ನಗರಕ್ಕೆ ಆಗಮಿಸಿದ ಕಳಸ

ಮೈಸೂರು: ಜನರಲ್ಲಿ ದೇಶಾಭಿಮಾನ ಮೂಡಿಸಲು ಬೆಂಗಳೂರಿನ ಸಿಟಿಜನ್ ಸೊಸೈಟಿ ಆಫ್ ಇಂಡಿಯಾ ಹಮ್ಮಿಕೊಂಡಿರುವ ‘ಶ್ರದ್ಧಾ ಸುಮನ್ ಶ್ರದ್ಧಾಂಜಲಿ’ ಕಳಸ ಶನಿವಾರ ನಗರಕ್ಕೆ ಆಗಮಿಸಿತು.

ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಪ್ರಯುಕ್ತ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಕಳಸ ದೇಶದ ವಿವಿಧೆಡೆ ಸಂಚರಿಸಲಿದೆ. ನಗರದಲ್ಲಿ ಶನಿವಾರ ಮಹಾನಗರ ಪಾಲಿಕೆ ಆವರಣ ಮತ್ತು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳಸಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಕ್ಯಾಪ್ಟನ್ ಎಸ್.ಸಿ. ಭಂಡಾರಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಲು ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಇದರಿಂದ ದೇಶದ ಜನರಲ್ಲಿ ಮತ್ತಷ್ಟು ದೇಶಭಕ್ತಿ ಮೂಡುತ್ತದೆ. ಈ ಕಳಸ ಯಾತ್ರೆಯು ಜು.26ರಂದು ದೆಹಲಿಯ ಇಂಡಿಯಾ ಗೇಟ್ ತಲುಪಲಿದ್ದು, ಜು.27ರಂದು ದೆಹಲಿಯ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಳಸ ಇರಿಸಲಾಗುವುದು ಎಂದರು.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ, ಸಿಟಿಜನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಬಿ.ಪಿ. ಶಿವಕುಮಾರ್, ದಿನೇಶ್, ಶೇಷಾದ್ರಿ, ನಾರಾಯಣ, ಬಾಬು, ಮೋಹನ್ ಇತರರು ಇದ್ದರು.

Leave a Reply

Your email address will not be published. Required fields are marked *