More

    ಜಿಲ್ಲೆಯಲ್ಲಿ ಪಿಒಪಿ ಗಣಪಮೂರ್ತಿ ತಯಾರಿಕೆ ಅಬಾಧಿತ!

    ಕಡಿವಾಣಕ್ಕೆ ಮುಂದಾಗದ ಜಿಲ್ಲಾಡಳಿತ

    ಪರಿಸರ ಸ್ನೇಹಿ ಮೂರ್ತಿಗಳ ತಯಾರಕರಿಗೆ ಸವಾಲು


    ವಿಜಯವಾಣಿ ವಿಶೇಷ ಬೆಂಗಳೂರು ಗ್ರಾಮಾಂತರ
    ಗಣೇಶ ಹಬ್ಬ ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟರ್ ಆ್ ಪ್ಯಾರೀಸ್(ಪಿಒಪಿ) ಗಣೇಶ ಮೂರ್ತಿಗಳ ತಯಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ ಮೌನವಾಗಿರುವುದು ಪಿಒಪಿ ಮೂರ್ತಿ ತಯಾರಿಕರಿಗೆ ಅಂಕುಶವಿಲ್ಲದಂತಾಗಿದೆ.
    ರಾಜ್ಯ ಮಾಲಿನ್ಯ ನಿಯಂತ್ರಣದ ಮಂಡಳಿ ಸಲಹೆಯಂತೆ ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ನಿಷೇಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ, ಗ್ರಾಮಾಂತರ ಜಿಲ್ಲೆಯಲ್ಲಿ ಇದ್ಯಾವುದೇ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ. ಈ ಬಾರಿಯ ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆ್ ಪ್ಯಾರೀಸ್ ಗಣಪ ಮೂರ್ತಿಗಳ ಅಬ್ಬರಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.
    ಜಿಲ್ಲಾಡಳಿತ ಮೌನ: ನೀರಿನಲ್ಲಿ ಕರಗದ ಹಾಗೂ ನೀರು ಹಾಗೂ ಜಲಚರಗಳಿಗೆ ಮಾರಕವಾಗುವ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಕಳೆದೆರಡು ವರ್ಷದಿಂದ ಸಾಕಷ್ಟು ಕಡಿವಾಣ ಹಾಕಲಾಗಿತ್ತು. ಜಿಲ್ಲಾಡಳಿತವೂ ಪರಿಸರ ಸ್ನೇಹಿ ಗಣೇಶನ ಆರಾಧನೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಗಣೇಶನ ಆರಾಧಕರೂ ಕಳೆದೆರಡು ವರ್ಷ ಪರಿಸರ ಸ್ನೇಹಿ ಗಣಪನ ಆರಾಧನೆಗೆ ಉತ್ಸುಕತೆ ವ್ಯಕ್ತಪಡಿಸಿದ್ದರು. ಇದರ ಜತೆಗೆ ಕೆಲವೊಂದು ಸಂಘ-ಸಂಸ್ಥೆಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಅರಿವು ಮೂಡಿಸಿದ್ದವು. ಆದರೆ ಈ ಬಾರಿ ಗಣೇಶೋತ್ಸವ ಸಮೀಪಿಸುತ್ತಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಎಲ್ಲಿಯೂ ತುಟಿ ಬಿಚ್ಚುತ್ತಿಲ್ಲ. ಇದರ ಲಾಭ ಪಡೆಯುತ್ತಿರುವ ಪಿಒಪಿ ತಯಾರಕರು ಸುಮಾರು 5 ಅಡಿಯಿಂದ 15 ಅಡಿಗಳಷ್ಟು ಎತ್ತರದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಶೇ.60 ಇಂಥ ಗಣೇಶ ಮೂರ್ತಿಗಳು ಸಿದ್ಧಗೊಂಡಿದ್ದು, ಗ್ರಾಮೀಣ ಭಾಗದಲ್ಲಿನ ಸಾರ್ವಜನಿಕ ಗಣೇಶೋತ್ಸವ ಆಯೋಜಕರಿಂದ ಮುಂಗಡ ಬುಕಿಂಗ್ ಮಾಡಿಕೊಂಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.
    ಅವಶೇಷಗಳಿಂದ ಧಾರ್ಮಿಕತೆಗೆ ಧಕ್ಕೆ: ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮಿತಿಮೀರಿದ ಪಿಒಪಿ ಗಣೇಶಮೂರ್ತಿಗಳ ಮಾರಾಟ ಕಂಡುಬಂದಿತ್ತು. ಗಣೇಶೋತ್ಸವ ಬಳಿಕ ಕೆರೆಕುಂಟೆಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿತ್ತು. ಇದಾದ ಕೆಲವು ದಿನಗಳ ಬಳಿಕ ಸ್ಥಳೀಯ ಸಂಸ್ಥೆಗಳು ನೀರಿನಲ್ಲಿ ಕರಗದ ಪಿಒಪಿ ಮೂರ್ತಿಗಳನ್ನು ಎಳೆದು ಕೆರೆಕುಂಟೆ ದಡಗಳಲ್ಲಿ ಎಸೆಯುತ್ತಿದ್ದರು. ಇಂಥ ಮೂರ್ತಿಗಳ ತ್ವರಿತ ವಿಲೇವಾರಿಯೂ ಆಗುತ್ತಿರಲಿಲ್ಲ. ತಿಂಗಳುಗಟ್ಟಲೆ ಕೈಕಾಲು ಮುರಿದ, ಸೊಂಡಿಲು ಕಳೆದುಕೊಂಡ ಹೀಗೆ ನಾನಾ ಬಗೆಯಲ್ಲಿ ಮುಕ್ಕಾದ ಗಣೇಶ ಮೂರ್ತಿಗಳು ಕೆರೆದಂಡೆಗಳಲ್ಲಿ ಅನಾಥವಾಗಿ ಬಿದ್ದಿರುತ್ತಿದ್ದ ದೃಶ್ಯಗಳು ಕಂಡುಬರುತ್ತಿದ್ದವು. ಇದು ಸಹಜವಾಗಿಯೇ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಬಾರಿಯೂ ಇಂಥದೇ ಸನ್ನಿವೇಶ ನಿರ್ಮಾಣವಾಗಬಹುದು ಎಂಬ ಪರಿಸ್ಥಿತಿ ಎದುರಾಗಿದೆ.
    ಮಹಾರಾಷ್ಟ್ರದಿಂದ ಆಮದು: ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ಭಾಗದ ಟೋಲ್‌ಗಳ ಸಮೀಪದಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿ ಜೋರಾಗಿ ನಡೆಯುತ್ತಿದೆ. ಮಹಾರಾಷ್ಟ್ರ ಭಾಗದಿಂದ ಮೂರ್ತಿಗಳ ನಿರ್ಮಾಣಕ್ಕೆ ಬೇಕಾದ ಅಚ್ಚು ಮತ್ತಿತರ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆಯಾ ತಾಲೂಕು ಆಡಳಿತ ಅಧಿಕಾರಿಗಳು ಒಮ್ಮೆ ಕಣ್ಣು ಹಾಯಿಸಿದರೆ ಇದಕ್ಕೆ ಕಡಿವಾಣ ಹಾಕಬಹುದು ಎಂಬುದು ಪರಿಸರ ಪ್ರೇಮಿಗಳ ಸಲಹೆಯಾಗಿದೆ.
    ಮಣ್ಣಿನ ಗಣಪ ತಯಾರಿಕರಿಗೆ ಸಂಕಷ್ಟ ವಂಶಪಾರ್ಯಂಪರ್ಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ವೃತ್ತಿ ಮಾಡಿಕೊಂಡು ಬರುತ್ತಿರುವ ಹಲವರು ಪಿಒಪಿ ತಯಾರಿಕರ ಅಬ್ಬರಕ್ಕೆ ಹೆದರಿಹೋಗಿದ್ದಾರೆ. ಈಗಾಗಲೇ ಜೇಡಿಮಣ್ಣು, ಪರಿಸರ ಸ್ನೇಹಿ ಬಣ್ಣ ಖರೀದಿಗೆ ಲಕ್ಷಾಂತರ ರೂ.ಖರ್ಚು ಮಾಡಿರುವ ಇವರು ಆರ್ಥಿಕ ಸಂಕಷ್ಟ ಎದುರಿಸುವ ಆತಂಕ ಎದುರಿಸುವಂತಾಗಿದೆ. ಸಾಮಾನ್ಯವಾಗಿ 1 ರಿಂದ 3 ಅಥವಾ 5 ಅಡಿಗಳಷ್ಟು ಎತ್ತರದ ಮಣ್ಣಿನ ಗಣಪ ಮಾಡುವ ತಯಾರಿಕರು ಮೂರ್ತಿಗಳು ಬಿಕರಿಯಾಗುತ್ತವೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.


