ದಾವಣಗೆರೆ: ರಾಜ್ಯದಲ್ಲಿ ಬರುವ ಸೆಪ್ಟೆಂಬರ್ 7ರಂದು ಗೌರಿ, ಗಣೇಶ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶನ ವಿಗ್ರಹ ತಯಾರಿಕೆ ಮತ್ತು ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹಬ್ಬದ ದಿನಗಳಲ್ಲಿ ಧ್ವನಿವರ್ಧಕ, ಡೋಲು, ತಮಟೆ, ಜಾಗಟೆ, ಹಸಿರು ಪಟಾಕಿಯನ್ನು ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಬಳಸಬಾರದು. ರಸ್ತೆ ಮತ್ತು ಚರಂಡಿಗಳಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆಗಳನ್ನು ಎಸೆಯದೆ ಮನೆ ಹತ್ತಿರ ಬರುವ ಸ್ಥಳೀಯ ಸಂಸ್ಥೆಗಳ ಕಸದ ವಾಹನಗಳಿಗೆ ನೀಡಬೇಕು.
ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಹಸಿ ಕಸದಲ್ಲಿ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಮೊದಲಾದವನ್ನು ಪ್ರತ್ಯೇಕಿಸಿ, ಮೂರ್ತಿಗಳೊಂದಿಗೆ ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಸಂಚಾರಿ ತೊಟ್ಟಿಗಳಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ತಿಳಿಸಿದ್ದಾರೆ.