗಿ ಸ್ವೀಕರಿಸಿ ಭಾಗವತಿಕೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ವಿದ್ಯಾಭ್ಯಾಸ ಬಳಿಕ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರೂ, ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದರು.

ಸರ್ಕಾರಿ ಕೆಲಸ ತೊರೆದು ಯಕ್ಷಗಾನಕ್ಕೆ: ಶಿಕ್ಷಣ ಇಲಾಖೆಯಲ್ಲಿ ಒಂಬತ್ತು ವರ್ಷ ಕೆಲಸ ಮಾಡಿದ್ದ ರಘುರಾಮರು ರಾಜೀನಾಮೆ ನೀಡಿ, 1966ರಿಂದ ಸುರತ್ಕಲ್ ಮೇಳಕ್ಕೆ ಪ್ರಧಾನ ಭಾಗವತರಾದರು. ಈ ಮೂಲಕ ತೆಂಕುತಿಟ್ಟಿಗೆ ಒಬ್ಬ ಪ್ರತಿಭಾವಂತ, ದಕ್ಷ ಭಾಗವತರ ಪ್ರವೇಶ, ಮುಂದೆ ಯಕ್ಷರಂಗಕ್ಕೆ ದೊಡ್ಡ ಲಾಭ ತಂದು ಕೊಟ್ಟಿತು. ಸುಮಾರು ಮೂರೂವರೆ ದಶಕ ಸುರತ್ಕಲ್ ಮೇಳದಲ್ಲಿ ಭಾಗವತರಾಗಿ ಪ್ರಸಿದ್ಧರಾಗಿ, ಸಹಸ್ರಾರು ಅಭಿಮಾನಿಗಳನ್ನು ಸಂಪಾದಿಸಿದ್ದರು.

ದೊಡ್ಡ ಸಾಮಗರು, ಶೇಣಿ, ರಾಮದಾಸ ಸಾಮಗ, ಕುಂಬ್ಳೆ, ಕೊಳ್ಯೂರು, ಗೋವಿಂದ ಭಟ್ಟ, ಜಲವಳ್ಳಿ, ವಾಸುದೇವ ಸಾಮಗ, ಶಿವರಾಮ ಜೋಗಿ, ಪೂಕಳ, ಕುಡ್ತಡ್ಕ, ಪಾತಾಳ, ವಿಟ್ಲ ಜೋಷಿ, ಎಂ.ಕೆ.ರಮೇಶಾಚಾರ್ಯ, ವೇಣೂರು ಸುಂದರಾಚಾರ್ಯ, ಕೊಕ್ಕಡ ಈಶ್ವರ ಭಟ್ ಅವರಂಥ ಯಕ್ಷ ದಿಗ್ಗಜರನ್ನು ರಂಗದಲ್ಲಿ ಕುಣಿಸಿದವರು.

ಹುಡುಕಿಬಂದ ಪ್ರಶಸ್ತಿ: ವಿದ್ವತ್ತನ್ನು ಗುರುತಿಸಿ ನೂರಾರು ಕಡೆ ಅಗರಿ ಅವರಿಗೆ ಸನ್ಮಾನ ಸಂದಿವೆ. ವಿಟ್ಲ ಜೋಷಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಉಳ್ಳಾಲ ಶ್ರೀನಿವಾಸ ಮಲ್ಯ ಪ್ರಶಸ್ತಿ, ತ್ರಿಕಣ್ಣೇಶ್ವರ ಪ್ರಶಸ್ತಿ, ಪದ್ಯಾಣ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಜಗದಂಬಾ ಯಕ್ಷಗಾನ ಪ್ರಶಸ್ತಿ ಮುಂಬೈ, ಕರಾವಳಿ ಯಕ್ಷಗಾನ ಪ್ರಶಸ್ತಿ, ಯಕ್ಷಲಹರಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ.

ರಾತ್ರಿಯಿಡೀ ಭಾಗವತಿಕೆ: ತುಳುನಾಡ ಸಿರಿ, ಶನೀಶ್ವರ ಮಹಾತ್ಮೆ, ಪಾಪಣ್ಣ ವಿಜಯ, ಸಾಧ್ವಿ ಸದಾರಮೆ, ತಿರುಪತಿ ಕ್ಷೇತ್ರ ಮಹಾತ್ಮೆ, ಬೇಡರ ಕಣ್ಣಪ್ಪ, ಚಂದ್ರಾವಳಿ ವಿಲಾಸ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಕೋಟಿ ಚೆನ್ನಯ, ಕೋರ್ದಬ್ಬು ಬಾರಗ, ಕಡುಗಲಿ ಕುಮಾರ ರಾಮ, ನಾಟ್ಯರಾಣಿ ಶಾಂತಲಾ, ಶೀಂತ್ರಿದ ಚೆನ್ನಕ್ಕೆ, ಬಲ್ಮೆದ ಭಟ್ರ್, ಸರ್ಪ ಸಂಕಲೆ, ರಾಜಾ ಯಯಾತಿ ಮುಂತಾದ ಪ್ರಸಂಗಗಳು ಸುರತ್ಕಲ್ ಮೇಳದಲ್ಲಿ ಜಯಭೇರಿ ಬಾರಿಸುವಲ್ಲಿ ಅಗರಿಯವರ ಕೊಡುಗೆ ಅಪಾರ. ಸುರತ್ಕಲ್ ಮೇಳದಲ್ಲಿ ಪ್ರಾರಂಭದ ಕಾಲದಲ್ಲಿ ರಾತ್ರಿಯಿಡೀ ರಘುರಾಮ ಭಾಗವತರು ಒಬ್ಬರೇ ಭಾಗವತಿಕೆ ಮಾಡುತ್ತಿದ್ದರು. ಮುಂದಕ್ಕೆ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿ ರಘುರಾಮ ಭಾಗವತರಿಗೆ ಸಹಕಾರಿಯಾಗಿದ್ದರು.

ಛಂದಸ್ಸು, ರಾಗ, ತಾಳದ ಆಳ ಜ್ಞಾನ: ಅಗರಿ ಶೈಲಿಯ ಭಾಗವತಿಕೆ ಕೇಳಲೆಂದೇ ದೂರದ ಊರುಗಳಿಂದ ಪ್ರೇಕ್ಷಕರು ಬರುತ್ತಿದ್ದರು. ರಘುರಾಮರು ಶೃಂಗಾರ, ಕರುಣ, ಶಾಂತ, ಹಾಸ್ಯರಸಗಳಲ್ಲಿ ಹಾಡುವಾಗ ಒಂದು ಅಲೌಕಿಕ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸುರುಟಿ, ಮಧ್ಯಮಾವತಿ, ಶಂಕರಾಭರಣ, ಪೀಲು , ಅರಭಿ, ಮೋಹನ, ಆನಂದಭೈರವಿ, ಹಿಂದೋಳ, ಪಂತುವರಾಳಿ, ಭೀಂಪಲಾಸ್ ರಾಗಗಳಲ್ಲಿ ಅಪಾರ ಸಿದ್ಧಿ ಹೊಂದಿದ್ದರು. ಉತ್ತಮ ಸ್ಮರಣ ಶಕ್ತಿ, ಛಂದಸ್ಸು, ರಾಗ, ತಾಳಗಳ ಕುರಿತು ಆಳವಾದ ಜ್ಞಾನ ಹಾಗೂ ರಂಗದ ನಡೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.