    ಪಿಒಪಿ ಗಣೇಶಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಿದ್ದರೂ ಈಗಾಗಲೇ ಹಲವು ಕಡೆಗಳಲ್ಲಿ ಪಿಒಪಿ ಗಣೇಶ ತಯಾರಿಕೆ ಜೋರಾಗಿಯೇ ನಡೆಯುತ್ತಿದೆ. ಈ ಹಿಂದೆ ಕದ್ದುಮುಚ್ಚಿ ನಡೆಯುತ್ತಿದ್ದ ತಯಾರಿಕೆ ಈ ಬಾರಿ ರಾಜಾರೋಷವಾಗಿಯೇ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ.
    ಆರ್.ಎನ್.ಗಿರೀಶ್ದೊ ಡ್ಡಬಳ್ಳಾಪುರ

    ತಲೆತಲಾಂತಗಳಿಂದಲೂ ಮಣ್ಣಿನ ಗಣಪ ಮೂರ್ತಿ ತಯಾರಿಸಿಕೊಂಡೇ ಬರುತ್ತಿದ್ದೇವೆ, ಆದರೆ ಪಿಒಪಿ ಗಣೇಶ ಮೂರ್ತಿಗಳ ಅಬ್ಬರದಲ್ಲಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ ಜೇಡಿಮಣ್ಣು, ರಾಸಾಯನಿಕರಹಿತ ಬಣ್ಣ ಸೇರಿ ಪರಿಕರಗಳು ದುಬಾರಿಯಾಗಿವೆ. ಇದರ ನಡುವೆ ಪಿಒಪಿ ಮೂರ್ತಿ ತಯಾರಿಕೆ ನಮ್ಮನ್ನು ಸಾಲದ ಸುಳಿಗೆ ಸಿಲುಕಿಸಲಿದೆ.
    ಪವನ್‌ಕುಮಾರ, ದೇವನಹಳ್ಳಿ ಗಣೇಶ ಮೂರ್ತಿ ತಯಾರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts