ಸೋಮವಾರಪೇಟೆ: ಪ್ರತಿ ಮನೆಗೆ ನೀರು ಎಂಬಂತೆ ಜಲಜೀವನ್ ಮಿಷನ್ ಅಡಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕುಡಿಯುವ ನೀರು ಸರಬರಾಜು ಯೋಜನೆ ಕಳಪೆ ಕಾಮಗಾರಿಯಿಂದ ಸಂಪೂರ್ಣ ಹಳ್ಳ ಹಿಡಿದಿದೆ ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಅರೋಪಿಸಿದರು.
ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಜಲಜೀವನ್ ಯೋಜನೆ ಎಂಬುದೇ ಅತಿ ದೊಡ್ಡ ಕಳಪೆ ಯೋಜನೆಯಾಗಿದೆ ಎಂದು ಬಹುತೇಕ ಸದಸ್ಯರು ಮತ್ತು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ಕಡೆ ಕೊಳವೆ ಬಾವಿ ಕೊರೆಸಿಲ್ಲ. ಹೊಸ ಪೈಪ್‌ಲೈನ್ ಮಾಡದೆ ಹಳೇ ಪೈಪ್‌ಲೈನ್‌ಗಳಿಗೆ ಸಂಪರ್ಕ ಕೊಟ್ಟಿದ್ದಾರೆ. ಅಳವಡಿಸಿರುವ ಮೀಟರ್ ಮಣ್ಣು ಪಾಲಾಗಿದೆ. ಕಾಮಗಾರಿ ವೆಚ್ಚದ ಬೋರ್ಡ್ ಹಾಕಿ ಫೋಟೋ ತೆಗೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಹಣ ಮಾಡುತ್ತಿದ್ದಾರೆ ಎಂದು ಗೋಪಾಲಕೃಷ್ಣ, ಸದಸ್ಯ ಶಂಕರ್ ಅರೋಪಿಸಿದರು.
ಒಳಗುಂದ ಗ್ರಾಮದಲ್ಲಿ ಟ್ಯಾಂಕ್ ನಿರ್ಮಾಣ ಮಾಡಿಲ್ಲ ಎಂದು ಸದಸ್ಯ ಅನುಕುಮಾರ್ ದೂರಿದರು. ಅಂದಾಜುಪಟ್ಟಿಯಲ್ಲಿ ಕೊಳವೆ ಬಾವಿ ಸೇರಿದೆ. ಆದರೆ ಕೆಲ ಕಡೆ ಕೊಳವೆ ಬಾವಿ ನಿರ್ಮಿಸಿಲ್ಲ ಎಂದು ಸದಸ್ಯರಾದ ರುದ್ರಪ್ಪ, ಬಿಂದು, ಪ್ರಮೀಳಾ ದೂರಿದರು.
ಯೋಜನೆಯಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ಅನುಮಾನ ಬಂದಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿರಬಹುದು. ಬೇಸಿಗೆ ತೀವ್ರವಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಲಿದ್ದು, ಮುಂದಿನ ಹದಿನೈದು ದಿನಗಳ ಒಳಗೆ ಜಲಜೀವನ್ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡು ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಅಧ್ಯಕ್ಷರು, ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಕೀರ್ತನ್ ಅವರಿಗೆ ಸೂಚಿಸಿದರು. ಕಾಮಗಾರಿಯಲ್ಲಿ ಲೋಪಗಳಿದ್ದರೆ ಸರಿಪಡಿಸಲಾಗುವುದು. ಶೇ.25 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿಲ್ಲ ಎಂದು ಕಿರ್ತನ್ ಸ್ಪಷ್ಟನೆ ನೀಡಿದರು.
ಕೆಳಗಿನ ಕಾಗಡೀಕಟ್ಟೆ ಜಂಕ್ಷನ್‌ನಲ್ಲಿ ಕೋಳಿ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಪರಿಸರ ಗಬ್ಬೆದ್ದು ನಾರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಮಾಂಸದ ಮಳಿಗೆಯ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಲಾಗುವುದು ಎಂದು ಪಿಡಿಒ ಸ್ಮಿತಾ ಸಭೆಯ ಗಮನಕ್ಕೆ ತಂದರು.
ಬಿಸಿಲ ಬೇಗೆ ಜಾಸ್ತಿಯಾಗುತ್ತಿರುವುದರಿಂದ ಮಧ್ಯಾಹ್ನದ ಸಂದರ್ಭ ರೈತರು ತೋಟ ಗದ್ದೆಗಳಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಬೇಕು. ಚರ್ಮರೋಗ ಬಾಧಿಸಬಹುದು, ಪಾರ್ಶ್ವವಾಯುಗೆ ತುತ್ತಾಗಬಹುದು. ಕಾರ್ಮಿಕರು ನೆರಳಿನಲ್ಲೇ ಕೆಲಸ ಮಾಡಬೇಕು ಎಂದು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಪಾರ್ವತಿ ಹೇಳಿದರು.
ಮಕ್ಕಳಲ್ಲಿ ಕಾಲುಬಾಯಿ ರೋಗ ಹರಡುವ ಸೂಚನೆ ಇದೆ. ಹಿಂದೆ ಜಾನುವಾರುಗಳಿಗೆ ಮಾತ್ರ ಬರುತ್ತಿತ್ತು. ಈಗ ಮಕ್ಕಳಿಗೂ ಬರುತ್ತಿದೆ. ಜ್ವರ, ನಾಲಿಗೆ, ಗಂಟಲು ಕೆರೆತ, ಅಂಗೈ, ಅಂಗಾಲುಗಳಲ್ಲಿ ಚಿಕ್ಕ ಗಂಟುಗಳು ಕಾಣಿಸಿಕೊಂಡರೆ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆತರಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಕಳ್ಳಬಟ್ಟಿ ಕಾಯಿಸುವುದು ಕಂಡರೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಪೇದೆ ವೀಣಾ ಹೇಳಿದರು. ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯವರು ಮಾಮೂಲಿ ಪಡೆದುಕೊಂಡು ಸುಮ್ಮನಾಗುತ್ತಾರೆ. ದೂರು ನೀಡಿದವರ ಹೆಸರನ್ನೂ ಅಕ್ರಮ ಮದ್ಯ ಮಾರಾಟಗಾರರಿಗೆ ತಿಳಿಸುತ್ತಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಕಾನೂನು ಪಾಲನೆ ಕಷ್ಟ ಎಂದು ಗ್ರಾಮಸ್ಥರಾದ ದಿವಾಕರ್, ಅನುಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಕಾಳುಮೆಣಸು ಕೊಯ್ಯುವ ಸಂದರ್ಭದಲ್ಲಿ ಫೈಬರ್ ಏಣಿಗಳನ್ನು ಬಳಸಬೇಕು. ಕಬ್ಬಿಣದ ಏಣಿಗಳನ್ನು ಬಳಸಲೇಬಾರದು ಎಂದು ಸೆಸ್ಕ್ ಜೆಇ ಲೋಕೇಶ್ ಗ್ರಾಮಸ್ಥರಿಗೆ ಸೂಚಿಸಿದರು. ಅನಾಹುತವಾದರೆ ತೋಟದ ಮಾಲೀಕರೆ ಹೊಣೆಯಾಗಬೇಕಾಗುತ್ತದೆ. ಕಳೆದ ವರ್ಷ ಕೊಡಗಿನಲ್ಲಿ ಕಬ್ಬಿಣದ ಏಣಿಗಳಿಂದ ವಿದ್ಯುತ್ ಸ್ಪರ್ಶಗೊಂಡು 7 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷೆ ರಶೀದಾ, ನೋಡೆಲ್ ಅಧಿಕಾರಿ ರಾಕೇಶ್ ಇದ್ದರು.